ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಬಾರಿ ಎರಡು ಸೆಮಿಸ್ಟರ್‌ ‍ಪರೀಕ್ಷೆ ಬೇಡ: ಎಐಡಿಎಸ್‌ಒ ಆಗ್ರಹ

Last Updated 22 ಜುಲೈ 2021, 13:01 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ಸೆಮಿಸ್ಟರ್‌ಗಳ ಪರೀಕ್ಷೆಯನ್ನು ಒಂದೇ ಸಲ ಮಾಡಬಾರದು, ಎರಡು ಡೋಸ್‌ ಲಸಿಕೆ ನೀಡುವವರೆಗೆ ತರಗತಿಗಳನ್ನು ಆರಂಭಿಸಬಾರದು ಎಂದು ಆಗ್ರಹಿಸಿ ಅಖಿಲ ಭಾರತ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಪ್ರತಿಭಟನಕಾರರು, ಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಆಸಿಯಾ ಬೇಗಂ ಅವರು, ‘ಡಿಪ್ಲೊಮಾ, ಎಂಜಿನಿಯರಿಂಗದದ ಕೋರ್ಸ್‌ಗಳ ಈ ಸೆಮಿಸ್ಟರ್‌ನ ಪರೀಕ್ಷೆಗಳೊಂದಿಗೆ ಕಳೆದ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಮಾಡಲು ಸರ್ಕಾರ ಹೊರಟಿದೆ. ಕೋವಿಡ್‌ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಲ್ಲ. ಅದಕ್ಕಿಂತ ಹೆಚ್ಚಾಗಿ 18–20 ಪರೀಕ್ಷೆಗಳನ್ನು ಒಂದೇ ಬಾರಿಗೆ ಬರೆಯುವುದು ಸುಲಭವಲ್ಲ. ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಈ ಕಾರಣಕ್ಕೆ ಎರಡು ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಒಟ್ಟಿಗೆ ನಡೆಸಬಾರದು. ಎರಡು ಡೋಸ್‌ ಲಸಿಕೆ ನೀಡದೆ ತರಗತಿಗಳನ್ನೂ ಆರಂಭಿಸಬಾರದು’ ಎಂದು ಒತ್ತಾಯಿಸಿದರು.

‘ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಆ‌ಗಸ್ಟ್‌ 31ರೊಳಗೆ ಪ‍ರೀಕ್ಷೆ ನಡೆಸುವಂತೆ ಹಾಗೂ ಆರಂಭದ, ಮಧ್ಯಂತರ ಸೆಮಿಸ್ಟರ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ವಿಚಾರದಲ್ಲಿ ಕಳೆದ ವರ್ಷದ ಮಾನದಂಡಗಳನ್ನು (ಶೇ 50ರಷ್ಟು ಅಂಕಗಳು ಆಂತರಿಕ ಮೌಲ್ಯಮಾಪನ ಹಾಗೂ ಶೇ 50ರಷ್ಟು ಅಂಕಗಳು ಹಿಂದಿನ ಸೆಮಿಸ್ಟರ್‌ ಸಾಧನೆಯ ಆಧಾರದಲ್ಲಿ) ಅನುಸರಿಸುವಂತೆ ಯುಜಿಸಿ ಎಲ್ಲ ವಿವಿಗಳಿಗೆ ಸೂಚಿಸಿದೆ. ಇದು ಎಐಸಿಟಿಇಗೆ ಅನ್ವಯವಾಗುತ್ತದೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಟಿಯು ಮತ್ತು ಡಿಟಿಇ ಕೂಡ ಇದೇ ಮಾರ್ಗಸೂಚಿಗಳನ್ನು ಅನುಸರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ಒಂದು ತಿಂಗಳಿನಿಂದ ಚಳವಳಿ ನಡೆಸುತ್ತಿದ್ದೇವೆ. ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಆಸಿಯಾ ಬೇಗಂ ಅವರು ಹೇಳಿದರು.

ಎಐಡಿಎಸ್‌ಒನ ಹೋರಾಟ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ, ಸೇವಂತ್, ಅಭಿಷೇಕ್, ಸುಪ್ರೀತ್, ಭೂಮಿಕಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT