ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸೂಕ್ತ ಆಡಿಟ್ ವರದಿ ಇಲ್ಲದೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕೆಲವಯ ಸದಸ್ಯರು ಸಭೆ ಬಹಿಷ್ಕರಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘದ ಕಚೇರಿ ಆವರಣದಲ್ಲಿ ಪ್ರಾರಂಭವಾದ ಸಭೆಯಲ್ಲಿ ಹಿಂದಿನ ಸಾಲಿನ ಸಮಗ್ರ ಮಾಹಿತಿಯುಳ್ಳ ಆಡಿಟ್ ವರದಿಯ ಪ್ರತಿ ನೀಡುವಂತೆ ಸದಸ್ಯರು ಕೇಳಿದರು. ವರದಿ ಹಾಗೂ ಸಮರ್ಪಕ ಕಾರಣಗಳನ್ನು ನೀಡದ ಹಿನ್ನೆಲೆಯಲ್ಲಿ ಸಭೆಯಿಂದ ಹೊರ ನಡೆದರು. ಸಂಘದ ಕಚೇರಿ ಮುಂಭಾಗ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳನ್ನು ಇಟ್ಟು ಆಡಳಿತ ಮಂಡಳಿ ವಿರುದ್ಧ ದಿಕ್ಕಾರ ಕೂಗಿದರು.
‘ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಯುವಾಗ ಸಂಘದ ಚಟುವಟಿಕೆ ಪಾರದರ್ಶಕವಾಗಿದೆ ಎಂಬುದಕ್ಕೆ ಆಡಿಟ್ ವರದಿ ನೀಡಬೇಕು. ಆದರೆ ಆಡಿಟ್ ವರದಿಗೆ ಕೋರಿಕೆ ಸಲ್ಲಿಸಿದರೂ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದು ಸಹಕಾರ ನಿಯಮಗಳಿಗೆ ವಿರುದ್ಧ ಕ್ರಮವಾಗಿದೆ ಎಂದು ಆರೋಪಿಸಿದರು.
ಇದು ಸಾಂಕೇತಿಕವಷ್ಟೇ. ಆಡಿಟ್ ವರದಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಮತ್ತು ಪಿಎಸ್‍ಐ ಸಾಹೇಬಗೌಡ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ನಂಜಪ್ಪ, ಶಿವಮಲ್ಲಪ್ಪ, ರಾಚಟಪ್ಪ, ಶಂಕರಪ್ಪ, ಸುಬ್ಬಣ್ಣ, ಎನ್. ಮಂಜುನಾಥ್, ಜಿ.ಮಂಜುನಾಥ್ ಸೇರಿದಂತೆ ಹಾಲು ಉತ್ಪಾದಕರು, ಸ್ಥಳೀಯರು ಹಾಜರಿದ್ದರು.