ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಭಕ್ಷಕ ಹುಲಿ| ಕೊಲ್ಲುವುದಲ್ಲ; ಸೆರೆ ಹಿಡಿಯುವುದೇ ಆದ್ಯತೆ: ಅರಣ್ಯ ಇಲಾಖೆ

ಸೆರೆಗೆ ಕಾರ್ಯಾಚರಣೆ ಆರಂಭ
Last Updated 9 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ/ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಚೌಡಹಳ್ಳಿ ಹಾಗೂ ಹುಂಡೀಪುರ ಗ್ರಾಮದಲ್ಲಿ ಒಂದೂವರೆ ತಿಂಗಳ ಅವಧಿಯಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿರುವ, ನರಭಕ್ಷಕ ಹುಲಿಯ ಸೆರೆಗೆ ಬುಧವಾರ ಕಾರ್ಯಾಚರಣೆ ಆರಂಭವಾಗಿದೆ.

ವಲಯ ಅರಣ್ಯ ಅಧಿಕಾರಿಗಳು (ಆರ್‌ಎಫ್‌ಒ), ಡಿಆರ್‌ಆಫ್‌ಒ ಅವರನ್ನು ಒಳಗೊಂಡ ತಲಾ ಎಂಟು ಸದಸ್ಯರ ಆರು ತಂಡಗಳನ್ನು ರಚಿಸಲಾಗಿದ್ದು, ಹುಲಿ ಶೋಧ ನಡೆದಿದೆ. ಕಾರ್ಯಾಚರಣೆಗೆ ಆರುಆನೆಗಳನ್ನು, ಹುಲಿ ಇರುವ ಜಾಗ ಪತ್ತೆಗೆ ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಹುಲಿ ಓಡಾಟ ಬಂದಿರುವಚೌಡಹಳ್ಳಿ, ಕಲಿಗೌಡನಹಳ್ಳಿ, ಶಿವಪುರ, ಕೆಬ್ಬೇಪುರ ಎಲ್ಲೆ, ಹುಂಡೀಪುರ ಭಾಗಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.ಹುಲಿಯನ್ನು ಕೊಲ್ಲುವ ಬದಲು ಸೆರೆ ಹಿಡಿಯುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಪಶು ವೈದ್ಯಾಧಿಕಾರಿಗಳಾದ ಡಾ.ವಸೀಂ, ಡಾ.ಪ್ರಯಾಗ್‌ ಮತ್ತು ಡಾ.ಮುಜೀಬ್‌ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಎರಡು ತಿಂಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿರುವ ಹುಲಿಗೆ ವಯಸ್ಸಾಗಿರಬೇಕು. ಇಲ್ಲವೇ ಅದರ ದೇಹಕ್ಕೆ ಗಾಯವಾಗಿರಬೇಕು. ಕಾಡಿನಲ್ಲಿ ಬೇಟೆಯಾಡುವ ಸಾಮರ್ಥ್ಯ ಇಲ್ಲದೇ, ಜಾನುವಾರುಗಳು ಹಾಗೂ ಮನುಷ್ಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಸಾಧ್ಯತೆ ಇದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಿಹಾರ: ಈ ಮಧ್ಯೆ, ಮಂಗಳವಾರ ಹುಲಿಯ ದಾಳಿಯಿಂದ ಮೃತಪಟ್ಟ ರೈತ ಶಿವಲಿಂಗಪ್ಪ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್‌ ಅನ್ನು ಬಂಡೀಪುರ ಹುಲಿಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಬುಧವಾರ ಹಸ್ತಾಂತರಿಸಿದ್ದಾರೆ. ಅಲ್ಲದೇ, ರೈತನ ಮಗನಿಗೆ ಇಲಾಖೆಯಲ್ಲಿ ಕೆಲಸ ಕೊಡುವ ಭರವಸೆಯನ್ನೂ ನೀಡಿದ್ದಾರೆ.

ಕಾರ್ಯಾಚರಣೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಟಿ. ಬಾಲಚಂದ್ರ, ‘ಸೆರೆ ಹಿಡಿಯುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಅರಿವಳಿಕೆ ಚುಚ್ಚುಮದ್ದು ನೀಡಲು ಎರಡು ಗನ್‌ಗಳನ್ನು ಬಳಸಲಾಗುತ್ತಿದೆ. ನಾಲ್ಕು ಕಡೆಗಳಲ್ಲಿ ಬೋನು ಇಟ್ಟಿದ್ದೇವೆ. ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿಯ ಪ್ರಾಣಕ್ಕೆ ಅಪಾಯ ಎದುರಾದರೆ ಮಾತ್ರ ಗುಂಡಿಕ್ಕಲಾಗುವುದು. ಬಂದೂಕು ಕಟ್ಟಕಡೆಯ ಆಯ್ಕೆಯಾಗಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ’ ಎಂದು ಹೇಳಿದರು.

ವಾಪಸ್‌ ಹೋದ ಶಾರ್ಪ್‌ ಶೂಟರ್‌ಗಳು

ಕಳೆದ ವರ್ಷದ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನರಭಕ್ಷಕ ಹೆಣ್ಣು ಹುಲಿ ‘ಅವನಿ’ಯನ್ನು ಕೊಲ್ಲುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಶಾರ್ಪ್‌ ಶೂಟರ್‌ಗಳಾದ ಶಫತ್‌ ಅಲಿ ಖಾನ್‌ ಹಾಗೂ ಅಸ್ಗರ್‌ ಅಲಿ ಅವರನ್ನು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಕರೆಯಿಸಿಕೊಂಡಿತ್ತು. ಆದರೆ, ನಂತರ ಅವರನ್ನು ವಾಪಸ್‌ ಕಳುಹಿಸಿದೆ.

ಹೈದರಾಬಾದ್‌ನ ನವಾಬರ ವಂಶಸ್ಥರಾದ ಶಫತ್‌ ಅಲಿ ಖಾನ್ ಹಾಗೂ ಅವರ ಮಗ ಅಸ್ಗರ್‌ ಅವರಿಗೆ ‘ಅವನಿ’ಯನ್ನು ಕೊಲ್ಲುವ ಹೊಣೆಯನ್ನು ಹೊರಿಸಲಾಗಿತ್ತು. ಅಸ್ಗರ್‌ ಅಲಿ ಅವರು ಹುಲಿಗೆ ಗುಂಡಿಕ್ಕಿದ್ದರು. ಈ ಪ್ರಕರಣ ರಾಷ್ಟ್ರದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಹುಲಿಯನ್ನು ಕೊಲ್ಲುವ ಮಹಾರಾಷ್ಟ್ರ ಸರ್ಕಾರ ತೀರ್ಮಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

‘ದುರದೃಷ್ಟಕರ, ಆದರೆ ಅನಿವಾರ್ಯ’

ಎರಡು ದಿನಗಳಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗುವುದು ಇಲ್ಲವೇ ಗುಂಡಿಕ್ಕಿ ಕೊಲ್ಲಲಾಗುವುದು ಎಂದು ಅರಣ್ಯ ಇಲಾಖೆ ಮಂಗಳವಾರ ಹೊರಡಿಸಿದ್ದ ಪತ್ರಿಕಾ ಹೇಳಿಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ–ವಿರೋಧ ಚರ್ಚೆ ನಡೆಯುತ್ತಿದೆ.

ಯಾವುದೇ ಕಾರಣಕ್ಕೂ ಹುಲಿಯನ್ನು ಕೊಲ್ಲಬಾರದು. ಸೆರೆ ಹಿಡಿದು ರಕ್ಷಿಸಬೇಕು ಎಂದು ಕೆಲವರು ಆಗ್ರಹಿಸಿದ್ದರೆ, ಈ ನಿರ್ಧಾರ ಸರಿಯಾಗಿದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ, ‘ಕೊಲ್ಲುವ ನಿರ್ಧಾರ ಅಮಾನವೀಯ ಎಂದೆನಿಸಿದರೂ ಜನರ ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿರಬಹುದು. ತಕ್ಷಣ ದೃಢ ನಿರ್ಧಾರ ಕೈಗೊಳ್ಳದೇ ಹೋದರೆ, ಕಾಡಿನ ಸುತ್ತಮುತ್ತಲ ಸಮುದಾಯಗಳ ಬೆಂಬಲ ಕಳೆದುಕೊಳ್ಳುತ್ತೇವೆ. ಆದರೆ, ಹುಲಿ ವಿರುದ್ಧದ ಕಾರ್ಯಾಚರಣೆಯಲ್ಲಿ ಯಾರನ್ನು ತೊಡಗಿಸಿಕೊಳ್ಳುತ್ತೇವೆ ಎನ್ನುವುದನ್ನು ಅರಣ್ಯ ಇಲಾಖೆ ಸೂಕ್ಷ್ಮವಾಗಿ ವಿಚಾರ ಮಾಡಬೇಕು’ ಎಂದು ಹೇಳಿದರು.

‘ಈಗಾಗಲೇ ಇಬ್ಬರು ರೈತರು ಹುಲಿಯ ದಾಳಿಗೆ ಬಲಿಯಾಗಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆದರೆ, ಸ್ಥಳೀಯರು ರೊಚ್ಚಿಗೇಳುವ ಸಾಧ್ಯತೆ ಇದೆ. ಇದರಿಂದ ಹುಲಿ ಸಂತತಿಯನ್ನು ರಕ್ಷಿಸುವ ಯತ್ನಕ್ಕೆ ಹಿನ್ನಡೆಯಾಗುತ್ತದೆ. ಜನರ ಸಹಕಾರ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅರಣ್ಯ ಇಲಾಖೆ ಹುಲಿಯನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದ್ದರೆ ಅದು ಸರಿಯಾದ ನಿರ್ಧಾರ ಎಂದೆನಿಸುತ್ತದೆ’ ಎಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರಿನಿಂದ ಮೂರು ಆನೆಗಳು

‘ಗಣೇಶ’, ‘ಪಾರ್ಥಸಾರಥಿ’, ‘ರೋಹಿತ್’ ಎಂಬ ಹೆಸರಿನ ಮೂರು ಆನೆಗಳಲ್ಲದೆ,ದಸರಾ ಉತ್ಸವದಲ್ಲಿ ಭಾಗಿಯಾಗಿದ್ದ ಮೂರು ಆನೆಗಳನ್ನು ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.

ಇದಕ್ಕಾಗಿ, ‘ಅಭಿಮನ್ಯು’, ‘ಗೋಪಾಲಸ್ವಾಮಿ’ ಹಾಗೂ ‘ಜಯಪ್ರಕಾಶ್‌’ ಆನೆಗಳನ್ನು ಮೈಸೂರು ಅರಮನೆ ಆವರಣದಿಂದ ಬುಧವಾರ ಲಾರಿಯಲ್ಲಿ ಸಾಗಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT