ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬೆಳಗಿನ ಹೊತ್ತು ರೈಲು ಬೇಕು: ಜನರ ಒತ್ತಾಯ

ನಗರ– ಮೈಸೂರು: ಬೆ.7.15ರ ಬಳಿಕ ಮ. 3.30ಕ್ಕೆ ರೈಲು, ಸಂಜೆಯ ನಂತರ ನಾಲ್ಕು ರೈಲುಗಳ ಸಂಚಾರ
Last Updated 16 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಿಂದ ಮೈಸೂರಿಗೆ ಪ್ರತಿ ದಿನ ಆರು ರೈಲುಗಳು ಸಂಚರಿಸುತ್ತಿದ್ದು, ಈ ಪೈಕಿ ನಾಲ್ಕು ರೈಲುಗಳು ಸಂಜೆ 5.30ರ ನಂತರ ಸಾಂಸ್ಕೃತಿಕ ನಗರಿಗೆ ತೆರಳುತ್ತವೆ.

ಬೆಳಿಗ್ಗೆ 7.15ಕ್ಕೆ ಮೊದಲ ಪ್ಯಾಸೆಂಜರ್‌ ರೈಲು ಮೈಸೂರಿಗೆ ತೆರಳಿದರೆ, ನಂತರದ ರೈಲಿಗಾಗಿ ಮಧ್ಯಾಹ್ನ 3.30ರವರೆಗೆ ಕಾಯಬೇಕು. ಬೆಳಗಿನ ಅವಧಿಯಲ್ಲಿ ನಗರದಿಂದ ಇನ್ನೂ ಎರಡು ಮೂರು ರೈಲು ಸೇವೆ ಒದಗಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಸಂಜೆ ಹಾಗೂ ರಾತ್ರಿ ಮೈಸೂರಿಗೆ ರೈಲುಗಳಿದ್ದರೂ ಜಿಲ್ಲೆಯ ಜನರಿಗೆ ಉಪಯೋಗವಿಲ್ಲ. ಬೆಳಗಿನ ಹೊತ್ತು ಸಂಚರಿಸಿದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂಬುದು ಅವರ ಅಭಿಪ್ರಾಯ.

‌ಆರು ರೈಲು: ಈಗ ಪ್ರತಿದಿನ ಬೆಳಿಗ್ಗೆ 7.15 (ಪ್ಯಾಸೆಂಜರ್‌), ಮಧ್ಯಾಹ್ನ 3.30 (ತಿರುಪತಿ ಎಕ್ಸ್‌ಪ್ರೆಸ್‌), ಸಂಜೆ 5.25 (ಪ್ಯಾಸೆಂಜರ್‌), 6.35 (ಎಕ್ಸ್‌ಪ್ರೆಸ್‌), ರಾತ್ರಿ 8.45 (ಎಕ್ಸ್‌ಪ್ರೆಸ್‌– ಇದು ಹೊಸ ರೈಲು. 10 ದಿನಗಳ ಹಿಂದೆಯಷ್ಟೇ ಆರಂಭವಾಗಿದೆ) ಹಾಗೂ ರಾತ್ರಿ 9.30ಕ್ಕೆ (ಪ್ಯಾಸೆಂಜರ್‌) ನಗರದಿಂದ ಮೈಸೂರಿಗೆ ರೈಲುಗಳಿವೆ.

ಬೆಳಿಗ್ಗೆ 7.15ರ ರೈಲಿಗೆ ಬೇಡಿಕೆ ಹೆಚ್ಚಿದ್ದು, ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು, ಉದ್ಯೋಗಿಗಳು ಹಾಗೂ ಜನರು ಮೈಸೂರಿಗೆ ತೆರಳುತ್ತಾರೆ. ಒಂದೊಂದು ಭೋಗಿಯಲ್ಲಿ ಕನಿಷ್ಠ ಎಂದರೂ 200 ಜನರಷ್ಟು ಇರುತ್ತಾರೆ. ರೈಲಿನಲ್ಲಿ 10 ಬೋಗಿಗಳಿದ್ದು, ಎಲ್ಲವೂ ಭರ್ತಿಯಾಗುತ್ತದೆ. ‌

ಮಧ್ಯಾಹ್ನ 3.30ರ ತಿರುಪತಿ ರೈಲಿನಲ್ಲೂ ಪ್ರಯಾಣಿಕರಿರುತ್ತಾರೆ. ಸಂಜೆ 5.50ರ ರೈಲಿಗೂ ಜನರಿಂದ ಬೇಡಿಕೆ ಇದೆ. ಆದರೆ, ಆ ಬಳಿಕ ಸಂಚರಿಸುವ ರೈಲುಗಳಿಗೆ ಹತ್ತುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.

‘ಬೆಳಿಗ್ಗೆ 7.15ರ ನಂತರ ಮಧ್ಯಾಹ್ನ 3.30ರವರೆಗೂ ಒಂದೂ ರೈಲಿಲ್ಲ. ಬೆಳಿಗ್ಗೆ 8 ಗಂಟೆಯ ನಂತರ ನಗರದಿಂದ ಮೈಸೂರಿಗೆ ಹೋಗುವವರು ನೂರಾರು ಸಂಖ್ಯೆಯಲ್ಲಿದ್ದಾರೆ. 10ರ ಬಳಿಕ ಹೋಗುವವರೂ ಇದ್ದಾರೆ. ಅಂತಹವರಿಗೆ ರೈಲೇ ಇಲ್ಲ. ರೈಲಿಗೆ ಹೋಗುತ್ತೇವೆ ಎಂದರೆ ತಿರುಪತಿ ಎಕ್ಸ್‌ಪ್ರೆಸ್‌ವರೆಗೂ ಕಾಯಬೇಕು. ಇಲ್ಲದಿದ್ದರೆ ₹71 ಖರ್ಚು ಮಾಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಹೋಗಬೇಕಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಂ.ಕೃಷ್ಣಮೂರ್ತಿ ಹೇಳಿದರು.

‘ಬೆಳಗಿನ ಅವಧಿಯಲ್ಲಿ ನಗರದಿಂದ ಮೈಸೂರಿಗೆ ರೈಲಿದ್ದರೆ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಪ್ಯಾಸೆಂಜರ್‌ ರೈಲಿಗೆ ₹20 ಕೊಟ್ಟರೆ ಸಾಕು. ಎಕ್ಸ್‌ಪ್ರೆಸ್‌ ಆದರೆ ₹40 ಕೊಡಬೇಕು. ಹಾಗಿದ್ದರೂ, ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ಗಿಂದ ₹30 ಉಳಿತಾಯವಾಗುತ್ತದೆ’ಎಂಬುದು ಜನರ ಅನಿಸಿಕೆ.

‘ಬೆಳಗಿನ ಹೊತ್ತು ಹೊಸ ರೈಲು ಹಾಕುವ ಅಗತ್ಯವಿಲ್ಲ. ತಿರುಪತಿಯಿಂದ ಬೆಳಿಗ್ಗೆ ಮೈಸೂರಿಗೆ ಬರುವ ರೈಲು, ಅಲ್ಲಿಂದ ಚಾಮರಾಜನಗರಕ್ಕೆ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬರುತ್ತದೆ. ಆ ಬಳಿಕ ಅದು ಸಂಜೆ 5.30ರವರೆ ಇಲ್ಲೇ ಇದ್ದು, ನಂತರ ಹೊರಡುತ್ತದೆ. ಇದೇ ರೈಲನ್ನು ಬೆಳಿಗ್ಗೆ ಒಂದು ಸಮಯ ನಿಗದಿ ಮಾಡಿ ಓಡಿಸುವುದಕ್ಕೆ ಅವಕಾಶ ಇದೆ. ರೈಲ್ವೆ ಇಲಾಖೆ ಈ ಬಗ್ಗೆ ಗಮನ ಹರಿಸಲಿ’ ಎಂದು ಕೃಷ್ಣಮೂರ್ತಿ ಹೇಳಿದರು.

ಮನವಿಗೆ ನಿರ್ಧಾರ: ‘ಈ ಸಂಬಂಧ, ಜಿಲ್ಲಾ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಅವರು ಹೇಳಿದರು.

ವಿದ್ಯುತ್‌ ಚಾಲಿತ ರೈಲಿಗೆ ಇನ್ನಷ್ಟು ದಿನ ಕಾಯಬೇಕು
ಮೈಸೂರು–ಚಾಮರಾಜನಗರ ನಡುವೆ ವಿದ್ಯುತ್‌ ಚಾಲಿತ ರೈಲು ಸಂಚರಿಸಲು ಇನ್ನಷ್ಟು ಸಮಯ ಬೇಕು.

ಎರಡು ವಾರಗಳ ಹಿಂದೆ ವಿದ್ಯುತ್‌ ರೈಲು ಮಾರ್ಗದ ಪರೀಕ್ಷೆ ನಡೆದಿದೆ. ನಗರದಿಂದ ಮೈಸೂರಿಗೆ ಪ್ರಾಯೋಗಿಕ ರೈಲು ಸಂಚಾರವೂ ಯಶಸ್ವಿಯಾಗಿದೆ.

‘ವಿದ್ಯುತ್‌ ಮಾರ್ಗದ ಪರೀಕ್ಷೆ ನಡೆದಿದೆ. ಎಲ್ಲ ಪ್ರಕ್ರಿಯೆ ಅಂತಿಮ ಹಂತಿದಲ್ಲಿದೆ. ರೈಲುಗಳ ಸಂಚಾರದ ನಿಗದಿ ಇನ್ನೂ ಅಂತಿಮಗೊಂಡಿಲ್ಲ’ ಎಂದು ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್‌ ಅಗರ್‌ವಾಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

--

ಬೆಳಗಿನ ಅವಧಿಯಲ್ಲಿ ಹೊಸ ರೈಲು ಹಾಕುವ ಪ್ರಸ್ತಾವ ಇಲ್ಲ. ಸಾರ್ವಜನಿಕರಿಂದ ಬೇಡಿಕೆ ಬಂದರೆ ಪರಿಶೀಲಿಸಬಹುದು.
–ಡಾ.ಮಂಜುನಾಥ್‌ ಕನಮಡಿ, ರೈಲ್ವೆ ವಿಭಾಗೀಯ ವ್ಯವಸ್ಥಾಪಕ, ವಾಣಿಜ್ಯ ವಿಭಾಗ

--

ಸಂಜೆ 5.30ರಿಂದ 4 ರೈಲುಗಳು ಮೈಸೂರಿಗೆ ಹೋಗುತ್ತವೆ. ಬಹುತೇಕ ಎಲ್ಲವೂ ಖಾಲಿ ಇರುತ್ತವೆ. ಬೆ. 8ರಿಂದ ಮ. 2ರ ನಡುವೆ ರೈಲುಗಳ ಅಗತ್ಯವಿದೆ.
–ಸಿ.ಎಂ.ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT