ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್ಆರ್‌ಟಿಸಿ ನೌಕರರ ಮುಷ್ಕರ: ಖಾಸಗಿ ಬಸ್‌ ವ್ಯವಸ್ಥೆಗೆ ಡಿ‌.ಸಿ ಸೂಚನೆ

Last Updated 6 ಏಪ್ರಿಲ್ 2021, 15:06 IST
ಅಕ್ಷರ ಗಾತ್ರ

ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ಆಗಲಿರುವ ತೊಂದರೆಯನ್ನು ತಪ್ಪಿಸುವುದಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಖಾಸಗಿ ಬಸ್‌ಗಳ ಓಡಾಟಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದರು.

ಕೋವಿಡ್‌ ದೃಢಪಟ್ಟ ನಂತರ ಹೋಂ ಐಸೊಲೇಷನ್‌ನಲ್ಲಿರುವ ಅವರು, ಮನೆಯಿಂದಲೇ ಗೂಗಲ್‌ ಮೀಟ್‌ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೆಎಸ್ಆರ್‌ಟಿಸಿ ನೌಕರರು ನಡೆಸುವ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಂತ್ರಣ ಮಾನದಂಡಗಳನ್ನು ಅನುಸರಿಸಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಮುಷ್ಕರ ಮುಗಿಯುವವರೆಗೆ ಅಗತ್ಯವಿರುವೆಡೆ ಹೆಚ್ಚುವರಿ ಮಾರ್ಗಗಳನ್ನು ಗುರುತಿಸಬೇಕು. ಸಾರಿಗೆ ನೌಕರರ ಮುಷ್ಕರದಿಂದ ಖಾಸಗಿ ಬಸ್‌ಗಳ ನಿರ್ವಹಣೆಯಲ್ಲಿ ಒತ್ತಡ ಹಾಗೂ ಹೆಚ್ಚಿನ ಜನಸಂದಣಿಯನ್ನು ಮುನ್ನೆಚ್ಚರಿಕೆಯಿಂದ ನಿಭಾಯಿಸಬೇಕು. ಖಾಸಗಿ ಬಸ್‌ಗಳಿಗೆ ತಾತ್ಕಾಲಿಕವಾಗಿ ಪರವಾನಗಿಯನ್ನು ನೀಡಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಿಂದ ನಗರ, ಪಟ್ಟಣ ಪ್ರದೇಶಗಳಿಗೆ ಶಾಲಾ-ಕಾಲೇಜುಗಳಿಗೆ ಬರಲು ಕೆಎಸ್ಆರ್ಟಿಸಿ ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕು. ಕೆಎಸ್ಆರ್ಟಿಸಿ ಬಸ್‌ಪಾಸ್‌ನ್ನು ಖಾಸಗಿ ಬಸ್‌ಗಳಲ್ಲಿಯೂ ಪರಿಗಣಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಚ್ಚು ವಸೂಲಿ ಮಾಡುವಂತಿಲ್ಲ

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳನ್ನು ಬಿಟ್ಟು, ಮ್ಯಾಕ್ಸಿಕ್ಯಾಬ್‌ಗಳು ಹಾಗೂ ಇತರೆ ಬಾಡಿಗೆ ‌ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಮುಷ್ಕರವನ್ನೇ ನೆಪ ಮಾಡಿಕೊಂಡು ಖಾಸಗಿ ಬಸ್‌ಗಳು ಹಾಗೂ ಮ್ಯಾಕ್ಸಿಕ್ಯಾಬ್‌ಗಳು ಪ್ರಯಾಣಿಕರಿಂದ ಯಾವುದೇ ಕಾರಣಕ್ಕೂ ಹೆಚ್ಚಿನ ಹಣ ವಸೂಲಿ ಮಾಡಬಾರದು. ನಿಗದಿತ ದರಕ್ಕಿಂತ ಹೆಚ್ಚಿನ ಸುಲಿಗೆ ಮಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಅಗತ್ಯ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು.

ನಿಷೇಧಾಜ್ಞೆ ಜಾರಿ

ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಮುಗಿಯುವರೆಗೂ ಜಿಲ್ಲಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾನ, ಬಸ್‌ ಡಿಪೊ, ವಿಭಾಗೀಯ ಕಚೇರಿಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT