ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹1.34 ಕೋಟಿ ಮೌಲ್ಯದ ವಸ್ತು ಹಸ್ತಾಂತರ

44 ಪ್ರಕರಣ ಭೇದಿಸಿದ ಜಿಲ್ಲಾ ಪೊಲೀಸರು; ಚಿನ್ನಾಭರಣ, ನಗದು, ಬೆಲೆ ಬಾಳುವ ವಸ್ತುಗಳ ಪ್ರದರ್ಶನ
Published : 5 ಸೆಪ್ಟೆಂಬರ್ 2023, 13:36 IST
Last Updated : 5 ಸೆಪ್ಟೆಂಬರ್ 2023, 13:36 IST
ಫಾಲೋ ಮಾಡಿ
Comments

ಚಾಮರಾಜನಗರ: 2023ರ ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 70 ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಪೊಲೀಸರು 44 ಪ್ರಕರಣಗಳನ್ನು ಭೇದಿಸಿದ್ದಾರೆ.

ಈ ಪ್ರಕರಣಗಳಲ್ಲಿ ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ₹1.34 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು, ವಾಹನಗಳು ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಪೊಲೀಸ್‌ ಇಲಾಖೆಯು ಮಂಗಳವಾರ ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಬೆಲೆ ಬಾಳುವ ವಸ್ತುಗಳ ಪ್ರದರ್ಶನ ಮತ್ತು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ‘ಈ ವರ್ಷ ವರದಿಯಾದ ಕಳ್ಳತನ ಪ್ರಕರಣಗಳಲ್ಲಿ 44 ಪ‍್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಅವರ ಬಳಿಯಿಂದ ₹1,34,46,261 ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ನ್ಯಾಯಾಲಯದಿಂದ ಅನುಮತಿ ಪಡೆದು ವಸ್ತುಗಳನ್ನು ವಾರಸುದಾರರಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು. 

‘ಪ್ರಕರಣಗಳನ್ನು ಭೇದಿಸುವಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಬಹಳಷ್ಟು ಶ್ರಮ ವಹಿಸಿದ್ದಾರೆ. ಮುಂದೆಯೂ ಇದೇ ರೀತಿ ಕರ್ತವ್ಯ ನಿರ್ವಹಿಸಿ, ಅವರು ಸಾರ್ವಜನಿಕರಿಗೆ ನೆರವಾಗಲಿದ್ದಾರೆ’ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಎಲ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕಳ್ಳತನ ಪ್ರಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದ ಚಿನ್ನಾಭರಣ, ನಗದು ಹಣವನ್ನು ವಾರಸುದಾರರಿಗೆ ಪದ್ಮಿನಿ ಸಾಹು, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ ಟಿ.ಜೆ ಹಾಗೂ ಅಧಿಕಾರಿಗಳು ಹಸ್ತಾಂತರಿಸಿದರು.

ದ್ವಿಚಕ್ರವಾಹನಗಳು ಕಳ್ಳತನವಾಗಿರುವ ಒಂಬತ್ತು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ₹3.20 ಲಕ್ಷ ಮೌಲ್ಯದ ಒಂಬತ್ತು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನಗಳನ್ನು ಕದ್ದ ಎರಡು ಪ್ರಕರಣಗಳನ್ನು ಭೇದಿಸಲಾಗಿದ್ದು, ₹7.65 ಲಕ್ಷ ಮೌಲ್ಯದ ಐದು ವಾಹನಗಳನ್ನು ಜಪ್ತಿ ಮಾಡಲಾಗಿದೆ. 

ನಗದು ಹಣವನ್ನು ಕಳ್ಳತನ ಮಾಡಿರುವ ನಾಲ್ಕು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ₹10,20,501 ಹಣವನ್ನು ಪೊಲೀಸರು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

₹3.77 ಲಕ್ಷ ಮೌಲ್ಯದ ಬ್ಯಾಟರಿ, ಎಲೆಕ್ಟ್ರಿಕಲ್‌ ವಸ್ತುಗಳು, ತಾಮ್ರ, ಕಂಚು ಸೇರಿದಂತೆ ಇತರೆ ಬೆಲೆ ಬಾಳುವ ವಸ್ತುಗಳನ್ನು ಕದ್ದ ಒಂಬತ್ತು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹೇಳಿದರು. 

ಡಿವೈಎಸ್‌ಪಿ ಸೋಮೇಗೌಡ, ಸಲೀಂ ಅಲಿ ಸೇರಿದಂತೆ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಇದ್ದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪ್ರದರ್ಶನಕ್ಕಿಟ್ಟಿದ್ದ ಕಳವಾದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪ್ರದರ್ಶನಕ್ಕಿಟ್ಟಿದ್ದ ಕಳವಾದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು

ಚಿನ್ನದ ಮೌಲ್ಯವೇ ₹1 ಕೋಟಿ ಚಿನ್ನದ ಆಭರಣಗಳು ಕಳ್ಳತನವಾಗಿರುವ 20 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 1.957 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ₹10570500. ಈ 20 ಪ್ರಕರಣಗಳಲ್ಲಿ 5.618 ಕೆಜಿಯಷ್ಟು ಬೆಳ್ಳಿಯ ವಸ್ತುಗಳೂ ಕಳ್ಳತನವಾಗಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು ಇವುಗಳ ಮೌಲ್ಯ ₹393260.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT