ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಸೇವಾ ದರ ಏರಿಕೆ ಖಂಡಿಸಿ ಪ್ರತಿಭಟನೆ

Last Updated 29 ಡಿಸೆಂಬರ್ 2020, 9:59 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ವಿವಿಧ ಸೇವೆಗಳ ಶುಲ್ಕವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ತಕ್ಷಣವೇ ಪರಿಷ್ಕೃತ ದರವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಮಹದೇಶ್ವರ ಬೆಟ್ಟಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಾರೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ದೇವರಿಗೆ, ಚಿನ್ನದ ತೇರಿನ ಉತ್ಸವ ಸೇರಿದಂತೆ ವಿವಿಧ ಬಗೆಯ ಸೇವೆಗಳನ್ನು ಮಾಡಿಸುತ್ತಾರೆ. ಪ್ರಾಧಿಕಾರ ರಚನೆಯಾದ ಬಳಿಕ ದೇವಾಲಯ ಆರ್ಥಿಕವಾಗಿ ಸದೃಢವಾಗಿದೆ. ಹುಂಡಿಗಳಿಂದಲೇ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದು, ಉತ್ತಮ ಸ್ಥಿತಿಯಲ್ಲಿದೆ‌. ಕೋವಿಡ್‌ನಿಂದಾಗಿ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಏಕಾಏಕಿ ಭಕ್ತರಿಗೆ ತೀವ್ರ ಹೊರೆಯಾಗುವಂತೆ ಸೇವಾ ದರಗಳನ್ನು ಏರಿಕೆ ಮಾಡಿರುವುದು ದುರದೃಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಾಧಿಕಾರದ ಈ ನಿರ್ಧಾರ ಭಕ್ತರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕಾದ ದೇವಾಯಲಯದ ಅಧಿಕಾರಿಗಳು ಏಕಾಏಕಿ ದರವನ್ನು ಹೆಚ್ಚಿಸಿರುವುದು ಖಂಡನೀಯ. ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೂಡಲೇ ಏರಿಕೆ ಮಾಡಿರುವ ದರಗಳನ್ನು ಇಳಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ದರ ಏರಿಕೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪದಾಧಿಕಾರಿಗಳಾದ ಶಾ.ಮುರುಳಿ, ಚಾ.ಸಿ.ಸೋಮನಾಯಕ, ನಿಜಧ್ವನಿ ಗೋವಿಂದರಾಜು, ಪುರುಷೋತ್ತಮ, ಶಿವಶಂಕರನಾಯಕ, ಪರಶಿವಮೂರ್ತಿ, ಸತ್ಯ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT