ಚಾಮರಾಜನಗರ: ಪೆಟ್ರೋಲ್ ₹ 13.40, ಡೀಸೆಲ್ ₹ 19.40 ಇಳಿಕೆ

ಚಾಮರಾಜನಗರ: ಕೇಂದ್ರ–ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿರುವುದರಿಂದ ಜಿಲ್ಲೆಯಲ್ಲೂ ಪೆಟ್ರೋಲ್–ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಸಾರ್ವಜನಿಕರು ಕೊಂಚ ಸಮಾಧಾನ ಪಟ್ಟಿದ್ದಾರೆ.
ಗುರುವಾರ ಸಂಜೆಯ ಹೊತ್ತಿಗೆ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 13.40, ಡೀಸೆಲ್ ಬೆಲೆ ₹ 19.40ರಷ್ಟು ಕಡಿಮೆಯಾಗಿದೆ. ಹಾಗಿದ್ದರೂ, ಪೆಟ್ರೋಲ್ ಬೆಲೆ ಲೀಟರ್‌ಗೆ ₹ 100ಕ್ಕಿಂತ ಮೇಲೆ ಇದ್ದು, (₹ 100.66) ಇನ್ನಷ್ಟು ಕಡಿಮೆಯಾಗಬೇಕು ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರ್‌ಗೆ ₹ 10, ಪೆಟ್ರೋಲ್ ಮೇಲಿನ ಸುಂಕವನ್ನು ₹ 5ರಷ್ಟು ಕಡಿತ ಮಾಡಿತ್ತು. ಕೇಂದ್ರದ ನಿರ್ಧಾರ ಹೊರ ಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಎಕ್ಸೈಸ್ ಸುಂಕವನ್ನು ತಲಾ ₹ 7 ಕಡಿಮೆ ಮಾಡಿತ್ತು.
ಕೇಂದ್ರದ ಆದೇಶ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದರೆ, ರಾಜ್ಯ ಸರ್ಕಾರದ ತೀರ್ಮಾನ ಗುರುವಾರ ರಾತ್ರಿ 7 ಗಂಟೆ ನಂತರ ಜಾರಿಗೆ ಬಂದಿದೆ.
ಹಾಗಾಗಿ, ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಬೆಳಿಗ್ಗೆ ಒಂದು ರೀತಿ ಇದ್ದರೆ ರಾತ್ರಿ ಮತ್ತೊಂದು ರೀತಿ ಇತ್ತು. ರಾತ್ರಿಯೂ ಕೆಲವು ಬಂಕ್‌ಗಳಲ್ಲಿ ಬೆಳಗ್ಗಿನ ದರವೇ ಇತ್ತು.
ಚಾಮರಾಜನಗರದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲಿ ಹಗಲು ಹೊತ್ತಿನಲ್ಲಿ ಪೆಟ್ರೋಲ್‌ಗೆ ₹ 107.73, ಡೀಸೆಲ್‌ಗೆ ₹ 92.10 ಇತ್ತು. ರಾಜ್ಯ ಸರ್ಕಾರದ ಆದೇಶ ಜಾರಿಗೆ ಬಂದ ಬಳಿಕ ಪೆಟ್ರೋಲ್‌ಗೆ ₹ 100.66, ಡೀಸೆಲ್‌ಗೆ ₹ 85.09ರಷ್ಟು ಆಗಿದೆ.
ಬೆಲೆ ಕಡಿತದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದವರು ಬೆಳಿಗ್ಗೆ ಹೊತ್ತು ಪೆಟ್ರೋಲ್ ಬಂಕ್‌ಗಳ ಕಡೆ ಸುಳಿಯಲಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದವರು ಹಾಗೂ ಅನಿವಾರ್ಯ ಇದ್ದವರು ಬೆಳಿಗ್ಗೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡರು. ₹ 12 ಕಡಿಮೆಯಾಗುತ್ತದೆ ಎಂದು ಹೇಳಿ ಇಲ್ಲಿ ₹ 7 ಮಾತ್ರ ಕಡಿಮೆಯಾಗಿದೆ ಎಂದು ಪ್ರಶ್ನಿಸಿದವರೂ ಇದ್ದರು.
ಇನ್ನಷ್ಟು ಕಡಿಮೆಗೊಳಿಸಲು ಆಗ್ರಹ: ಇಂಧನ ದರ ಏರಿಕೆಯಿಂದ ಕಂಗಾಲಾಗಿದ್ದ ಸಾರ್ವಜನಿಕರಲ್ಲಿ ದರ ಕಡಿತ ಸ್ವಲ್ಪ ಸಮಾಧಾನ ತಂದಿದೆಯಾದರೂ, ಪೂರ್ಣ ತೃಪ್ತರಾಗಿಲ್ಲ. ‘ಪ್ರಜಾವಾಣಿ’ಯು ಜಿಲ್ಲೆಯಾದ್ಯಂತ ಹಲವರನ್ನು ಮಾತನಾಡಿಸಿದಾಗ, ಬಹುತೇಕರು ಕೇಂದ್ರ–ರಾಜ್ಯ ಸರ್ಕಾರಗಳ ನಿರ್ಧಾರವನ್ನು ಸ್ವಾಗತಿಸಿದರೂ, ಬೆಲೆ ಇನ್ನಷ್ಟು ಕಡಿಮೆಯಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
‘ಪೆಟ್ರೋಲ್ ₹ 100ಕ್ಕಿಂತ ಕಡಿಮೆಯಾಗಿಲ್ಲ. ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು ನಾವು. ಬರುವ ಕೂಲಿಯಲ್ಲಿ ಪೆಟ್ರೋಲ್‌ಗೆ ದುಡ್ಡು ಖರ್ಚು ಮಾಡಿದರೆ ಜೀವನಕ್ಕೆ ಏನು ಉಳಿಯುತ್ತದೆ? ಸರ್ಕಾರ ಈಗ ಕಡಿಮೆ ಮಾಡಿರುವುದು ಸಂತೋಷವೇ. ಇದು ಸಾಲದು ಇನ್ನಷ್ಟು ಕಡಿಮೆಯಾಗಬೇಕು’ ಎಂದು ನಗರದ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ಹಂಡ್ರಕಳ್ಳಿಮೋಳೆಯ ಮಹದೇವಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜನರು ಏನಂತಾರೆ?
ಈಗಿನ ಬೆಲೆಯೂ ತುಟ್ಟಿ
ಕೇಂದ್ರ, ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಿರುವುದರಿಂದ ಬೆಲೆಯಲ್ಲಿ ಇಳಿಮುಖವಾಗಿರುವುದು ಸಂತೋಷ. ಆದರೆ, ಪೆಟ್ರೋಲ್ ದರ ಈಗಲೂ ₹ 100ರ ಆಸುಪಾಸಿನಲ್ಲೇ ಇದೆ. ಕೂಲಿ ನಾಲಿ ಮಾಡಿ ಜೀವನ ಮಾಡುವವರಿಗೆ ಈ ಬೆಲೆಯೂ ಹೆಚ್ಚೆ. ಹಾಗಾಗಿ, ಸರ್ಕಾರ ಇನ್ನಷ್ಟು ಬೆಲೆ ಇಳಿಸಬೇಕು
– ಕೃಷ್ಣ, ಚಾಮರಾಜನಗರ
ದೀಪಾವಳಿ ಉಡುಗೊರೆಯಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಗೊಳಿಸಿರುವುದು ಸದ್ಯದ ಮಟ್ಟಿಗೆ ಸ್ವಾಗತಾರ್ಹ ನಿರ್ಧಾರ. ಇದರ ಹಿಂದೆ ಏನೋ ಕಾರಣ ಇರಬಹುದು. ಬೆಲೆ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇದು ದೀಪಾವಳಿ ಉಡುಗೊರೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪೆಟ್ರೋಲ್–ಡೀಸೆಲ್ ಬೆಲೆ ಏರಿಕೆ ಮಾಡುವುದಿಲ್ಲ ಎಂಬುದಕ್ಕೆ ಗ್ಯಾರೆಂಟಿ ಏನು?
– ಎಚ್.ಎಂ.ಸಿದ್ದರಾಜು, ಆಟೊ ಚಾಲಕ, ಸಂತೇಮರಹಳ್ಳಿ
ಲಾಭದಾಯಕವಲ್ಲ
ಬೆಲೆ ₹ 12, ₹ 17 ಕಡಿಮೆಯಾದರೆ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆಯೇ ವಿನಾ ಜನ ಸಾಮಾನ್ಯರಿಗೆ ಲಾಭದಾಯಕ ಅಲ್ಲ. ಪ್ರವಾಸಿ ವಾಹನಗಳ ವ್ಯವಹಾರ ಮಾಡಲು ತೊಂದರೆಯಾಗಿ ವಾಹನಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ಕಡಿಮೆಯಾದರೆ, ಅನೇಕ ಜನರು ಮತ್ತು ವಲಯಗಳು ನೆಮ್ಮದಿಯಾಗಿರುತ್ತವೆ
–ಲೋಕೇಶ್ , ಲಾರಿ ಚಾಲಕ, ಗುಂಡ್ಲುಪೇಟೆ
ಪೈಸೆ ಲೆಕ್ಕಾಚಾರದ ಏರಿಕೆ ನಿಲ್ಲಿಸಿ
ಒಂದೇ ಬಾರಿಗೆ ಪೆಟ್ರೋಲ್ ಬೆಲೆ ₹ 12 ಇಳಿಸಿದ್ದಾರೆ. ಇನ್ನೂ ಕಡಿಮೆ ಮಾಡುವ ಮೂಲಕ ಜನರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು. ಈಗ ದಿಢೀರನೇ ಕಡಿಮೆ ಮಾಡಿ, ಮುಂದೆ ಪೈಸೆ ಲೆಕ್ಕಾಚಾರದಲ್ಲಿ ಏರಿಕೆ ಮಾಡಬಾರದು
–ರವಿ, ಹನೂರು
ಹಣದುಬ್ಬರ ದರ ಇಳಿಕೆ
ಕೇಂದ್ರ–ರಾಜ್ಯ ಸರ್ಕಾರಗಳು ಸುಂಕವನ್ನು ಮತ್ತಷ್ಟು ಕಡಿತಗೊಳಿಸಬೇಕು. ಈಗ ಬೆಲೆ ಇಳಿಸುವ ಮೂಲಕ ನಾಗರಿಕರ ಸಂಕಷ್ಟಗಳನ್ನು ಸ್ವಲ್ಪ ಕಡಿಮೆ ಮಾಡಿವೆ. ಇದರಿಂದ ಹಣದುಬ್ಬರದ ದರ ಇಳಿಯುವ ನಿರೀಕ್ಷೆ ಇದೆ.
–ಶಂಕರ್, ಕೆಸ್ತೂರು, ಯಳಂದೂರು ತಾಲ್ಲೂಕು
ಮತ್ತಷ್ಟು ಇಳಿಯಲಿ
ಪೆಟ್ರೋಲ್ ದರವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಹೆಚ್ಚು ಕಡಿಮೆ ಬೆಲೆ ನಿಗದಿ ಮಾಡಬೇಕಿದೆ. ಈಗ ಪೆಟ್ರೋಲ್, ಡೀಸೆಲ್ ದರವನ್ನು ಶೇ 30ಕ್ಕೂ ಹೆಚ್ಚಳ ಮಾಡಿ ಶೇಕಡಾವಾರು ಬೆಲೆ ದರವನ್ನು ಕಡಿಮೆ ದರ ಕಡಿತಗೊಳಿಸಲಾಗಿದೆ. ಈ ಧಾರಣೆ ಮತ್ತಷ್ಟು ಇಳಿಯಬೇಕು
–ತೇಜ ನಂದನ್.ಎನ್, ಮಲಾರ ಪಾಳ್ಯ, ಯಳಂದೂರು ತಾಲ್ಲೂಕು
ಜೀವನಕ್ಕೆ ತೊಂದರೆ
ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಿರುವುದು ಸಂತಸ ತಂದಿದೆ. ನಾವು ಮಧ್ಯಮ ವರ್ಗದ ಜನರು. ಜೀವನ ನಡೆಸುವುದೇ ಬಹಳ ಕಷ್ಟ. ಅದರಲ್ಲೂ ಈ ಬೆಲೆ ಏರಿಕೆಯಿಂದ ಬಹಳಷ್ಟು ತೊಂದರೆಗಳು ಆಗುತ್ತಿತ್ತು. ಬೆಲೆ ಇಳಿದಿರುವುದು ಸ್ವಲ್ಪ ಸಮಾಧಾನ ತಂದಿದೆ.
–ದಿಲೀಪ್, ಕೊಳ್ಳೇಗಾಲ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.