ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ ಆಗ್ರಹ: ಶವ ಇಟ್ಟು ಪ್ರತಿಭಟನೆ

ಗುರುವಾರ ರಾತ್ರಿ ನಡೆದ ಘಟನೆ, ಬೈಕ್‌ ಡಿಕ್ಕಿಯಾಗಿ ಪಾದಚಾರಿ ಸಾವು
Last Updated 11 ಅಕ್ಟೋಬರ್ 2019, 15:24 IST
ಅಕ್ಷರ ಗಾತ್ರ

ಚಾಮರಾಜನಗರ: ಬೈಕ್‌ ಡಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಮೃತನ ಸಂಬಂಧಿಕರು ಹಾಗೂ ಚೆನ್ನೀಪುರಮೋಳೆಯ ಗ್ರಾಮಸ್ಥರು ನಗರದ ಜಿಲ್ಲಾಸ್ಪತ್ರೆ ಮುಂದೆ ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ನಗರದ ಜೋಡಿ ರಸ್ತೆಯಲ್ಲಿ (ಜೆಎಸ್‌ಎಸ್‌ ಕಾಲೇಜು ಬಳಿ) ಗುರುವಾರ ರಾತ್ರಿ ಬೈಕ್‌ ಡಿಕ್ಕಿ ಹೊಡೆದು ಚೆನ್ನೀಪುರದಮೋಳೆ ನಿವಾಸಿ ಗೋವಿಂದ (40) ಅವರು ತೀವ್ರವಾಗಿ ಗಾಯಗೊಂಡಿದ್ದರು. ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗೋವಿಂದ ಅವರು ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಘಟನೆ ಸಂಬಂಧಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಾಯಾಳು ಮೃತಪ‍ಟ್ಟಿದ್ದರೂ ಬೈಕ್‌ ಸವಾರ ರಾಮಸಮುದ್ರದ ನಿವಾಸಿ ಶ್ರೀನಿವಾಸ್‌ ಅವರು ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಿಲ್ಲ. ಸ್ಥಳಕ್ಕೆ ಬಂದು ದುಃಖದಲ್ಲಿ ಭಾಗಿಯಾಗಲಿಲ್ಲ ಎಂದು ಆರೋಪಿಸಿ ಶವವನ್ನು ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಇಟ್ಟುಕೊಂಡು ದಿಢೀರ್‌ ಆಗಿ ಪ್ರತಿಭಟನೆ ನಡೆಸಿದರು. ವಿಷಯ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಕೂಡ ಜಮಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಮಾನವೀಯ ನೆಲೆಯಲ್ಲಿ ಬೈಕ್‌ ಸವಾರನಿಂದ ಪರಿಹಾರ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ವಾಪಸ್‌ ಪಡೆದರು.

ನಗರಸಭಾ ಸದಸ್ಯರಾದ ಭಾಗ್ಯಮ್ಮ, ಚಿಕ್ಕರಾಜು, ಮುಖಂಡರಾದ ಮಹದೇವು, ಸಿದ್ದಪ್ಪ, ಮಲ್ಲು ಮತ್ತಿತತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT