ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಭೇಟಿ: ಸಿದ್ಧತೆ ಜೋರು- 12ರಂದು ಚಾಮರಾಜನಗರ, ಮಹದೇಶ್ವರ ಬೆಟ್ಟಕ್ಕೆ ಭೇಟಿ

12ರಂದು ಚಾಮರಾಜನಗರ, ಹನೂರು ಮಹದೇಶ್ವರ ಬೆಟ್ಟಕ್ಕೆ ಭೇಟಿ
Last Updated 9 ಡಿಸೆಂಬರ್ 2022, 22:45 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಿಲ್ಲಾ ಭೇಟಿಗೆ ಜಿಲ್ಲಾಡಳಿತ ಸಿದ್ಧತೆಯನ್ನು ಭರ್ಜರಿಯಾಗಿ ನಡೆಸುತ್ತಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ, ಪೆಂಡಾಲ್‌ ಹಾಕಲಾಗುತ್ತಿದೆ.

ನಗರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಗರಸಭೆ ತೊಡಗಿದ್ದು, ನಗರವನ್ನು ಸಂರ್ಪಕಿಸುವ ನಾಲ್ಕು ಹೆದ್ದಾರಿಗಳಲ್ಲೂ ಇರುವ ಸ್ವಾಗತ ಕಮಾನುಗಳಲ್ಲಿ ಜಾನಪದ ಕಲೆಯ ತವರೂರಿಗೆ ಸ್ವಾಗತ ಎಂಬ ಫಲಕ ಅಳವಡಿಸುತ್ತಿದೆ.

‌ಇದೇ 12ರಂದು ಚಾಮರಾಜನಗರ, ಹನೂರು ಹಾಗೂ ಮಹದೇಶ್ವರ ಬೆಟ್ಟಕ್ಕೆ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ₹1,000 ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಅವರು ನೀಡುತ್ತಿರುವ ಎರಡನೇ ಭೇಟಿ ಇದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಗವಹಿಸಿದ್ದರು.

12ರಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಆರಂಭಿಸಲಿರುವ ಬೊಮ್ಮಾಯಿ ಅವರು 10.30ಕ್ಕೆ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಬಂದಿಳಿಯುವರು. ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವರು. ಬಳಿಕ ಹೆಲಿಕಾಪ್ಟರ್‌ ಮೂಲಕ ಹನೂರಿಗೆ ತೆರಳಲಿದ್ದು, ಅಲ್ಲಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುವರು. ಅಲ್ಲಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ, ಸಂಜೆ 5.25ಕ್ಕೆ ಬೆಂಗಳೂರಿಗೆ ತೆರಳುವರು.

ಬೃಹತ್‌ ಪೆಂಡಾಲ್‌: ಚಾಮರಾಜನಗರದ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಬೃಹತ್‌ ವೇದಿಕೆ ಹಾಗೂ ಪೆಂಡಾಲ್‌ ಹಾಕಲಾಗುತ್ತಿದೆ. 25 ಸಾವಿರ ಮಂದಿ ಕುಳಿತುಕೊಳ್ಳುವಷ್ಟು ಸಾಮರ್ಥ್ಯದ ಜಲ ನಿರೋಧಕ ಪೆಂಡಾಲ್‌ ಹಾಕುವ ಕಾರ್ಯ ವಾರದಿಂದ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕೆಸರು ಮಯವಾಗಿದ್ದ ಕ್ರೀಡಾಂಗಣಕ್ಕೆ ಮಣ್ಣು ಹಾಕಿ ಸಮತಟ್ಟುಗೊಳಿಸಿ, ನೀರು ಬಸಿದು ಹೋಗಲು ಸುತ್ತಲೂ ಚರಂಡಿ ನಿರ್ಮಿಸಿ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲಾಗಿದೆ. ಹನೂರು ಕ್ರೀಡಾಂಗಣದಲ್ಲೂ ಬೃಹತ್‌ ವೇದಿಕೆ, ಶಾಮಿಯಾನ ನಿರ್ಮಿಸಲಾಗುತ್ತಿದೆ.

ಬಿಜೆಪಿ ಮುಖಂಡರಲ್ಲಿ ಉತ್ಸಾಹ: ಮುಖ್ಯಮಂತ್ರಿಯವರು ಜಿಲ್ಲೆಗೆ ಭೇಟಿ ನೀಡುತ್ತಿರುವುದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತಂದಿದೆ.

‘ಮೌಢ್ಯಕ್ಕೆ ಜೋತು ಬಿದ್ದು ಮುಖ್ಯಮಂತ್ರಿ ಚಾಮರಾಜನಗರಕ್ಕೆ ಬರುತ್ತಿಲ್ಲ ಎಂಬ ಆರೋಪಗಳನ್ನು ನಿರಂತರವಾಗಿ ವಿರೋಧ ಪಕ್ಷಗಳ ಮುಖಂಡರು ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಎರಡನೇ ಬಾರಿಗೆ ಸಿ.ಎಂ. ನಗರಕ್ಕೆ ಬರುತ್ತಿದ್ದಾರೆ. ಚಾಮರಾಜನಗರ, ಹನೂರು ಕ್ಷೇತ್ರಗಳಲ್ಲಿ ಪಕ್ಷದ ಶಾಸಕರು ಇಲ್ಲದಿದ್ದರೂ, ಅಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ’ ಎಂದು ಹೇಳುತ್ತಾರೆ ಮುಖಂಡರು ಹಾಗೂ ಕಾರ್ಯಕರ್ತರು.

ವಿವಿಧ ಸಚಿವರು ಭಾಗಿ: 12ರಂದು ಮುಖ್ಯಮಂತ್ರಿ ಅವರೊಂದಿಗೆ ಹಲವು ಸಚಿವರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಲ್ಲದೆ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪಾಲ್ಗೊಳ್ಳಲಿದ್ದಾರೆ. ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ವಿ.ಶ್ರೀರಾಮುಲು ಅವರು ಕೂಡ ಭಾಗವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಗೆ ಕಾಯಕಲ್ಪ ನೀಡಬೇಕಿದೆ: ಸೋಮಣ್ಣ

ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿ ಜಿಲ್ಲೆಗೆ ಬಂದಾಗ, ಮುಖ್ಯಮಂತ್ರಿ ಅವರನ್ನು ಜಿಲ್ಲೆಗೆ ಕರೆದುಕೊಂಡು ಬರುವುದಾಗಿ ಹೇಳಿದ್ದರು.

ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವುದರ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಜಿಲ್ಲೆ ಆಗಿ 25 ವರ್ಷಗಳಾಗಿವೆ. ಕೆ.ಎಚ್‌.ಪಟೇಲರು ಜಿಲ್ಲೆ ಉದ್ಘಾಟನೆ ಮಾಡಿದಾಗ ನಾನೂ ಅವರ ಸಚಿವ ಸಂಪುಟದಲ್ಲಿದೆ. ಈ ಹಿಂದೆ ನಾನು ಉಸ್ತುವಾರಿ ಸಚಿವನಾಗಿದ್ದಾಗ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ ಅವರನ್ನು ಕರೆದುಕೊಂಡು ಬಂದಿದ್ದೆ. ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಆಗ ನಡೆದಿದ್ದವು. ಈಗ ಬೊಮ್ಮಾಯಿ ಅವರನ್ನು ಕರೆದುಕೊಂಡು ಬರುತ್ತಿದ್ದೇನೆ. ಜಿಲ್ಲೆಗೆ ಕಾಯಕಲ್ಪ ನೀಡಬೇಕಿದೆ. ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.

ಸಿಂಥೆಟಿಕ್‌ ಟ್ರ್ಯಾಕ್‌ ಮೈದಾನದಲ್ಲಿ ಹೆಲಿಪ್ಯಾಡ್‌!

ಬಸವರಾಜ ಬೊಮ್ಮಾಯಿ ಅವರು 12ರಂದು ಹೆಲಿಕಾಪ್ಟರ್‌ ಮೂಲಕ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣಕ್ಕೆ ಬಂದಿಳಿಯಲಿದ್ದಾರೆ. ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಕ್ರೀಡಾ ತರಬೇತುದಾರರು, ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಲಿಕಾಪ್ಟರ್‌ ಇಳಿಯುವ ಜಾಗದಲ್ಲಿ ಟ್ರ್ಯಾಕ್‌ ಇಲ್ಲದಿದ್ದರೂ, ಮುಖ್ಯಮಂತ್ರಿ ಬಂದಿಳಿಯುವಾಗ ಜನಪ್ರತಿನಿಧಿಗಳು, ಅಧಿಕಾರಿಗಳು, ಬೆಂಬಲಿಗರು ಅವರನ್ನು ಸ್ವಾಗತಿಸಲು ಹೆಲಿಕಾಪ್ಟರ್‌ ಬಳಿಗೆ ತೆರಳುತ್ತಾರೆ. ಒಂದು ವೇಳೆ ವಾಹನಗಳೂ ಓಡಾಡಿದರೆ ಟ್ರ್ಯಾಕ್‌ ಹಾಳಾಗಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಸಿಂಥೆಟಿಕ್‌ ಟ್ರ್ಯಾಕ್‌ ಮೈದಾನದಲ್ಲಿ ಹೆಲಿಪ್ಯಾಡ್‌ ನಿರ್ಮಿಸಿರುವುದು ತಪ್ಪು ನಿರ್ಧಾರ. ಹೆಚ್ಚು ಜನರು ಓಡಾಡಿದರೆ, ವಾಹನಗಳು ಸಂಚರಿಸಿದರೆ ಖಂಡಿತವಾಗಿಯೂ ಅದು ಹಾಳಾಗಲಿದೆ’ ಎಂದು ಕ್ರೀಡಾ ತರಬೇತುದಾರ ಶಿವು ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು, ‘ಟ್ರ್ಯಾಕ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಟ್ರ್ಯಾಕ್‌ ಸುತ್ತಲೂ ತಡೆ ಬೇಲಿ ಇದೆ. ಹಾಗಾಗಿ, ಜನರು ಓಡಾಡುವುದಕ್ಕೆ ಅವಕಾಶ ಇಲ್ಲ. ಅಲ್ಲಿ ವಾಹನಗಳೂ ಸಾಗುವುದಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವರು ಹೆಲಿಕಾಪ್ಟರ್‌ನಿಂದ ಉಳಿದು ಟ್ರ್ಯಾಕ್‌ನ ಅಂಚಿನವರೆಗೂ ನಡೆದುಕೊಂಡು ಬರಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಸಿ.ಎಂ ಜಿಲ್ಲೆಗೆ ಬಂದು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿರುವುದು ಖುಷಿ ತಂದಿದೆ. ಸಚಿವ ಸೋಮಣ್ಣ ಪ್ರಯತ್ನದಿಂದ ಇದು ಸಾಧ್ಗವಾಗಿದೆ.ಪಕ್ಷಕ್ಕೂ ಅನುಕೂಲವಾಗಲಿದೆ
ಆರ್‌.ಸುಂದರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಸಿ.ಎಂ ಜಿಲ್ಲೆಗೆ ಬಂದು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿರುವುದು ಖುಷಿ ತಂದಿದೆ. ಸಚಿವ ಸೋಮಣ್ಣ ಪ್ರಯತ್ನದಿಂದ ಇದು ಸಾಧ್ಗವಾಗಿದೆ.ಪಕ್ಷಕ್ಕೂ ಅನುಕೂಲವಾಗಲಿದೆ
ಆರ್‌.ಸುಂದರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT