ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಆಗಲೇಬೇಕು ಜನಾಂದೋಲನಕ್ಕೆ ಚಾಲನೆ

ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ
Last Updated 22 ಡಿಸೆಂಬರ್ 2021, 16:44 IST
ಅಕ್ಷರ ಗಾತ್ರ

ಚಾಮರಾಜನಗರ: ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು ಚಾಮರಾಜನಗರದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ‘ಮೇಕೆದಾಟು ಆಗಲೇಬೇಕು ಜನಾಂದೋಲನ’ಕ್ಕೆ ನಗರದಲ್ಲಿ ಬುಧವಾರ ಚಾಲನೆ ಸಿಕ್ಕಿತು.

ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ ಗೌಡ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ನಗರಕ್ಕೆ ಸಮೀಪದ ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು.

ಆಂದೋಲನದ ಆರಂಭಿಕ ಹಂತವಾಗಿ ವೇದಿಕೆಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ರ‍್ಯಾಲಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಚಾಮರಾಜೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು.

ರಮೇಶ್ ಗೌಡ ಮಾತನಾಡಿ, ‘ಕೆಆರ್‌ಎಸ್‌ ಕೆಳಭಾಗದಿಂದ ತಮಿಳುನಾಡಿನ ಗಡಿಯವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲೂ ಸಾಕಷ್ಟು ಪ್ರಮಾಣದ ನೀರು ಹರಿಯುತ್ತದೆ. ಈ ನೀರು ಕೂಡ ಕಾವೇರಿ ನದಿಗೆ ಸೇರಿ ತಮಿಳುನಾಡಿನತ್ತ ಹರಿಯುತ್ತ‌ದೆ. ಈ ನೀರಿನ ಮೇಲೆ ರಾಜ್ಯಕ್ಕೆ ನಿಯಂತ್ರಣ ಇಲ್ಲದಿರುವುದರಿಂದ ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ. ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು, ಮೇಕೆದಾಟುವಿನಲ್ಲಿ ಶೇಖರಣಾ ಜಲಾಶಯಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಇದರಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗಲಿದೆ’ ಎಂದರು.

‘ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಕೊಳವಿಬಾವಿಗಳು ಒಣಗಿಹೋಗಿವೆ. ಕೊಳವೆಬಾವಿಗಳಲ್ಲಿನ ನೀರುಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಮೇಕೆದಾಟು ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬೆಂಗಳೂರಿನವರೆವರೆಗೂ ನಮ್ಮ ಆಂದೋಲನ ನಡೆಯಲಿದೆ. ಮೈಸೂರು ಸೇರಿದಂತೆ ದಾರಿಯಲ್ಲಿ ಸಿಗುವ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಆಯಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಕೊನೆಯ ದಿನ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ’ ಎಂದರು.

ವೇದಿಕೆಯ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಮಲ್ಲು, ರಾಮನಗರ ಜಿಲ್ಲೆಯ ಅಧ್ಯಕ್ಷ ಯೋಗೇಶ್‌ ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್‌, ರಾಯಚೂರು ಜಿಲ್ಲಾ ಅಧ್ಯಕ್ಷ ವೀರೇಶ್‌, ಮಂಡ್ಯ ಜಿಲ್ಲಾಧ್ಯಕ್ಷ ಉಮಾಶಂಕರ್‌, ಚಾಮರಾಜನಗರ ಜಿಲ್ಲೆಯ ಸಹ ಕಾರ್ಯಾಧ್ಯಕ್ಷ ನಾಗರಾಜು ಕೆ.ಕೆ.ಹುಂಡಿ, ಸಂಘಟನಾ ಕಾರ್ಯದರ್ಶಿಗಳಾದ ಆರ್.ಮಹದೇವಶೆಟ್ಡಿ, ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷ ಪುಟ್ಟರಾಜು, ಕೆ.ನೀಲಶೇಖರ್, ಮುಕುಂದಮೂರ್ತಿ, ಸದಸ್ಯರಾದ ಶಿವಮೂರ್ತಿ, ಎಂ.ಸಿದ್ದರಾಜು, ಪ್ರಕಾಶ್, ನಾಗರಾಜು, ಎಸ್.ನಾರಾಯಣ್, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT