ಸೋಮವಾರ, ಅಕ್ಟೋಬರ್ 14, 2019
29 °C

ಮಹಿಷ ದಸರಾ ವಿರುದ್ಧ ಆಜಾದ್ ಹಿಂದೂ ಸೇನೆ ಆಕ್ರೋಶ

Published:
Updated:
Prajavani

ಚಾಮರಾಜನಗರ: ಮಹಿಷ ದಸರಾ ಆಚರಣೆಯ ಹೆಸರಿನಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಆರೋಪಿಸಿ ಆಜಾದ್‌ ಹಿಂದೂ ಸೇನೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರ ದೇವಾಲಯದ ಉದ್ಯಾನದ ಬಳಿ ಸೇರಿದ ಕಾರ್ಯಕರ್ತರು ಮಹಿಷ ದಸರಾ ಸಂಘಟಕರ ವಿರುದ್ಧ ಘೋಷಣೆಗಳನ್ನು ಕೂಗಿದರು. 

‘ಮಹಿಷ ದಸರಾ ಹೆಸರಿನಲ್ಲಿ ಹಿಂದೂಗಳ ದೇವತೆ ಚಾಮುಂಡೇಶ್ವರಿಯನ್ನು ಅಸಹ್ಯವಾದ ಮಾತುಗಳಿಂದ ನಿಂದಿಸಲಾಗುತ್ತಿದೆ. ಮಹಿಷ ದಸರಾ ಸಮಿತಿ ಮಾಡಿಕೊಂಡು ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡುತ್ತ ರಾಜ್ಯದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಲಾಗುತ್ತಿದೆ. ನಿರ್ದಿಷ್ಟ ಸಮುದಾಯವನ್ನು ಎತ್ತಿ ಕಟ್ಟಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. 

‘ಸಮಾಜದ ನಡುವೆ ಸಂಘರ್ಷ ಹುಟ್ಟುಹಾಕುವ ಉದ್ದೇಶದಿಂದ ಚಾಮರಾಜನಗರದಲ್ಲೂ ಮಹಿಷ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಅವಕಾಶ ನೀಡಿರುವುದು ಜಿಲ್ಲಾಡಳಿತದ ವೈಫಲ್ಯ’ ಎಂದು ಅವರು ದೂರಿದರು. 

ಆಜಾದ್‌ ಹಿಂದೂ ಸೇನೆಯ ಅಧ್ಯಕ್ಷ ಎಂ.ಎಸ್‌.ಪೃಥ್ವಿರಾಜ್‌, ಗೌರವಾಧ್ಯಕ್ಷ ಸುಂದರ್‌ ರಾಜ್‌, ನಗರಸಭಾ ಸದಸ್ಯ ಶಿವರಾಜ್‌, ಹಿಂದೂ ಜಾಗರಣ ವೇದಿಕೆಯ ಮೇಂದ್ರ, ಪುರುಷೋತ್ತಮ, ಚಂದ್ರು, ಮಹೇಶ್‌, ಕೆಲ್ಲಂಬಳ್ಳಿ ನಾಗೇಂದ್ರ, ಸ್ವಾಮಿ, ಬಸವರಾಜ್ ಇದ್ದರು. 

Post Comments (+)