ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಥರಸ್‌ ಅತ್ಯಾಚಾರ: ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಆಗ್ರಹ

ಯೋಗಿ ಆದಿತ್ಯನಾಥ ವಿರುದ್ಧ ದಸಂಸ ಆಕ್ರೋಶ
Last Updated 13 ಅಕ್ಟೋಬರ್ 2020, 13:12 IST
ಅಕ್ಷರ ಗಾತ್ರ

ಚಾಮರಾಜನಗರ: ಉತ್ತರಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ವಿಫಲವಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಇರುವ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪುತ್ಥಳಿ ಬಳಿಯಲ್ಲಿ ಸಮಾವೇಶಗೊಂಡ ಪ್ರತಿಭಟನನಿರತರು, ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಧಿಕ್ಕಾರ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಅವರು,‘ಜಾತ್ಯತೀತವಾದ ದೇಶದಲ್ಲಿ ದಿನನಿತ್ಯ ಬೆಳಗಾದರೆ ಪರಿಶಿಷ್ಟ ಜಾತಿಯವರ ಕೊಲೆ, ಅವರ ಸುಲಿಗೆಗಳು, ಸಮುದಾಯದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ, ಬೆತ್ತಲೆ ಮೆರವಣಿಗೆಗಳು.. ಇಂತಹ ಘಟನೆಗಳೇ ನಡೆಯುತ್ತಿವೆ’ ಎಂದು ದೂರಿದರು.

ಉತ್ತರಪ್ರದೇಶದ ಹಾಥರಸ್‌ನಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಇಡೀ ಮನುಕುಲವವೇ ತಲೆ ತಗ್ಗಿಸುವಂತೆ ಮಾಡಿದೆ. ಯುವತಿಯ ಶವವನ್ನು ರಾತ್ರೋರಾತ್ರಿ ಸುಟ್ಟುಹಾಕಿದ್ದಾರೆ. ಆಕೆಯ ಕುಟುಂಬಕ್ಕೆ ಯಾವುದೇ ರಕ್ಷಣೆ ನೀಡಿಲ್ಲ. ಯುವತಿಗೆ ರಕ್ಷಣೆ ನೀಡಲು ವಿಫಲವಾಗಿರುವ ಉತ್ತರ ಪ್ರದೇಶದ ಸರ್ಕಾರವನ್ನು ರಾಷ್ಟ್ರಪತಿಯವರು ವಜಾ ಮಾಡಿ, ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ನಗರಸಭಾ ಸದಸ್ಯ ಎಂ.ಮಹೇಶ್, ಎಸ್‌ಡಿಪಿಐ ಜಿಲ್ಲಾಘಟಕದ ಅಧ್ಯಕ್ಷ ಕಲೀಲ್ ‌ಉಲ್ಲಾ, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ್, ಉಮೇಶ್, ಉಮೇಶ್‌ಕುಮಾರ್, ಮಲ್ಲಿಕಾರ್ಜುನ, ಶಿವು, ರಾಜು, ಸತ್ಯಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT