ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಖಾಸಗಿ ಶಾಲೆಗಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಲು ಆಗ್ರಹ

Last Updated 10 ಡಿಸೆಂಬರ್ 2020, 13:21 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಕಾರಣದಿಂದ ಇನ್ನೂ ತರಗತಿಗಳು ಆರಂಭವಾಗದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೂ ನೆರವು ನೀಡಬೇಕು ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಗಂಗಾಧರಯ್ಯ ಅವರು, ‘ಕೋವಿಡ್‌ನಿಂದಾಗಿ ತರಗತಿ ಆರಂಭವಾಗದೆ ಸಣ್ಣ ಖಾಸಗಿ ಶಾಲೆಗಳು ತೊಂದರೆಗೆ ಸಿಲುಕಿವೆ. ಶುಲ್ಕ ಪಾವತಿಸದಿದ್ದರೂ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು ಎಂದುಇತ್ತೀಚೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ನೀಡಿರುವ ಗೊಂದಲಮಯ ಹೇಳಿಕೆಯಿಂದ ಆಡಳಿತ ಮಂಡಳಿಗಳು ಸಂಕಷ್ಟಕ್ಕೆ ಸಿಲುಕಿವೆ. ಶಿಕ್ಷಕರಿಗೆ ವೇತನ ನೀಡಲು ಆಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ನಗರ ಪ್ರದೇಶಗಳಲ್ಲಿರುವ ದೊಡ್ಡ ಖಾಸಗಿ ಶಾಲೆಗಳು ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ, ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರದ ಸಣ್ಣ ಪಟ್ಟಣ ಹಾಗೂ ಗ್ರಾಮೀಣ ಭಾಗದ ಶಾಲೆಗಳಿಗೆ ಇದು ಸಾಧ್ಯವಿಲ್ಲ. ನಾವೆಲ್ಲ ಶಿಕ್ಷಣವನ್ನು ಸೇವೆಯ ರೂಪದಲ್ಲಿ ನೀಡುತ್ತಿದ್ದೇವೆ. ಕಡಿಮೆ ವೆಚ್ಚದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ. ಸಚಿವರ ಹೇಳಿಕೆ ಪೋಷಕರಲ್ಲಿ ಗೊಂದಲ ಉಂಟು ಮಾಡಿದೆ.ಗ್ರಾಮೀಣ ಭಾಗದಲ್ಲಿ ಅಂತರ್ಜಾಲ ಸೌಲಭ್ಯ ಇಲ್ಲ, ವಿದ್ಯುತ್‌ ಇಲ್ಲ. ಹೀಗಾಗಿ ಆನ್‌ಲೈನ್‌ ತರಗತಿಗಳನ್ನು ಸರಿಯಾಗಿ ನಡೆಸಲು ಆಗುತ್ತಿಲ್ಲ’ ಎಂದರು.

‘ಇದರ ನಡುವೆಯೇ ಶಾಲಾ ಮಾನ್ಯತೆ ನವೀಕರಣೆ ಮಾಡುವಂತೆ ಇಲಾಖೆ ಸೂಚಿಸಿದ್ದು, ಅದರಲ್ಲಿರುವ ಮಾನದಂಡಗಳನ್ನು ಪೂರೈಸಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಸರ್ಕಾರ ಇದಕ್ಕೆ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ರಾಜೇಂದ್ರನ್‌ ಅವರು ಮಾತನಾಡಿ, ‘ಅನ್‌ಲಾಕ್‌ ಆದ ನಂತರ ಪೋಷಕರು ಮಕ್ಕಳನ್ನು ತರಗತಿಗಳಿಗೆ ಸೇರಿಸಿ ಅರ್ಧದಷ್ಟೋ ಅಥವಾ ಕಾಲು ಭಾಗ ಶುಲ್ಕ ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಸಚಿವರು ಹೇಳಿಕೆ ನೀಡಿದ ನಂತರ ಶುಲ್ಕವನ್ನೇ ಪಾವತಿಸುತ್ತಿಲ್ಲ. ಇದರಿಂದ ಶಾಲೆಗಳನ್ನು ನಿರ್ವಹಿಸುವುದು ಕಷ್ಟವಾಗಿದೆ’ ಎಂದರು.

ಸದಸ್ಯ ನಂಜುಂಡಸ್ವಾಮಿ ಅವರು ಮಾತನಾಡಿ, ‘ಶಿಕ್ಷಣ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಒಂದು ನಿಯಮ, ಖಾಸಗಿ ಶಾಲೆಗಳಿಗೆ ಮತ್ತೊಂದು ನಿಯಮ ಮಾಡುತ್ತಿದೆ. ಮಾನ್ಯತೆ ನವೀಕರಣ ಮಾಡುವುದಕ್ಕಾಗಿ ಹಲವು ನಿಬಂಧನೆಗಳನ್ನು ಒಡ್ಡಿದೆ. ಈ ಸಂಕಷ್ಟದ ಸಮಯದಲ್ಲಿ ಅದನ್ನು ಈಡೇರಿಸಲು ಸಾಧ್ಯವಿಲ್ಲ’ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕೊಂಬಯ್ಯ, ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT