ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳನ್ನು ಹತ್ತಿಕ್ಕುವ ಕೆಲಸ; ಸರ್ಕಾರದ ವಿರುದ್ಧ ಆಕ್ರೋಶ

Last Updated 29 ಸೆಪ್ಟೆಂಬರ್ 2020, 16:48 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮಾಧ್ಯಮಗಳನ್ನು ಹತ್ತಿಕ್ಕಿವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಡಾ.ಬಿ.ಆರ್.ಅಂಬೇಡ್ಕರ್‌ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಪಿ.ಸಂಘಸೇನಾ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ಭಷ್ಟಾಚಾರ ಮಾಡಿದ್ದಾರೆ ಎಂದು ವರದಿ ಬಿತ್ತರಿಸಿದ ಚಾನೆಲ್‌ ಹಾಗೂ ಅದರ ಮುಖ್ಯಸ್ಥರ ಮೇಲೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪೊಲೀಸರ ಮೂಲಕ ದಾಳಿ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಮುಖ್ಯಮಂತ್ರಿ ಅವರು ತಮ್ಮ ಮಗನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಆದರೆ, ಅದನ್ನು ಬಿಟ್ಟು ವಾಹಿನಿ ಮೇಲೆ ದಾಳಿ ನಡೆಸಿರುವುದು ಖಂಡನೀಯ. ನೈತಿಕ ಹೊಣೆಹೊತ್ತು ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ರಂಗಕರ್ಮಿ ಕೆ.ವೆಂಕಟರಾಜು ಅವರು ಮಾತನಾಡಿ, ‘ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ಮಾಧ್ಯಮದವರ ಮೇಲೆ ಹಲ್ಲೆ, ದಾಳಿ ನಡೆದಿಲ್ಲ. ತಮ್ಮ ಕುಟುಂಬದವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಸುದ್ದಿ ಬಿತ್ತರಿಸಿ ಚಾನೆಲ್‌ ಮೇಲೆ ಪ್ರತೀಕಾರ ತೀರಿಸುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ. ಇದೊಂದು ಹಿಟ್ಲರ್ ಸಂಸ್ಕೃತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಮುಖಂಡ,ನಗರಸಭಾ ಸದಸ್ಯ ಅಬ್ರಾರ್ ‌ಅಹಮದ್ ಮಾತನಾಡಿ, ‘ರಾಜ್ಯ ಬಿಜೆಪಿ ಸರ್ಕಾರ ಮಾಧ್ಯಮಗಳನ್ನು ನಿಯಂತ್ರಿಸಲು ಹೊರಟಿದೆ. ಈ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ರಾಜ್ಯದ ಮಾಧ್ಯಮದವರಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು’ ಎಂದರು.

ದಲಿತ ಸಂಘರ್ಷ ಸಮಿತಿಯ ಕೆ.ಎಂ.ನಾಗರಾಜು, ಸಿ.ಎಂ.ಶಿವಣ್ಣ, ನಗರಸಭಾ ಸದಸ್ಯರಾದ ಎಂ.ಮಹೇಶ್, ಮೊಹಮ್ಮದ್‌ಅಮೀಕ್, ಸಮೀವುಲ್ಲಾಖಾನ್, ಎಸ್‌ಡಿಪಿಐ ಮುಖಂಡ ಸಿ.ಎಸ್.ಸೈಯದ್‌ಆರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್‌ಅಸ್ಗರ್, ರೈತ ಮುಖಂಡ ಆಲೂರುಮಲ್ಲು, ಸ್ವಾಮಿ, ಪಿಎಫ್‌ಐ ಅಧ್ಯಕ್ಷ ಕಫೀಲ್‌ಅಹಮದ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT