ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಹಂತಕರು ಅಧಿಕಾರದಲ್ಲಿದ್ದಾರೆ: ವಿಚಾರವಾದಿ ಶಿವಸುಂದರ್‌ ಕಿಡಿ

ಗಣರಾಜ್ಯೋತ್ಸವ ಮತ್ತು ಸಂವಿಧಾನ ದಿನ ಆಚರಣೆಯಲ್ಲಿ
Last Updated 27 ಜನವರಿ 2020, 10:56 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಸಂವಿಧಾನಿಕ ಹಾಗೂ ಕಾನೂನು ಬಾಹಿರ ನಿರ್ಬಂಧಗಳನ್ನು ಹೇರುತ್ತಿದೆ’ ಎಂದು ವಿಚಾರವಾದಿ ಶಿವಸುಂದರ್‌ ಅವರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸೋಮವಾರಪೇಟೆ ಈದ್ಗಾ ಮೈದಾನದಲ್ಲಿ ಇಸ್ಲಾಹುಲ್‌ ಮುಸ್ಲಿಮೀನ್‌ ಸಮಿಯು ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ಮತ್ತು ಸಂವಿಧಾನ ದಿನ ಆಚರಣೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಹೇರುತ್ತಿರುವ ನಿರ್ಬಂಧಗಳ ವಿರುದ್ಧ ಜನರು144 ಸೆಕ್ಷನ್‌ ಹಾಗೂ ಗೋಲಿಬಾರ್‌ಗಳನ್ನು ಲೆಕ್ಕಿಸದೆ ಹೋರಾಟ ಮುಂದುವರಿಸಿದ್ದಾರೆ. ಇಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸಿಡಿದೇಳಲು ಜನಸಾಗರವೇ ಬೀದಿಗಿಳಿದಿದೆ. ಸಂವಿಧಾನವನ್ನು ರಕ್ಷಿಸಲು ಭಾರತ ಎಚ್ಚೆತ್ತಿದೆ’ ಎಂದರು.

‘ನಮ್ಮ ಕನಸನ್ನು ನಾವು ಕಟ್ಟಿಕೊಂಡ ದಿನವೇ ಸಂವಿಧಾನದ ದಿನ. ಆ ಕನಸನ್ನು ನುಚ್ಚುನೂರು ಮಾಡುವವರ ವಿರುದ್ಧ ಧ್ವನಿ ಎತ್ತಬೇಕಿದೆ. ಸಂವಿಧಾನದ ಹಂತಕರು ಅಧಿಕಾರದಲ್ಲಿದ್ದಾರೆ. ಅಪರಾಧಿಗಳು ಅಧಿಕಾರದಲ್ಲಿದ್ದಾಗ ಬಾಯಿ ಇದ್ದೂ ಸುಮ್ಮನಿರುವ ಪ್ರತಿಯೊಬ್ಬನೂ ಅಪರಾಧಿಯೇ. ನಾವೆಲ್ಲರೂ ಒಂದಾಗೋಣ’ ಎಂದು ಹೇಳಿದರು.

ಸರ್ಕಾರಿ ದಾಖಲೆಗಳೇ ಸರಿ ಇಲ್ಲ: ‘ಇಂದು ಸರ್ಕಾರ ನೀಡುವಂತಹ ಆಧಾರ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಈ ಮೂರರಲ್ಲೂ ಮಾಹಿತಿ ತಪ್ಪಾಗಿರುತ್ತದೆ.ಶೇ 90ರಷ್ಟು ಸರ್ಕಾರಿ ದಾಖಲೆಗಳು ಸರಿ ಇಲ್ಲ. ಹೀಗಾಗಿ, ಇಡೀ ಭಾರತದಲ್ಲಿ ಮುಸ್ಲಿಮರ ಸಮಸ್ಯೆ ಮಾತ್ರ ಅಲ್ಲ; ಶೇ 60 ಭಾಗದಷ್ಟು ಜನರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದರು.

ಸಂವಿಧಾನ ಪೌರತ್ವ: ‘ನಿಮ್ಮ ಅಪ್ಪ, ಅಮ್ಮ ಅಥವಾ ನೀವು ದೇಶದಲ್ಲಿ ಜನಿಸಿರಬೇಕು ಎನ್ನುವುದು ಸಂವಿಧಾನಬದ್ಧ ಪೌರತ್ವವಾಗಿದೆ.ಹಿಂದೂ, ಸಿಖ್‌ ನಿರಾಶ್ರಿತರಿಗೆ ನಾಗರಿಕತ್ವ ಕೊಡಬೇಡಿ ಎಂದು ಹೇಳುತ್ತಿಲ್ಲ. ದಯವಿಟ್ಟು ಕೊಡಿ. ಅದರಂತೆ ದೌರ್ಜನ್ಯಕ್ಕೆ ತುತ್ತಾಗಿರುವಂತಹ ಮುಸ್ಲಿಮರಿಗೂ ಕೊಡಿ’ ಎಂದರು.

ಸುಳ್ಳು ಗೃಹ ಸಚಿವ: ‘ಎನ್‌ಆರ್‌ಸಿ ಪಟ್ಟಿ ಮಾಡಿ ಹೊರಗುಳಿದ ಹಿಂದೂಗಳಿಗೆ ನಾಗರಿಕತ್ವ ಕೊಡುತ್ತೇವೆ ಎಂದು ಗೃಹ ಸಚಿವ ಅಮಿತ್‌ ಶಾ ಸಂಸತ್‌ನಲ್ಲಿ ಹೇಳುತ್ತಾರೆ. ಇದುಕೊಡಲು ಸಾಧ್ಯನಾ? ಇವರು ಸುಳ್ಳು ಗೃಹ ಸಚಿವ. ಸರ್ಕಾರಿ ದಾಖಲೆನೀಡಿ ನಾನೂ ದೇಶದವನೇ ಎಂದು ಸಾಬೀತು ಮಾಡಲಾಗದಿದ್ದರೆ, ನಾನು ಬಾಂಗ್ಲಾದೇಶದವನು ಎಂದು ಹೇಳಿ ನಾಗರಿಕತ್ವ ಪಡೆಯುವಂತಹ ದುಃಸ್ಥಿಗೆ ದೂಡುತ್ತಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್‌ ವಕ್ತಾರ ಆರ್. ಧ್ರುವನಾರಾಯಣ ಅವರು ಮಾತನಾಡಿ, ‘ಪೌರತ್ವ ಕಾಯ್ದೆ ಜಾರಿಯಿಂದ ಕೇಂದ್ರದ ಬಿಜೆಪಿ ಸರ್ಕಾರ ಮುಸ್ಲಿಮರು ಹಾಗೂ ಹಿಂದೂಗಳ ನಡುವೆ ತಂದಿಡುವಂತಹ ಕೆಲಸ ಮಾಡುತ್ತಿದೆ. ಈ ಕಾಯ್ದೆಯನ್ನು ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಬೇಕು’ ಎಂದರು.

ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್‌ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ, ಮುಖಂಡರಾದ ಜಿ.ಎಂ. ಗಾಡ್ಕರ್‌, ಮಫ್ತಿ ಜಾಫರ್‌ ಹುಸೇನ್‌, ಸುಹೇದ್‌ ಅಲಿ ಖಾನ್‌, ಸೈಯದ್‌ ರಫಿ, ಮಹಮದ್‌ ಅಸ್ಗರ್‌ ಮುನ್ನ, ಸದಾಶಿವಮೂರ್ತಿ, ಸನಾವುಲ್ಲಾ, ಅಬ್ರಾರ್‌ ಅಹಮದ್‌ ಇದ್ದರು.

ಹಿಂದೂಗಳ ಬೆನ್ನಿಗೆ ಚೂರಿ

‘ಸಂವಿಧಾನಕ್ಕೆ ವಿರುದ್ಧವಾಗಿ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರ ಎದೆಗೆ ನೇರವಾಗಿ ಚೂರಿ ಹಾಕಿದರೆ, ಹಿಂದೂಗಳ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ’ ಎಂದು ಶಿವಸುಂದರ್‌ ಹೇಳಿದರು.

‘ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಸಾಬೀತುಪಡಿಸುವಾಗ ಜನರಿಗೆಕೆಲ ಪ್ರಶ್ನೆಗಳನ್ನು ಕೇಳಲು 14 ಹಬ್ಬಗಳ ಪಟ್ಟಿ ಕೊಟ್ಟಿದ್ದಾರೆ. ಈ ಹಬ್ಬಗಳನ್ನು ಕೇಳಿ ಅವರು ಆಚರಿಸುವ ಬಗ್ಗೆ ತಿಳಿದುಕೊಂಡು ಪೌರತ್ವ ನೀಡುವಂತಹದ್ದಾಗಿದೆ. ಆದರೆ, ಬಿಜೆಪಿ ಸರ್ಕಾರ ನೀಡಿರುವ ಈ ಹಬ್ಬಗಳ ಪಟ್ಟಿಯಲ್ಲಿ ರಂಜಾನ್‌ ಮತ್ತು ಬಕ್ರೀದ್‌ ಇಲ್ಲ. ಇದರರ್ಥ ಮುಸ್ಲಿಮರು ಬೇಕಿಲ್ಲ ಎನ್ನುವುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT