ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ–ಲಿಂಗಾಯತ ಮಹಾಸಭಾ ಕಾರ್ಯಕರ್ತರಿಂದ ಯತ್ನಾಳ ಕಾರಿಗೆ ಮುತ್ತಿಗೆ

ಲಿಂಗಾಯತ ಸ್ವಾಮೀಜಿಗಳು, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಹೇಳಿಕೆಗೆ ಖಂಡನೆ
Last Updated 6 ಜುಲೈ 2021, 11:44 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೌಡ ಲಿಂಗಾಯತ ಸಮುದಾಯದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಬಂದಿದ್ದ ವಿಜಯಪುರ‌ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಾರಿಗೆ ಮುತ್ತಿಗೆ ಹಾಕಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ಹಾಗೂ ಬಿಜೆ‍ಪಿ ಕಾರ್ಯಕರ್ತರು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಯತ್ನಾಳ ಅವರು ನಗರಕ್ಕೆ ಸಮೀಪದ ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿ ತಮ್ಮ ಕಾರಿನತ್ತ ಹಿಂದಿರುಗುತ್ತಿದ್ದಾಗ ಪ್ರತಿಭಟನೆ ನಡೆಯಿತು.

ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ, ಸಮಾಜವನ್ನು ಒಡೆಯುವ ಕೆಲಸವನ್ನು ಯತ್ನಾಳ ಮಾಡುತ್ತಿದ್ದಾರೆ ಎಂದು ಪ್ರತಿಭನಕಾರರು ಆರೋಪಿಸಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ವಿರುದ್ಧ ಪದೇ ಪದೇ ಹೇಳಿಕೆ ನೀಡಿ, ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿಕೊಂಡು ವೀರಶೈವ–ಲಿಂಗಾಯತ ಸಮುದಾಯವನ್ನು ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಸಾಧ್ಯತೆಯನ್ನು ಅರಿತಿದ್ದ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ದೇವಸ್ಥಾನದಿಂದ ನೇರವಾಗಿ ಅವರನ್ನು ಸರ್ಕಾರಿ ಪ್ರವಾಸಿ ಮಂದಿರಕ್ಕೆ ಕರೆದೊಯ್ದರು. ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಿದ್ದಮಲ್ಲೇಶ್ವರ ವಿರಕ್ತ ಮಠಕ್ಕೂ ಯತ್ನಾಳ ಅವರು ಭೇಟಿ ನೀಡುವ ಕಾರ್ಯಕ್ರಮವಿತ್ತು. ಅಲ್ಲಿಯೂ ವೀರಶೈವ–ಲಿಂಗಾಯತ ಮಹಾಸಭಾದ ಮುಖಂಡರು, ಕಾರ್ಯಕರ್ತರು ಹಾಗೂ ವಿಜಯೇಂದ್ರ ಅಭಿಮಾನಿಗಳು ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದರಿಂದ, ಅಲ್ಲಿನ ಭೇಟಿಯನ್ನು ಅವರು ರದ್ದುಗೊಳಿಸಿದರು. ಅಲ್ಲಿಂದ ನೇರವಾಗಿ ಗೌಡ ಲಿಂಗಾಯತ ಸಮುದಾಯದವರ ಸಭೆ ಆಯೋಜಿಸಲಾಗಿದ್ದ ವರ್ತಕರ ಭವನಕ್ಕೆ ಪೊಲೀಸರ ಬಂದೋಬಸ್ತ್‌ನಲ್ಲಿ ಬಂದರು.

ಯತ್ನಾಳ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಮಾತನಾಡಿದಾಗ ಸಭಿಕರೊಬ್ಬರು ‘ಧಿಕ್ಕಾರ, ಧಿಕ್ಕಾರ’ ಎಂದು ಕೂಗಿದರು. ಸ್ಥಳದಲ್ಲೇ ಇದ್ದ ಪೊಲೀಸರು ಅವರನ್ನು ಹೊರಗಡೆ ಎಳೆದುಕೊಂಡು ಹೋದರು.

ನನ್ನನ್ನು ಮುಗಿಸಲು ಸಾಧ್ಯವಿಲ್ಲ: ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ ಅವರು, ‘ನನ್ನನ್ನು ಮಗಿಸಲು ಪ್ರಯತ್ನ ಪಡುತ್ತಿದ್ದಾರೆ. ಅಕ್ರಮ ಆಸ್ತಿ ಏನಾದರೂ ಮಾಡಿದ್ದೇನೋ ಎಂಬುದನ್ನು ಹುಡುಕಾಡುತ್ತಿದ್ದಾರೆ. ಬಲಿ ಪಶು ಮಾಡಲು ಭಾರಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಆದರೆ ನನ್ನನ್ನು ಮುಗಿಸಲು ಸಾಧ್ಯವೇ ಇಲ್ಲ’ ಎಂದರು.

‘ಯಾರೂ ನಿರೀಕ್ಷೆ ಮಾಡದಂತಹ ವ್ಯಕ್ತಿ ಸಿ.ಎಂ’
ಇದಕ್ಕೂ ಮೊದಲು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ ಕಾದು ನೋಡುತ್ತಿದೆ. ಬದಲಾವಣೆ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು’ ಎಂದರು.

‘ಯಾರೂ ನಿರೀಕ್ಷೆ ಮಾಡದವರು ಮುಖ್ಯಮಂತ್ರಿಯಾಗುತ್ತಾರೆ.ಒಳ್ಳೆಯ, ಪ್ರಾಮಾಣಿಕ, ಹಿಂದುತ್ವದ ಪರ ಇರುವವರು ಸಿ.ಎಂ. ಆಗುತ್ತಾರೆ. ಹೈಕಮಾಂಡ್‌ ನನಗೆ ಜವಾಬ್ದಾರಿ ಕೊಟ್ಟರೆ ಬೇಡ ಎನ್ನುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿರುದ್ಧ ಬಹಳಷ್ಟು ಷಡ್ಯಂತ್ರಗಳು ನಡೆಯುತ್ತಿವೆ.ಪ್ರತಿಭಟನೆ ಯಾರು ನಡೆಸುತ್ತಿದ್ದಾರೆ ಎಂಬುದೂ ಗೊತ್ತಿದೆ. ಅವರಿಗೆ ನನ್ನ ಬಗ್ಗೆ ಭಯ ಬಂದಿದೆ.ನನ್ನ 30 ವರ್ಷಗಳ ರಾಜಕಾರಣದಲ್ಲಿ ಇಂತಹದ್ದನ್ನೆಲ್ಲ ಸಾಕಷ್ಟು ನೋಡಿದ್ದೇನೆ.ನಾನು ಹೋರಾಟದಿಂದ ಬಂದವನು. ಇದಕ್ಕೆಲ್ಲ ಅಂಜುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT