ಮಂಗಳವಾರ, ಫೆಬ್ರವರಿ 25, 2020
19 °C
ಪ್ರೊ.ಎಂ.ಡಿ.ಎನ್‌ 84ನೇ ಜನ್ಮದಿನಾಚರಣೆ: ಅಮೃತಭೂಮಿಯಲ್ಲಿ ರೈತರಿಂದ ಶ್ರಮದಾನ, ಪ್ರತಿಜ್ಞೆ ಸ್ವೀಕಾರ

ವಿಷಮುಕ್ತ ಜಿಲ್ಲೆಗೆ ರೈತಸಂಘದ ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಚಾಮರಾಜನಗರವನ್ನು ವಿಷಮುಕ್ತ ಜಿಲ್ಲೆಯನ್ನಾಗಿ ಮಾಡಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಣತೊಟ್ಟಿದೆ. 

ತಾಲ್ಲೂಕಿನ ಹೊಂಡರಬಾಳು ಗ್ರಾಮದ ಅಮೃತಭೂಮಿಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪ್ರತಿಷ್ಠಾನದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 84ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ರೈತರು, ಜಿಲ್ಲೆಯನ್ನು ವಿಷಮುಕ್ತವನ್ನಾಗಿ ಮಾಡುವ ಪ್ರತಿಜ್ಞೆ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಂಘದಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸಾವಯವದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು’ ಎಂದು ಅವರು ಹೇಳಿದರು.‌

‘ರಾಸಾಯನಿಕ ಬಳಕೆಯಿಂದ ರೋಗಗ್ರಸ್ಥಗೊಂಡಿರುವ ಭೂಮಿಯು ಸಾವಯವ ಕೃಷಿಯಿಂದ ಮಾತ್ರ ಚೇತರಿಸಿಕೊಳ್ಳಲು ಸಾಧ್ಯ’ ಎಂದು ಪ್ರಕಾಶ್‌ ಹೇಳಿದರು.  

‘ಫಲವತ್ತಾದ ಭೂಮಿ ಹಾಳಾಗುತ್ತಿದೆ. ದೆಹಲಿಯಲ್ಲಿ ಮೂರು ಕಂಪೆನಿಗಳು ಶುದ್ಧ ಗಾಳಿಯನ್ನು ಮಾರಾಟ ಮಾಡುತ್ತಿವೆ. ಹಣ ನೀಡಿ ಆಮ್ಲಜನಕವನ್ನು ಉಸಿರಾಡಬೇಕಾದ ದುಃಸ್ಥಿತಿ ಬಂದೊದಗಿದೆ’ ಎಂದರು.

ಬಂಜೆ ಆಗುತ್ತಾಳೆ: ‘ಓಝೋನ್‌ ಪದರಕ್ಕೆ ಪೆಟ್ಟು ಬಿದ್ದು ಸೂರ್ಯನ ಅತಿ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ತಾಗುತ್ತಿವೆ. ಇದರಿಂದಾಗಿ ಇನ್ನು 10 ವರ್ಷಗಳಲ್ಲಿ ಭೂಮಿ ಬಂಜೆಯಾಗುವಂತ ಪರಿಸ್ಥಿತಿ ಬರಲಿದೆ. ಭೂಮಿಯಲ್ಲಿ ನೀರು ಇರುವುದಿಲ್ಲ. ಇದನ್ನು ಅರ್ಥೈಸಿಕೊಂಡು ಎಲ್ಲರೂ ಸಾವಯವ ಕೃಷಿಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ನಂಜುಂಡಸ್ವಾಮಿಗೆ ಪುಷ್ಪನಮನ: ಇದಕ್ಕೂ ಮೊದಲು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಸಮಾಧಿಗೆ ರೈತರು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ಜಮೀನಿನಲ್ಲಿ ಶ್ರಮದಾನ ನಡೆಸಿದರು. 

ಸಂಘದ ಕಾರ್ಯಾಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ, ತಾಲ್ಲೂಕು ಅಧ್ಯಕ್ಷ ಮಹದೇವಸ್ವಾಮಿ, ಕಡಬೂರು ಮಂಜು, ಚಂಗಡಿ ಕರಿಯಪ್ಪ, ಅಂಬಳೆ ಶಿವಕುಮಾರ್, ಬಸವಣ್ಣ, ಮಹೇಶ್‌ ಇದ್ದರು.

‘ಅಮೃತಭೂಮಿಗೆ ವಾಪಸ್‌ ಕೊಡಲಿ’
‘ಪ್ರೊ.ನಂಜುಂಡಸ್ವಾಮಿ ಅವರು ಅಮೃತಭೂಮಿಯನ್ನು ಖರೀದಿಸುವ ಸಂದರ್ಭದಲ್ಲಿ ಅರ್ಧ ಭಾಗವನ್ನು ಐದಾರು ಜನರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಅಮೃತಭೂಮಿ ಟ್ರಸ್ಟ್‌ ಆದ ನಂತರ ಆ ಜಮೀನನ್ನು ಟ್ರಸ್ಟ್‌ ಹೆಸರಿಗೆ ಬರೆಯಬೇಕು ಎಂಬ ಮಾತಾಗಿತ್ತು. ಆ ಕೆಲಸವನ್ನು ಅವರು ಇನ್ನೂ ಮಾಡಿಲ್ಲ. ಅದನ್ನು ಟ್ರಸ್ಟ್‌ ಹೆಸರಿಗೆ ಬರೆದುಕೊಡಬೇಕು’ ಎಂದು ಹೊನ್ನೂರು ಪ್ರಕಾಶ್‌ ಅವರು ಸಂಘದ ಪರವಾಗಿ ಮನವಿ ಮಾಡಿದರು.

‘ನಂಜನಗೂಡಿನಲ್ಲಿದ್ದ ತಮ್ಮ ಜಮೀನು ಮಾರಾಟ ಮಾಡಿ ನಂಜುಂಡಸ್ವಾಮಿ ಅವರು ಈ ಅಮೃತಭೂಮಿ ಖರೀದಿ ಮಾಡಿದ್ದರು. ಇದು ರೈತ ಸಂಘದ ಭೂಮಿಯೂ ಅಲ್ಲ. ಅಮೃತಭೂಮಿ ರೈತರಿಗಾಗಿ ಮುಡಿಪಾಗಿಟ್ಟ ಭೂಮಿ’ ಎಂದು ಹೇಳಿದರು.

‘ಇಲ್ಲಿ ರೈತ ವಿಶ್ವವಿದ್ಯಾಲಯ ಆಗಬೇಕು. ರೈತರಿಗೆ ಇಲ್ಲಿ ಎಲ್ಲ ದೇಸಿ ತಳಿಗಳು ಸಿಗಬೇಕು ಎನ್ನುವ ಕನಸು ನಂಜುಂಡಸ್ವಾಮಿ ಅವರದ್ದಾಗಿತ್ತು. ಅವರ ಕನಸನ್ನು ನನಸು ಮಾಡಲು ಭೂಮಿ ಪಡೆದವರು ಬರೆದುಕೊಡಬೇಕಾಗಿದೆ’ ಎಂದು ಹೇಳಿದರು.

‘ರೈತ ಸಂಘದಲ್ಲಿ ರಾಜಕಾರಣ ಬೇಡ’
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ‘ರೈತ ಸಂಘದಲ್ಲಿ ರಾಜಕಾರಣ ಸಲ್ಲದು. ರೈತ ಸಂಘಟನೆಗಳು ಚಳವಳಿಗೆ ಸೀಮಿತವಾಗದೆ ಆದಾಯ ಹೆಚ್ಚಿಸುವಂತಹ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು. ಆ ಮೂಲಕ ರೈತರಿಗೆ ಸಲಹೆ ಸೂಚನೆಗೆ ಮುಂದಾಗಬೇಕು’ ಎಂದರು.

‘ಎಲ್ಲ ರೈತರು ಒಗ್ಗೂಡಿ ಮೌಲ್ಯವರ್ಧಿತ ಉತ್ಪನ್ನಕ್ಕೆ ಆದ್ಯತೆ ನೀಡಿ ಆರ್ಥಿಕ ಚೇತರಿಕೆಗೆ ಮುಂದಾಗುವ ಅನಿವಾರ್ಯತೆ ಇದೆ. ಆದಾಯ ದ್ವಿಗುಣಗೊಳಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಮುಂದಾಗಬೇಕಿದೆ. ರೈತರ ಈ ಯೋಜನೆಗೆ ಸರ್ಕಾರದಿಂದ ಅನುದಾನ ಸಿಗಲಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ರೈತರು ಬೆಳೆದ ಮೌಲ್ಯವರ್ಧಿತ ಬೆಳೆಗಳಿಗೆ ಮಾರುಕಟ್ಟೆ ವಿಸ್ತಾರ ಮಾಡುವ ಬಗ್ಗೆ ಚಿಂತನೆ ಅತ್ಯಗತ್ಯ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು