ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರ: ಅವಕಾಶಕ್ಕೆ ಆಗ್ರಹ

ಮಹದೇಶ್ವರಬೆಟ್ಟದ ಸಣ್ಣ ವ್ಯಾಪಾರಿಗಳ ಸಂಘದಿಂದ ಜಿಲ್ಲಾ ಕೇಂದ್ರ ದಲ್ಲಿ ಪ್ರತಿಭಟನೆ
Last Updated 20 ಸೆಪ್ಟೆಂಬರ್ 2021, 13:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಈ ಹಿಂದಿನಂತೆಯೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಬೆಟ್ಟದ ಸಣ್ಣ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು, ವಿವಿಧ ಸಂಘಗಳ ಸಹಕಾರದೊಂದಿಗೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಜಿಲ್ಲಾಡಳಿತ ಹಾಗೂ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

’ಸಣ್ಣ ವ್ಯಾಪಾರಿಗಳಾದ ನಾವು 40–50 ವರ್ಷಗಳಿಂದ ದೇವಸ್ಥಾನದ ಆವರಣದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಬೆಟ್ಟದಲ್ಲಿ 250 ಸಣ್ಣ ವ್ಯಾಪಾರಿಗಳ ಕುಟುಂಬಗಳಿದ್ದು, ಬೀದಿ ಬದಿ ವ್ಯಾಪಾರವನ್ನೇ ಅವಲಂಬಿಸಿದ್ದೇವೆ. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಾಧಿಕಾರವು ನಮಗೆ ವ್ಯಾಪಾರ ಮಾಡಲು ಅವಕಾಶ ನೀಡುತ್ತಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

‘ವ್ಯಾಪಾರ ಮಾಡುತ್ತಿದ್ದವರನ್ನು ಪ್ರಾಧಿಕಾರದ ಸಿಬ್ಬಂದಿ ಬಲವಂತವಾಗಿ ತೆರವುಗೊಳಿಸಿದ್ದಾರೆ. ಇದರಿಂದಬೀದಿ ವ್ಯಾಪಾರಿಗಳು ಬೀದಿಪಾಲಾಗಿದ್ದೇವೆ. ಬ್ಯಾಂಕಿನಿಂದ ಸಾಲವನ್ನು ಪಡೆದು ವ್ಯಾಪಾರಕ್ಕೆ ಬಂಡವಾಳ ಹಾಕಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಕೆಲಸವಿಲ್ಲದೆ, ಬಹಳ ಕಷ್ಟವಾಗಿದೆ’ ಎಂದರು.

‘ವ್ಯಾಪಾರ ನಂಬಿಕೊಂಡು ಮಹಿಳಾ ಸ್ವಸಹಾಯ ಸಂಘಗಳಲ್ಲಿ, ಬ್ಯಾಂಕುಗಳಲ್ಲಿ, ಕಿರು ಹಣಕಾಸು ಸಂಸ್ಥೆಗಳಲ್ಲಿ ಹಾಗೂ ಖಾಸಗಿ ವ್ಯಕ್ತಿಗಳಿಂದ ಸಾಲವನ್ನು ಪಡೆದುಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲಾಗದೆ ಬಡ್ಡಿಗಳನ್ನು ಪಾವತಿಸಲು ಸಾಧ್ಯವಾಗದೆ, ದಿಕ್ಕು ತೋಚದೆ ಕಂಗಲಾಗಿದ್ದೇವೆ. ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ಇನ್ನಿತರ ಅಗತ್ಯ ಆರೋಗ್ಯ ಸಂಬಂಧಿಸಿದ ಸೇವೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಹಿಂದಿನಂತೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು, ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗರ (ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ) ಕಾಯ್ದೆ 2014ರಂತೆ ಬೀದಿ ಬದಿ ವ್ಯಾಪಾರಸ್ಥರ ವೆಂಡಿಂಗ್‌ ಕಮಿಟಿ ಮಾಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡಿ ಅಗತ್ಯ ಅನಕೂಲಗಳನ್ನು ಮಾಡಿಕೊಡಬೇಕು ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡುತ್ತಿರುವ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭಸ್ವಾಮಿ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಬಿ.ಗೋವಿಂದ, ರೈತ ಹಿತರಕ್ಷಣಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್‌,ಕರ್ನಾಟಕ ಪ್ರಾಂತ್ಯ ರೈತಸಂಘ ರಾಜ್ಯ ಸಮಿತಿ ಸದಸ್ಯ ಭರತ್‌ರಾಜ್, ಡಿ.ಎ.ಎಸ್, ಮಹದೇವಮ್ಮ, ಉತ್ತಂಬಳ್ಳಿ ಲಿಂಗಣ್ಣ, ಎ.ಮುತ್ತಯ್ಯ, ರಾಜೇಶ್ವರಿ, ವೆಂಕಟಲಕ್ಷ್ಮಮ್ಮ, ಸಿದ್ದಮ್ಮ, ಪುಟ್ಟಮ್ಮ, ಪೆರಿಯಸ್ವಾಮಿ, ರಾಜಮ್ಮ, ಭಾಗ್ಯ, ಜ್ಯೋತಿ, ಚಿನ್ನಮ್ಮ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT