ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಈದ್‌ ಉಲ್‌ ಫಿತ್ರ್‌ ಅದ್ದೂರಿ ಆಚರಣೆಗೆ ಸಿದ್ಧತೆ

ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ; ಹಬ್ಬದ ಖರೀದಿ ಜೋರು
Last Updated 2 ಮೇ 2022, 16:24 IST
ಅಕ್ಷರ ಗಾತ್ರ

ಚಾಮರಾಜನಗರ:ಮುಸ್ಲಿಮರ ಪವಿತ್ರ ರಂಜಾನ್‌ ಮಾಸ ಸೋಮವಾರಕ್ಕೆ ಮುಕ್ತಾಯಗೊಂಡಿದ್ದು; ಮಂಗಳವಾರ ಅದ್ದೂರಿಯಾಗಿ ಈದ್‌ ಉಲ್‌ ಫಿತ್ರ್‌ ಆಚರಿಸಲು ಜಿಲ್ಲೆಯಾದ್ಯಂತ ಭರದ ಸಿದ್ಧತೆ ಪೂರ್ಣಗೊಂಡಿದೆ.

ಎರಡು ವರ್ಷ ಕೋವಿಡ್‌ ಕಾರಣಕ್ಕೆ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆ, ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದ್ದರು.

ಆದರೆ, ಈ ಬಾರಿ ಯಾವುದೇ ಕೋವಿಡ್‌ ನಿರ್ಬಂಧ ಇಲ್ಲದಿರುವುದರಿಂದ ಹಿಂದಿನ ವರ್ಷಗಳಂತೆಯೇ ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲು ಸಜ್ಜುಗೊಂಡಿದ್ದಾರೆ ಮುಸ್ಲಿಮರು.

‘2019ರಲ್ಲಿ ಮಳೆಯ ಕಾರಣಕ್ಕೆ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿರಲಿಲ್ಲ. 2020, 2021ರಲ್ಲಿ ಕೋವಿಡ್‌ ನಿರ್ಬಂಧದ ಕಾರಣ ಸರಳವಾಗಿ ಆಚರಿಸಿದ್ದೆವು. ಈ ಬಾರಿ ಯಾವುದೇ ನಿರ್ಬಂಧಗಳಿಲ್ಲ. ಹಾಗಾಗಿ ಹಬ್ಬದ ಸಂಭ್ರಮ ಎಂದಿನಂತೆ ಇರಲಿದೆ’ ಎಂದು ಮೊಬೈಲ್‌ ಅಂಗಡಿ ಮಾಲೀಕ ಷಕೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಖರೀದಿ ಭರಾಟೆ: ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಅಂಗಡಿಗಳಲ್ಲಿ ಮುಸ್ಲಿಮರು ಹಬ್ಬವನ್ನು ಆಚರಿಸಲು ಅಗತ್ಯ ವಸ್ತುಗಳು, ಹೊಸ ಬಟ್ಟೆ ಖರೀದಿಸಿದರು.

ಆಚರಣೆ ಹೇಗೆ?:ಹಬ್ಬದ ದಿನ ಸಾಮೂಹಿಕ ಪ್ರಾರ್ಥನೆ ಮಾಡುವ ಮುಸ್ಲಿಮರು ಹೊಸ ಬಟ್ಟೆಗಳನ್ನು ಧರಿಸಿ ಸ್ನೇಹಿತರು, ಬಂಧುಗಳ ಮನೆಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ವಿಶೇಷ ತಿನಿಸುಗಳನ್ನು ಮಾಡಿ ಸ್ನೇಹಿತರು, ನೆಂಟರಿಷ್ಟರಿಗೆ ಬಡಿಸುತ್ತಾರೆ.

‘ಈ ವರ್ಷ ಅದ್ದೂರಿಯಾಗಿ ಹಬ್ಬ ಆಚರಿಸಲಿದ್ದೇವೆ. ಮಸೀದಿಗಳಲ್ಲಿ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಧರ್ಮಗುರುಗಳು, ಮುಖಂಡರು, ಸಾರ್ವಜನಿಕರಿಗೆ, ಸಮುದಾಯದವರಿಗೆ ಸಿಹಿ ಹಂಚುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕವಾಗಿ ಸದೃಢವಾಗಿರುವವರು ಬಡವರಿಗೆ ದಾನ ಮಾಡುತ್ತಾರೆ’ ಎಂದು ಮುಖಂಡ ಅಬ್ರಾರ್‌ ಅಹಮದ್‌ ತಿಳಿಸಿದರು.

ಆಹಾರ ಕಿಟ್‌ಗಳ ವಿತರಣೆ: ಹಬ್ಬದ ಅಂಗವಾಗಿ ಹಲವು ಮುಸ್ಲಿಮರು ಬಡವರಿಗೆ ಆಹಾರ ಕಿಟ್‌ ವಿತರಿಸಿದರು.

‘ಈದ್‌ ಉಲ್‌ ಫಿತ್ರ್‌ ಸಮಯದಲ್ಲಿ ಝಕಾತ್‌ ಎಂಬ ಪದ್ಧತಿ ನಮ್ಮಲ್ಲಿ ಜಾರಿಯಲ್ಲಿದೆ. ಅಂದರೆ ಶೇ 2.5ರಷ್ಟು ಆದಾಯವನ್ನು ದಾನ ಮಾಡುವಂತಹದ್ದು. ವ್ಯಕ್ತಿಯೊಬ್ಬರು ತಮಗೆ ಜೀವನ ನಡೆಸಲು ಬೇಕಾಗಿರುವುದಕ್ಕಿಂತ ಹೆಚ್ಚು ಆದಾಯ ಹೊಂದಿದ್ದರೆ, ಅದರಲ್ಲಿ ಶೇ 2.5ರಷ್ಟನ್ನು ದಾನ ಮಾಡಬೇಕು ಎಂಬ ನಿಯಮ ಇದೆ. ಸಾಮಾನ್ಯವಾಗಿ ಹಬ್ಬದ ಮುನ್ನಾ ದಿನವೇ ಈ ದಾನವನ್ನು ಮಾಡುತ್ತಾರೆ. ಬಡವ‌ರು ಈ ಹಣದಿಂದ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ’ ಎಂದು ಅಬ್ರಾರ್‌ ಮಾಹಿತಿ ನೀಡಿದರು.

ಶಾಂತಿ, ಸಹಬಾಳ್ವೆಯ ಸಂಕೇತ
ಚಾಮರಾಜನಗರ:
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ನಗರದಲ್ಲಿ ಸೋಮವಾರ ಮುಸ್ಲಿಂ ಧರ್ಮ ಗುರುಗಳನ್ನು ಭೇಟಿ ಮಾಡಿ ಸನ್ಮಾನಿಸಿ, ಈದ್‌ ಉಲ್‌ ಫಿತ್ರ್‌ ಶುಭಾಶಯ ಕೋರಿದರು.

ನಗರದ ಮುಬಾರಕ್ ಮೊಹಲ್ಲಾ ಮಸ್ಜಿದೇ ಅಲಾದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಮುಫ್ತಿಜಾಫರ್‌ಹುಸೈನ್, ಕಾಮಿಲ್ ನಯೀಮುಲ್ ಹಕ್, ಮೌಲಾನಾ ಇಸ್ಮಾಯಿಲ್, ಮೌಲಾನಾ ಮೊಸಿನ್, ಟಿಕೆಎಂ ಹಿದಾಯತುಲ್ಲಾ, ಮೌಲಾನಾ ಖಾದರ್ ಹುಸೈನ್, ಹಾಫಿಜ್ ಉಮರ್ ಫಾರುಖ್, ಮೌಲಾನಾ ಶಾಹಿದ್, ಹಾಫಿಜ್ ಸಮೀವುಲ್ಲಾ, ಮೊಖ್ತಾರ್ ಹಜ್‌ರತ್, ಹಾಫಿಜ್ ಲುತ್‌ಫಿ, ಮೌಲಾನಾ ಸಮೀ, ಹಾಫಿಜ್ ಅಮೀರ್ ಷರೀಫ್, ಹಾಫಿಜ್ ಸಮೀವುಲ್ಲಾ, ಸೈಯದ್ ಇರ್ಷಾದ್, ಮೌಲಾನಾ ಖಾದರ್ ಹುಸೈನ್, ಹಾಫಿಜ್ ಜಿಯಾವುಲ್ಲಾ, ಆಲೀಂಖತೀಬ್, ಮೌಲಾನಾ ಸೈಯದ್ ಶಫಿವುಲ್ಲಾ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ‘ಮುಸ್ಲಿಮರಿಗೆ ಈದ್‌ ದೊಡ್ಡ ಹಬ್ಬ. ಇದು ಶಾಂತಿ, ಸಹಬಾಳ್ವೆಯ ಸಂಕೇತ. ಗಳಿಸಿದ ಸಂಪತ್ತಿನಲ್ಲಿ ಬಡವರಿಗೆ ಸಹಾಯ ಮಾಡುವುದು ಈ ಹಬ್ಬದ ವಿಶೇಷ.ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಅಶಾಂತಿ ಉಂಟು ಮಾಡುವ ವಾತಾವರಣವಿದೆ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಕೆಪಿಸಿಸಿ ಸದಸ್ಯ ಸೈಯದ್ ರಫೀ, ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಎಚ್.ವಿ.ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT