ಗುರುವಾರ , ಫೆಬ್ರವರಿ 25, 2021
28 °C

ಬಿ.ಸಿ.ಪಾಟೀಲ ಹೇಳಿಕೆ ವಿರುದ್ಧ ರೈತರ ಆಕ್ರೋಶ, ಕ್ಷಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ‘ರೈತರನ್ನು ಭಯೋತ್ಪಾದಕರು’ ಎಂದು ಕರೆದಿರುವುದನ್ನು ಖಂಡಿಸಿ, ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

‌ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿ.ಸಿ.ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಅವರ ಪ್ರತಿಕ್ರಿತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. 

ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ‘ಬಿ.ಸಿ.ಪಾಟೀಲ ಅವರು ರೈತರನ್ನು ಭಯೋತ್ಪಾದಕರು ಎಂದು  ಕರೆದಿರುವುದು ಖಂಡನೀಯ. ಅವರು ರೈತರು ಬೆಳೆದ ಅನ್ನ ತಿನ್ನುತ್ತಿದ್ದರೆ ಈ ಮಾತು ಬರುತ್ತಿರಲಿಲ್ಲ. ಚಾಮರಾಜನಗರದಲ್ಲಿ ಮೊನ್ನೆಯೇ ಅವರಿಗೆ ಕಪ್ಪು ಬಾವುಟ ತೋರಿಸಬೇಕಿತ್ತು. ಆದರೆ, ಅದನ್ನು ಮಾಡಿರಲಿಲ್ಲ. ಚಾಮರಾಜನಗರಕ್ಕೆ ಬಂದರೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಹಾಗೂ ಮೊಟ್ಟೆಯಿಂದ ಹೊಡೆಯುತ್ತೇವೆ’ ಎಂದು ಹೇಳಿದರು.  

‘ಭಯೋತ್ಪಾದಕರು ನಾವಲ್ಲ, ನೀವು. ಕೃಷಿ ಬಗ್ಗೆ ಏನೂ ಗೊತ್ತಿಲ್ಲದ ಅವಿವೇಕಿಗಳು. ಪಕ್ಷದಿಂದ ಪಕ್ಷಕ್ಕೆ ಹಾರಿ ಆಟ ಆಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕುರ್ಚಿ ಸಮೇತ ಆಚೆ ಹಾಕುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಬಿ.ಸಿ.ಪಾಟೀಲ ಅವರು ರೈತರು ಬೆಳೆದ ಅನ್ನ ತಿನ್ನುತ್ತಿದ್ದರೆ, ಕೂಡಲೇ ರಾಜ್ಯದ ರೈತರ ಕ್ಷಮೆ ಕೇಳಿ, ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಮಾತಿನ ಚಕಮಕಿ: ಪ್ರತಿಭಟನೆಯ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. 

ಭುವನೇಶ್ವರಿ ವೃತ್ತದಲ್ಲಿ ಸಚಿವ ಬಿ.ಸಿ.ಪಾಟೀಲ ಅವರ ಪ್ರತಿಕೃತಿ ದಹಿಸಲು ಪ್ರತಿಭಟನಕಾರರು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು  ಪ್ರತಿಕೃತಿ ಸುಡದಂತೆ ಸೂಚಿಸಿದರು. ಆದರೆ, ಇದನ್ನು ಲೆಕ್ಕಿಸದ ಪ್ರತಿಭಟನಕಾರರು ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ನೀರು ಸುರಿದು ಬೆಂಕಿಯನ್ನು ನಂದಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ರೈತ ಮುಖಂಡರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಮುಖಂಡರಾದ ಮಾಡ್ರಹಳ್ಳಿ ಮಹದೇವಪ್ಪ, ಹುಲಿಗನಾಯಕ, ಪೃಥ್ವಿ, ಕಂದೇಗಾಲ ಮಹೇಶ್, ವಿಜಿ, ಶಿವು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು