ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಅಲೆ: 1,152 ಹಾಸಿಗೆ, 58 ವೆಂಟಿಲೇಟರ್‌

26 ಸಾವಿರ ಲೀಟರ್‌ ಆಮ್ಲಜನಕ ಸಂಗ್ರಹ ಸಾಮರ್ಥ್ಯ; ಕೋವಿಡ್‌ ಹರಡುವಿಕೆ ತಡೆಗೆ ಜಿಲ್ಲಾಡಳಿತದ ಸಿದ್ಧತೆ
Last Updated 5 ಜನವರಿ 2022, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೋವಿಡ್‌ 3ನೇ ಅಲೆ ಆರಂಭವಾಗಿರುವ ಬೆನ್ನಲ್ಲೇ, ಜಿಲ್ಲೆಯಲ್ಲೂ ಸೋಂಕು ಹರಡುವಿಕೆ ತಡೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಎರಡನೇ ಅಲೆಯಲ್ಲಿ ಸಂಭವಿಸಿರುವ ಆಮ್ಲಜನಕ ದುರಂತ ಹಾಗೂ ಸಾವು–ನೋವುಗಳಿಂದ ಎಚ್ಚೆತ್ತಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಾರಿ ಅಂತಹ ಯಾವುದೇ ಘಟನೆಗಳಿಗೂ ಅವಕಾಶ ಕೊಡಬಾರದು ಎಂಬ ಉದ್ದೇಶದಿಂದ ಸೋಂಕಿತರ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಸೇರಿದಂತೆ ಎಂಟು ಸರ್ಕಾರಿ ಆಸ್ಪತ್ರೆ ಹಾಗೂ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಪೈಕಿ ಮೂರು ಹೋಬಳಿ ಮಟ್ಟದ ಆಸ್ಪತ್ರೆಗಳು (ಕಬ್ಬಳ್ಳಿ, ಬೇಗೂರು, ರಾಮಾಪುರ).ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂಬ ತಜ್ಞರ ಅಭಿಪ್ರಾಯದ ಕಾರಣಕ್ಕೆ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ 1,152 ಹಾಸಿಗೆ ನಿಗದಿಪಡಿಸಲಾಗಿದೆ. ಈ ಪೈಕಿ 1,024 ಹಾಸಿಗೆಗಳಿಗೆ ಆಮ್ಲಜನಕದ ಸೌಲಭ್ಯ ಇದೆ. ಇವುಗಳಲ್ಲಿ 688 ಬರಿ ಆಮ್ಲಜನಕ, 142 ಐಸಿಯು, 58 ವೆಂಟಿಲೇಟರ್‌ ಸಹಿತ ಹಾಸಿಗೆಗಳು ಸೇರಿವೆ.

ಮಕ್ಕಳ ಚಿಕಿತ್ಸೆಗಾಗಿ 80 ಹಾಸಿಗೆ ಗುರುತಿಸಲಾಗಿದೆ. ಈ ಪೈಕಿ 49 ಐಸಿಯು ಹಾಸಿಗೆಗಳು, 24 ಆಮ್ಲಜನಕ ಸಹಿತ ಹಾಸಿಗೆಗಳು ಹಾಗೂ ಎರಡು ವೆಂಟಿಲೇಟರ್‌ಗಳಿವೆ.

ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್‌ನ ಆಮ್ಲಜನಕ ಸಂಗ್ರಹ ಘಟಕ ಇದೆ. ಯಡಬೆಟ್ಟದಲ್ಲಿರುವ ಹೊಸ ಬೋಧನಾ ಆಸ್ಪತ್ರೆಯಲ್ಲಿ 20 ಸಾವಿರ ಲೀಟರ್‌ನ ಆಮ್ಲಜನಕ ಸಂಗ್ರಹ ಘಟಕ ಇದೆ. ಆಮ್ಲಜನಕವನ್ನು ಸಂಗ್ರಹಿಸಿಟ್ಟುಕೊಳ್ಳುವ 792 ಜಂಬೊ ಸಿಲಿಂಡರ್‌ಗಳಿವೆ. 297 ‘ಬಿ‌’ ಮಾದರಿಯ ಸಿಲಿಂಡರ್‌ಗಳಿವೆ. 564 ಆಮ್ಲಜನಕ ಸಾಂದ್ರಕಗಳಿವೆ.

ಮುನ್ನೆಚ್ಚರಿಕೆ ಕ್ರಮಕ್ಕೆ ಒತ್ತು: ‘ಜಿಲ್ಲಾಡಳಿತವು ಕೋವಿಡ್‌ ಎದುರಿಸಲು ಸಿದ್ಧತೆ ನಡೆಸುವುದರ ಜೊತೆಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲು ಒತ್ತು ನೀಡಿದೆ. ಲಸಿಕಾಕರಣಕ್ಕೆ ಆದ್ಯತೆ ನೀಡಿದ್ದೇವೆ. ಮೊದಲ ಡೋಸ್‌ ಲಸಿಕಾಕರಣ ಶೇ 98 ಆಗಿದೆ. ಎರಡನೇ ಡೋಸ್‌ ಲಸಿಕೆಯನ್ನು ಶೇ 78 ಮಂದಿಗೆ ನೀಡಿದ್ದೇವೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದ್ದು, ಶೇ 44 ಮಕ್ಕಳಿಗೆ ನೀಡಲಾಗಿದೆ. ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ಜಿಲ್ಲೆ ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ನಿಯಮಗಳ ಪಾಲನೆ ಬಗ್ಗೆ ಜನ ಜಾಗೃತಿ ಮೂಡಿಸಲು ಗಮನ ಹರಿಸಿದ್ದೇವೆ. ಸಿಬ್ಬಂದಿಗೆ ಚಿಕಿತ್ಸಾ ವಿಧಾನಗಳ ಬಗ್ಗೆ ತರಬೇತಿ ನೀಡುವುದು, ಔಷಧಗಳ ದಾಸ್ತಾನು ಸೇರಿದಂತೆ ಎಲ್ಲ ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ವಿವರಿಸಿದರು.

ಆರಂಭವಾಗಿಲ್ಲ ಆಮ್ಲಜನಕ ಉತ್ಪಾದನಾ ಘಟಕ

ಎರಡನೇ ಅಲೆಯಲ್ಲಿ ಆಮ್ಲಜನಕ ಕೊರತೆ ಕಾಡಿದ ನಂತರ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿತ್ತು. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿಯಿಂದ, ದಾನಿಗಳ ನೆರವಿನಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಆದರೆ, ಎಲ್ಲವೂ ಕಾರ್ಯಾರಂಭ ಮಾಡಿಲ್ಲ.

ಸಿಮ್ಸ್‌ ಬೋಧನಾ ಆಸ್ಪತ್ರೆಯಲ್ಲಿ ತಲಾ 1,000 ಎಲ್‌ಪಿಎಂ ಸಾಮರ್ಥ್ಯದ ಮೂರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಪೈಕಿ ಒಂದು ಘಟಕ ಮಾತ್ರ ಕಾರ್ಯಾರಂಭ ಮಾಡಲು ಸಜ್ಜಾಗಿದೆ. ಉಳಿದ ಎರಡು ಘಟಕಗಳು ತಾಂತ್ರಿಕ ದೋಷ ಎದುರಿಸುತ್ತಿವೆ.

ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ 416 ಎಲ್‌ಪಿಎಂ ಸಾಮರ್ಥ್ಯದ ಘಟಕ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದೆ. ಇದಕ್ಕೆ ನಿರಂತರ ವಿದ್ಯುತ್‌ ಪೂರೈಸಲು ಜನರೇಟರ್‌ನ ಅಗತ್ಯವಿದೆ.

ಯಳಂದೂರು ಆಸ್ಪತ್ರೆಯಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಘಟಕ ಕಾರ್ಯಾರಂಭ ಮಾಡಿದೆ. ಸಂತೇಮರಹಳ್ಳಿ ಆಸ್ಪತ್ರೆಯಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಘಟಕ ಸ್ಥಾಪಿಸಲಾಗಿದೆ. ಇದರ ಕಾರ್ಯನಿರ್ವಹಣೆಗೆ ವಿದ್ಯುತ್‌ ಸಮಸ್ಯೆ ಎದುರಾಗಿದೆ.

ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ, ಬೇಗೂರು, ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇನ್ನಷ್ಟೇ ಘಟಕಗಳು ಸ್ಥಾಪನೆಯಾಗಬೇಕಿವೆ.

ಹಳೆ ಜಿಲ್ಲಾಸ್ಪತ್ರೆಯ ಕೋವಿಡ್‌ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ, ಹೊಸ ಬೋಧನಾ ಆಸ್ಪತ್ರೆಯನ್ನೂ ಬಳಸಿಕೊಳ್ಳಲಾಗುವುದು

- ಡಾ.ಜಿ.ಎಂ.ಸಂಜೀವ್‌, ಸಿಮ್ಸ್‌ ಡೀನ್‌

3ನೇ ಅಲೆ ಎದುರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೇವೆ. ಕೋವಿಡ್‌ ನಿಯಮ ಪಾಲಿಸುವುದರ ಮೂಲಕ ಜನರು ನಮಗೆ ಸಹಕರಿಸಬೇಕು

- ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT