ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತನ ಸಂಪರ್ಕಿಸಿದ್ದ ವ್ಯಕ್ತಿಗೆ ಸೋಂಕಿಲ್ಲ

ಪರೀಕ್ಷಾ ವರದಿ ಬಹಿರಂಗ: ನಿಟ್ಟುಸಿರು ಬಿಟ್ಟ ಅಧಿಕಾರಿಗಳು, ಜನತೆ
Last Updated 31 ಮಾರ್ಚ್ 2020, 15:03 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ದೃಢಪಟ್ಟ ನಂಜನಗೂಡಿನ ಔಷಧಿ ಕಾರ್ಖಾನೆಯ ಮೊದಲ ಉದ್ಯೋಗಿ ಜೊತೆ ನೇರ ಸಂಪರ್ಕ ಹೊಂದಿದ್ದ ಜಿಲ್ಲೆಯ ವ್ಯಕ್ತಿಗೆ ಸೋಂಕು ತಗುಲಿಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ.

ನೇರ ಸಂಪರ್ಕ ಹೊಂದಿದ್ದರು ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾಡಳಿತ ಅವರನ್ನು ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿತ್ತು. ಅವರ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ವರದಿ ಬಂದಿದ್ದು, ನೆಗೆಟಿವ್‌ ಎಂದಿದೆ.

ಪರೀಕ್ಷಾ ವರದಿಯಿಂದ ಜಿಲ್ಲಾಡಳಿತ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಂಜನಗೂಡಿನಲ್ಲಿ ನಾಲ್ವರಿಗೆ ಸೋಂಕು ದೃಢ ಪಡುತ್ತ‌ಲೇ ಜಿಲ್ಲೆಯ ಜನರು ಕೂಡ ಆತಂಕಗೊಂಡಿದ್ದರು. ಈ ಸುದ್ದಿಯಿಂದ ಅವರೂ ಕೊಂಚ ಸಮಾಧಾನ ಪಡುವಂತಾಗಿದೆ.

ಸೋಂಕು ದೃಢಪಟ್ಟ ವ್ಯಕ್ತಿಯು ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಸಂದರ್ಭದಲ್ಲಿ, ಅವರ ಸಹೋದ್ಯೋಗಿಯಾಗಿದ್ದ ಜಿಲ್ಲೆಯ ವ್ಯಕ್ತಿ ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಇವರಿಗೂ ಸೋಂಕು ತಗುಲಿರುವ ಅನುಮಾನವನ್ನು ವೈದ್ಯಾಧಿಕಾರಿಗಳು ವ್ಯಕ್ತಪಡಿಸಿದ್ದರು.

ಜಿಲ್ಲೆಯಲ್ಲಿ ಇದುವರೆಗೆ ಎಂಟು ಮಂದಿಯ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್‌ ಬಂದಿದೆ.

49 ವ್ಯಕ್ತಿಗಳು ನಿಗಾದಲ್ಲಿ: ಈ ಮಧ್ಯೆ, ನಂಜನಗೂಡಿನ ಔಷಧಿ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ 49 (ನೆಗೆಟಿವ್‌ ಬಂದ ವ್ಯಕ್ತಿಯೂ ಸೇರಿ) ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಇವರನ್ನು ಅಂಬೇಡ್ಕರ್‌ ಭವನದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇವರಲ್ಲದೇ ವಿದೇಶದಿಂದ ಬಂದಿರುವ ನಾಲ್ವರೂ ಈ ಘಟಕದಲ್ಲಿದ್ದಾರೆ. ವಿದೇಶದಿಂದ ಬಂದವರ ಪೈಕಿ 38 ಮಂದಿ 14 ದಿನಗಳ ಪ್ರತ್ಯೇಕ ವಾಸದ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT