ಗುರುವಾರ , ಆಗಸ್ಟ್ 5, 2021
22 °C

ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫಡರೇಷನ್ ಕರೆಗೆ ಮೇರೆಗೆ ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು, ಧರಣಿ ಕುಳಿತರು. ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು. 

ಕೋವಿಡ್‌ –19 ವಿರುದ್ಧ ಹೋರಾಟ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಸುರಕ್ಷತಾ ಗೇರ್, ಅಪಾಯ ಭತ್ಯೆ ಮತ್ತು ₹30 ಲಕ್ಷ  ವಿಮಾ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನನಿರತರು ಒತ್ತಾಯಿಸಿದರು.

‘ಪೋಷಣ್‌ ಟ್ರ್ಯಾಕರ್‌ ಮೊಬೈಲ್‌ ಅಪ್ಲಿಕೇಷನ್‌ನೊಂದಿಗೆ ಅಂಗನವಾಡಿ ಕಾರ್ಯಕರ್ತರ ಗೌರವ ಧನ‌ ಹಾಗೂ ಆಹಾರ ಧಾನ್ಯ ಫಂಡ್‌ಗಳನ್ನು ತಕ್ಷಣ ಜೋಡಿಸುವ ನಿರ್ಧಾರ ಹಾಗೂ ವೇತನ ಕಡಿತ ಆದೇಶವನ್ನು ವಾಪಸ್‌ ಪಡೆಯಬೇಕು, ಅಂಗನವಾಡಿ ಕೇಂದ್ರಗಳಲ್ಲಿ, ಸಮುದಾಯ ಜಮೀನುಗಳು ಅಥವಾ ಫಲಾನುಭವಿಗಳ ಮನೆಗಳಲ್ಲಿ ಪೋಷಕಾಂಶ–ತೋಟಗಳನ್ನು ಮಾಡಬೇಕು ಎಂಬ ಸೂಚನೆಯನ್ನು ಮುಂದೂಡಬೇಕು, ಸಮಗ್ರ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಇನ್ನಷ್ಟು ಹೆಚ್ಚು ಪೋಷಕಾಂಶ ಪೂರೈಸಲು ಕ್ರಮ ಕೈಗೊಳ್ಳಬೇಕು, ಅಂಗನವಾಡಿ ಕೇಂದ್ರಗಳ ಬಳಿ ಪೂರ್ವ ಪ್ರಾಥಮಿಕ ಶಾಲೆ ಅಥವಾ ಪೌಷ್ಟಿಕಾಂಶ ಕೇಂದ್ರಗಳನ್ನು ತೆರೆಯದಂತೆ ಎಚ್ಚರವಹಿಸಲು ಸರ್ಕಾರದ ವಿವಿಧ ಇಲಾಖೆಗಳ ನಡುವೆ, ವಿಶೇಷವಾಗಿ ಶಿಕ್ಷಣ ಇಲಾಖೆಯ ನಡುವೆ ಸರಿಯಾದ ಸಮನ್ವಯವಿರುವಂತೆ ನೋಡಿಕೊಳ್ಳಬೇಕು, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರ್ಣ ಪ್ರಮಾಣದ ಗೌರವ ಪಾವತಿ ಮಾಡಬೇಕು, ಸಮಗ್ರ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಬಿಟ್ಟು ಹೆಚ್ಚುವರಿ ಕೆಲಸವನ್ನು ವಹಿಸಬಾರದು’ ಎಂದು ಅವರು ಒತ್ತಾಯಿಸಿದರು. 

‘ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕುನ್ನು ನೀಡಬೇಕು, ಪಿಂಚಣಿ ನೀಡುವ ತನಕ ಬಲವಂತವಾಗಿ ನಿವೃತ್ತಿ ಮಾಡಬಾರದು. ಐಸಿಡಿಎಸ್ ಅನ್ನು ಶಾಶ್ವತಗೊಳಿಸಿ ನೌಕರನ್ನು ಕಾಯಂಗೊಳಿಸುವುದು, 45ನೇ ಕಾರ್ಮಿಕ ಸಮ್ಮೇಳನದ ಶಿಫಾರಸುಗಳಾದ ಕನಿಷ್ಠ ವೇತನ, ಸಾಮಾಜಿಕ ಭದ್ರತಾ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತ, ಚಾಮರಾಜನಗರ ತಾಲ್ಲೂಕು ಘಟಕದ ಅಧ್ಯಕ್ಷೆ ರೇವಮ್ಮ, ಕಾರ್ಯದರ್ಶಿ ಷಾಹಿದಾಬಾನು, ಸರೋಜ, ಶಶಿರೇಖ, ನೀಲಮ್ಮ, ಮಂಜುಳ, ಪಾರ್ವತಿ, ಸಲೀಮಾಜಾನು, ಹಸೀನಾ ಬಾನು, ಯಶೋಧ, ತಾಯಮ್ಮ, ಬಸಮ್ಮ, ಸಂಪತ್ ಕುಮಾರಿ, ಜಯಲಕ್ಷ್ಮಿಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.