ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಧ್ವನಿಗೆ ಒತ್ತಾಯ

ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ, ಪುಟ್ಟರಂಗಶೆಟ್ಟಿಗೆ ಮನವಿ
Last Updated 26 ಜೂನ್ 2020, 16:03 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ವಿರುದ್ಧ ಸದನದಲ್ಲಿ ಧ್ವನಿ ಎತ್ತಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಶುಕ್ರವಾರ ಒತ್ತಾಯಿಸಿದರು.

ಪ್ರಸ್ತಾವಿತ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಗರದ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರವಾಸಿ ಮಂದಿರದಲ್ಲಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

‘ರಾಜ್ಯ ಸರ್ಕಾರ 1961ರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಾಯ್ದೆಯ 29 ಎಬಿಸಿ, 63 ಮತ್ತು 80 ಕಲಂಗಳನ್ನು ತೆಗೆದು ಹಾಕಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಕಂದಾಯ ಸಚಿವ ಆರ್‌.ಅಶೋಕ ಅವರು ಹೇಳಿದ್ದಾರೆ. ಯಾವುದೇ ತಿದ್ದುಪಡಿ ಅಥವಾ ಕಾಯ್ದೆ ರೂಪಿಸಲು ಸಾರ್ವಜನಿಕ ಒಳಿತು ಅದರಲ್ಲಿ ಅಡಕವಾಗಿರಬೇಕು. ಅದನ್ನು ಜನ ಸಮುದಾಯ ಒಪ್ಪುವಂತಿರಬೇಕು. ಅದು ಸಮರ್ಥನೀಯವಾಗಿರಬೇಕು. ಅಂತಹ ಕಾಯ್ದೆ ಅಥವಾ ತಿದ್ದುಪಡಿ ಅಧಿವೇಶನದಲ್ಲಿ ಚರ್ಚೆಯಾಗಬೇಕು. ಇಂತಹ ಚರ್ಚೆಗೆ ಅವಕಾಶ ನೀಡದೆ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರಲು ಹೊರಟಿದ್ದು ನಮೂದಿಸಿರುವ ಕಾರಣಗಳು ಬಾಲಿಶವಾಗಿವೆ’ ಎಂದು ಪ್ರತಿಭಟನಾನಿರತರು ದೂರಿದರು.

‘ಪ್ರಸ್ತಾವಿತ ಕಾಯ್ದೆಯಲ್ಲಿ ಮೇಲಿನ ಕಲಂಗಳನ್ನು ತಿದ್ದುಪಡಿ ಮಾಡಿದಲ್ಲಿ ಭೂ ಸುಧಾರಣಾ ಕಾಯ್ದೆಯ ಅಸ್ತಿತ್ವವೇ ಇರುವುದಿಲ್ಲ. ಕಾಯ್ದೆಯ ಮೂಲ ಉದ್ದೇಶ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ಈ ತಿದ್ದುಪಡಿ ತಿಲಾಂಜಲಿ ಇಟ್ಟು ಉಳ್ಳವರ ಮಾತ್ರ ಭೂಮಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕಾಯ್ದೆಯ ವಿರುದ್ಧ ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಪ್ರತಿಭಟನಾ ನಿರತರು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಮಾಡಿದರು.

‘ನಿಮ್ಮ ಹೋರಾಟಕ್ಕೆ ನನ್ನಸಂಪೂರ್ಣ ಬೆಂಬಲ ಇದೆ’ ಎಂದು ಹೇಳಿದ ಶಾಸಕರು, ಪ್ರತಿಭಕಾರರೊಂದಿಗೆ ಸ್ವಲ್ಪ ಹೊತ್ತು ಧರಣಿ ಕುಳಿತರು.

ರೈತ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಎ.ಎಂ.ಮಹೇಶ್‌ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ಧರಾಜು, ಉಪಾಧ್ಯಕ್ಷ ಹೆಬ್ಬಸೂರು ಬಸವಣ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಮಹೇಶ, ಮುಖಂಡರಾದ ಹೊಮ್ಮ ಮಹೇಶ್‌, ದೊರೆಸ್ವಾಮಿ, ಹೊನ್ನೇಗೌಡಹುಂಡಿ ಸಿದ್ದರಾಜು, ಮಹದೇವಪ್ರಸಾದ್‌, ಮಹಮ್ಮದ್‌ ಅಬ್ಬಾಸ್‌, ಕೌಡಹಳ್ಳಿ ಚಿನ್ನಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT