ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಗೆ 25 ವರ್ಷ: ಅಭಿವೃದ್ಧಿಗೆ ಆಗಬೇಕಾಗಿರುವುದೇನು?

Last Updated 7 ಆಗಸ್ಟ್ 2022, 15:29 IST
ಅಕ್ಷರ ಗಾತ್ರ

ಚಾಮರಾಜನಗರ:ಗಡಿ ಭಾಗ ಚಾಮರಾಜನಗರವು ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ 25 ವಸಂತಗಳು ತುಂಬುತ್ತಿದೆ. ಎರಡೂವರೆ ದಶಕಗಳಲ್ಲಿ ಜಿಲ್ಲೆ ಬೆಳೆದು ಬಂದ ಹಾದಿಯನ್ನು ಗಮನಿಸಿದರೆ, ರಾಜ್ಯದ ದಕ್ಷಿಣದ ಗಡಿಭಾಗದಲ್ಲಿ ಆಗಿರುವ ಅಭಿವೃದ್ಧಿ ಚಟುವಟಿಕೆಗಳು ಕಡಿಮೆಯೇ. ನಂಜುಡಪ್ಪ ವರದಿ ಪ್ರಕಾರ ಇದು ಹಿಂದುಳಿದಿರುವ ಜಿಲ್ಲೆ. ಸಾಂಸ್ಕೃತಿಕವಾಗಿ ಪ್ರಾಕೃತಿಕವಾಗಿ ಸಿರಿವಂತವಾಗಿದ್ದರೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜಿಲ್ಲೆ ಹಿಂದೆ ಇದೆ. ಸರ್ಕಾರ ಜಿಲ್ಲೆಯ ಬಗ್ಗೆ ಕಾಳಜಿ ತೋರುವುದಿಲ್ಲ ಎಂಬುದು ಜಿಲ್ಲೆಯ ಜನರ ಅಸಮಾಧಾನ. ಇಲ್ಲಿನ ಜನಪ್ರತಿನಿಧಿಗಳ ಬಗ್ಗೆಯೂ ಜನಸಾಮಾನ್ಯರಿಗೆ ಬೇಸರ ಇದೆ. ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೂ ಜಿಲ್ಲೆಯ ಅಭಿವೃದ್ಧಿ ಕನಸಿಲ್ಲ ಎಂಬುದು ಅವರ ಆಕ್ಷೇಪ.

‘ನಮ್ಮ ಜನ ನಮ್ಮ ಧ್ವನಿ’ ಅಂಕಣಕ್ಕಾಗಿ, ಜಿಲ್ಲೆ ಹಿಂದುಳಿಯಲು ಕಾರಣವೇನು? ಅಭಿವೃದ್ಧಿಗೆ ಏನೇನು ಆಗಬೇಕು ಎಂದು ‘ಪ್ರಜಾವಾಣಿ’ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಕೇಳಿದಾಗ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

ಯೋಜನಾ ಬದ್ಧ ಅಭಿವೃದ್ಧಿ ಬೇಕು

ಜಿಲ್ಲೆಗೆ 25 ವರ್ಷಗಳು ತುಂಬುವ ಹೊತ್ತಿನಲ್ಲಿ ನನ್ನಲ್ಲಿ ಮಿಶ್ರಭಾವನೆಗಳು ಉಂಟಾಗುತ್ತಿವೆ. ಈ ಅವಧಿಯಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ನಾನು ಹೇಳಲಾರೆ. ಆದರೆ ವ್ಯವಸ್ಥಿತ, ಯೋಜನಾಬದ್ಧವಾದ ಅಭಿವೃದ್ಧಿ ಆಗಿಲ್ಲ ಎಂಬುದು ನಿಜ. ವೈದ್ಯಕೀಯ ಕಾಲೇಜು ಸೇರಿದಂತೆ ಒಂದಷ್ಟು ಶಿಕ್ಷಣ ಸಂಸ್ಥೆಗಳು ಬಂದಿವೆ. ಕೆರೆಗಳಿಗೆ ನೀರು ತುಂಬಿಸಿದ್ದು ಒಳ್ಳೆಯ ಕೆಲಸ. ಕೈಗಾರಿಕೆಗಳು ನಿಧಾನವಾಗಿ ಬರುವುದಕ್ಕೆ ಆರಂಭಿಸಿದೆ.

ಒಳ್ಳೆಯ ರಸ್ತೆ, ಹೊಸ ಹೊಸ ಕಟ್ಟಡಗಳು ಮಾತ್ರ ಅಭಿವೃದ್ಧಿಯೇ? ಜಿಲ್ಲೆ ಆದ ತಕ್ಷಣ ಐಎಎಸ್‌, ಕೆಎಎಸ್‌ ಹುದ್ದೆಗಳು ಸೃಷ್ಟಿಯಾದವು. ಆದರೆ, ಅದರ ಕೆಳಹಂತದ ಹುದ್ದೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲ. ಜಿಲ್ಲೆಯ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು. ಉದಾಹರಣೆಗೆ ಕೆರೆಗಳಿಗೆ ನೀರು ತುಂಬಿಸಿರುವುದು ತಾತ್ಕಾಲಿಕ ಪರಿಹಾರವಷ್ಟೆ. ಇರುವ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಎಲ್ಲ ಕೆರೆಗಳಿಗೆ ಕಾಯಕಲ್ಪ ತುಂಬಬೇಕು.

–ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ

ಇನ್ನೊಂದು ಉಪವಿಭಾಗ ಬೇಕು

ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಕೃಷಿ ಕಾಲೇಜುಗಳು ಸೇರಿದಂತೆ ಸರ್ಕಾರದ ಹಲವು ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವುದು ಬಿಟ್ಟು, ಬೇರೆ ಏನಾಗಿದೆ? ವೈದ್ಯಕೀಯ ಕಾಲೇಜಿನ ಸೀಟುಗಳನ್ನು ನೀಟ್‌ ಮೂಲಕ ತುಂಬಲಾಗುತ್ತದೆ. ಇಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸೀಟು ಸಿಗುವುದು ಕಡಿಮೆ. ಜಿಲ್ಲಾ ಕೇಂದ್ರವೇ ಇನ್ನೂ ಅಭಿವೃದ್ಧಿಯಾಗಿಲ್ಲ. ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳೇ ಇಲ್ಲಿಲ್ಲ.

ಶುದ್ಧ ನೀರು ಮರೀಚಿಕೆಯಾಗಿದೆ. ಈಗಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಹಿಂದೆ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಂದ ಚಾಮರಾಜನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ಆ ನೀರು ಶುದ್ಧವಾಗಿತ್ತು. ರಾಮಸಮುದ್ರದ ಬಳಿ ಪಂಪ್‌ ಹೌಸ್‌, ಮೋಟಾರ್‌ ಎಲ್ಲ ಇವೆ. ಈಗ ಇದು ಸ್ಥಗಿತಗೊಂಡಿದೆ. ನಗರದ ಕನಿಷ್ಠ 10 ವಾರ್ಡ್‌ಗಳಿಗಾದರೂ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯದ ನೀರು ಪೂರೈಸಲು ಕ್ರಮ ವಹಿಸಬೇಕು. ನಮ್ಮಲ್ಲಿ ಐದು ತಾಲ್ಲೂಕುಗಳಿದ್ದು, ಒಂದೇ ಉಪವಿಭಾಗ ಇದ್ದು, ಆಡಳಿತಾತ್ಮಕ ದೃಷ್ಟಿಯಿಂದ ಇನ್ನೊಂದು ಉಪವಿಭಾಗ ಬೇಕು.

–ಸಿ.ಎಂ.ಕೃಷ್ಣಮೂರ್ತಿ, ಜಿಲ್ಲಾ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ

ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಮುಂದೆ ಬರಬೇಕು

ಜಿಲ್ಲೆಯಾಗಿ 25 ವರ್ಷಗಳಾದರೂ ಮೂಲಸೌಕರ್ಯಗಳ ಲಭ್ಯತೆಯಲ್ಲಿ ಜಿಲ್ಲೆ ಇನ್ನೂ ಅಭಿವೃದ್ಧಿಯಾಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ಮೂರ್ನಾಲ್ಕು ರಸ್ತೆಗಳು ಬಿಟ್ಟರೆ ಉಳಿದವೆಲ್ಲವೂ ಹೊಂಡ ಗುಂಡಿಗಳ ರಸ್ತೆಗಳು. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆ ಇನ್ನೂ ಮುಂದೆ ಬರಬೇಕು. ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು ಇರುವುದು ನಿಜ. ಆದರೆ, ನೀಟ್‌, ಸಿಇಟಿಯಂತಹ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆ ಇಲ್ಲಿಲ್ಲ. ಮಕ್ಕಳು ಮೈಸೂರು ಸೇರಿದಂತೆ ಇತರ ನಗರಗಳನ್ನು ಅವಲಂಬಿಸಬೇಕಿದೆ. ಜಿಲ್ಲೆಯಲ್ಲಿ ಒಂದೂ ದೈಹಿಕ ಶಿಕ್ಷಣ ತರಬೇತಿ ಸಂಸ್ಥೆ ಇಲ್ಲ. ಬಾಲಕರು ಪದವಿ ತರಗತಿಗಳಿಗೆ ಸರ್ಕಾರಿ ಕಾಲೇಜುಗಳನ್ನೇ ಅವಲಂಬಿಸಬೇಕಿದೆ. ವೃತ್ತಿ ಆಧಾರಿತ ಕೋರ್ಸ್‌ಗಳು ಕಡಿಮೆ ಇವೆ. ಇಂಗ್ಲಿಷ್‌ ಮೇಜರ್‌ ಪದವಿ ಕೋರ್ಸ್‌ಗಳು ಇಲ್ಲಿಲ್ಲ. ಹೀಗಾಗಿ ಇಂಗ್ಲಿಷ್‌ ಭಾಷಾ ಬೋಧಕರ ಕೊರತೆಯೂ ಇದೆ.

– ವಿಜಯಲಕ್ಷ್ಮಿ, ಯೂನಿವರ್ಸಲ್‌ ಸ್ಕೂಲ್‌, ಪ್ರಾಂಶುಪಾಲರು, ಚಾಮರಾಜನಗರ

ಜಾನಪದ ವಿ.ವಿ ಸ್ಥಾಪನೆಯಾಗಲಿ

ದೇಶದೆಲ್ಲೆಡೆ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಆಚರಿಸುವ ಈ ಶುಭಗಳಿಗೆಯಲ್ಲಿ ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರೈಸುತ್ತಿರುವುದು ಸಂತಸದ ಸಂಗತಿ. ಹೆಮ್ಮೆಯ ವಿಚಾರವೂ ಹೌದು. ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ, ಆರೋಗ್ಯ, ಕೃಷಿ ಹಾಗೂ ಕಲೆ ಮತ್ತು ಸಾಹಿತ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಪ್ರಗತಿಯು ಆಶಾದಾಯಕವಾಗಿಲ್ಲ. ಚಾಮರಾಜನಗರ ದಕ್ಷಿಣ ಕರ್ನಾಟಕದ ಜಿಲ್ಲೆಯಾಗಿ ಹಲವು ವೈಶಿಷ್ಟ್ಯ ಒಳಗೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ. ಜಿಲ್ಲೆಯಲ್ಲಿ ಶೇಕಡ 49 ರಷ್ಟು ಅರಣ್ಯವನ್ನು ಹೊಂದಿದ್ದು ಅನೇಕ ಬುಡಕಟ್ಟು ಜನಾಂಗಗಳು ವಾಸಿಸುತ್ತಿವೆ. ಈ ಜನಾಂಗಗಳ ಸಂಸ್ಕೃತಿ ಮತ್ತು ಈ ಭಾಗದ ಜಾನಪದ ಕಲೆ ಉಳಿಸುವ ನಿಟ್ಟಿನಲ್ಲಿ ಸರ್ಕಾರವು ಜಾನಪದ ಮತ್ತು ಕಲಾ ಪ್ರದರ್ಶನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕಾಗಿದೆ. ಅನೇಕ ಬಗೆಯ ಔಷಧ ಸಸ್ಯಗಳು ಇಲ್ಲಿರುವುದರಿಂದ ಆಯುರ್ವೇದಿಕೆಎ ಸಂಶೋಧನಾಲಯವನ್ನು ಸ್ಥಾಪಿಸಬೇಕು

–ಮದ್ದೂರು ದೊರೆಸ್ವಾಮಿ, ಸಾಹಿತಿ, ಕೊಳ್ಳೇಗಾಲ

ಮುಂದುವರಿದ ಜಿಲ್ಲೆಯಾಗಲಿ

ಜಿಲ್ಲೆಯಾಗಿ 25 ವರ್ಷ ಆಗುತ್ತಿದೆ. ಆದರೆ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ಯಾವಾಗಲೂ ಆಮೆಗತಿಯಲ್ಲಿ ನಡೆಯುತ್ತದೆ. ಗುಣಮಟ್ಟವೂ ಕಳಪೆಯಾಗಿರುತ್ತದೆ. ಹೀಗಾದರೆ ನಮ್ಮದು ಹಿಂದುಳಿದ ಜಿಲ್ಲೆಯಾಗಿಯೇ ಉಳಿಯಲಿದೆ. ಮುಂದುವರಿದ ಜಿಲ್ಲೆಯನ್ನಾಗಿ ಮಾಡುವುದಕ್ಕೆ ಜನ ಪ್ರತಿನಿಧಿಗಳು ಅಧಿಕಾರಿಗಳು ಶ್ರಮ ವಹಿಸಬೇಕು. ಸಾರ್ವಜನಿಕರು ಖಂಡಿತವಾಗಿಯೂ ಸಹಕಾರ ಕೊಟ್ಟೇ ಕೊಡುತ್ತಾರೆ.

ಜಿಲ್ಲೆಯಲ್ಲಿ ಉತ್ತಮವಾದ ಪ್ರವಾಸಿ ತಾಣಗಳಿವೆ. ಅವುಗಳನ್ನು ಮೊದಲು ಅಭಿವೃದ್ದಿ ಪಡಿಸಬೇಕು ಹಾಗೂ ಹೆದ್ದಾರಿಗಳ ಅಭಿವೃದ್ಧಿ ತ್ವರಿತವಾಗಿ ಆಗಬೇಕು. ಕೈಗಾರಿಕೆಗಳನ್ನು ಆಕರ್ಷಿಸಲು ಕ್ರಮ ವಹಿಸಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗಿ ಜಿಲ್ಲೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿದೆ.

- ಮತೀನ್,ಮುಖಂಡ, ಕೊಳ್ಳೇಗಾಲ

ದೂರ ದೃಷ್ಟಿಯ ಯೋಜನೆಗಳಿಲ್ಲ

ಜಿಲ್ಲೆಗೆ 25 ವರ್ಷ ತುಂಬುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ದೂರ ದೃಷ್ಟಿಯ ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಬೆಳವಣಿಗೆ ನಿಂತ ನೀರಾಗಿದೆ. ಹರ್ಷ ಗುಪ್ತರಂತಹ ಜಿಲ್ಲಾಧಿಕಾರಿಗಳ ಕೊರತೆ ಮತ್ತು ಯೋಜನೆ ರೂಪಿಸುವಲ್ಲಿ ಯಾವುದೇ ಮಾನದಂಡವಿಲ್ಲದ ಕಾಮಗಾರಿಗಳು ಜಿಲ್ಲೆಯ ಅಂದವನ್ನು ಕೆಡಿಸಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಚಿಸಿ ಕಾರ್ಯಕ್ರಮ ರೂಪಿಸಲಿ.

– ಮಲ್ಲಿಕಾರ್ಜುನ ಸ್ವಾಮಿ ದುಗ್ಗಹಟ್ಟಿ,ಜಿಲ್ಲಾಧ್ಯಕ್ಷ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು.

ಅನುದಾನ ತರುವುದು ಮುಖ್ಯ

ಜಿಲ್ಲೆಯ ಅಭಿವೃದ್ಧಿ ಬಗ್ಗೆ ರಾಜಕಾರಣಿಗಳು ಕಾಳಜಿ ವಹಿಸುತ್ತಿಲ್ಲ. ಒಂದು ಪ್ರದೇಶ ಅಭಿವೃದ್ಧಿ ಹೊಂದಲು ಅನುದಾನ ಮುಖ್ಯ. ಜಿಲ್ಲೆಗೆ ಸಾಕಷ್ಟು ಅನುದಾನ ಬರುತ್ತಿಲ್ಲ. ಬಂದಿರುವ ಅನುದಾನವೂ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ವಿನಿಯೋಗ ಆಗುತ್ತಿಲ್ಲ. ಕುಡಿಯುವ ನೀರಿಗೆ ಹಲವು ಯೋಜನೆಗಳು ಬಂದಿದ್ದರೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ.‌ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮನಸ್ಸು ಮಾಡಿದಾಗ ಮಾತ್ರ ಜಿಲ್ಲೆ ಅಭಿವೃದ್ಧಿ ಪಡಿಸಲು ಸಾಧ್ಯ.

– ಕೆ.ಎಂ.ಮಹದೇವಸ್ವಾಮಿ. ಕೆಂಪನಪುರ. ಚಾಮರಾಜನಗರ ರೋಟರಿ ಅಧ್ಯಕ್ಷ

ಧಾರ್ಮಿಕ ಕ್ಷೇತ್ರಗಳ ಮಹತ್ವ ಅರಿತಿಲ್ಲ

ಕರ್ನಾಟಕದ ದಕ್ಷಿಣ ತುತ್ತ ತುದಿಯಲ್ಲಿ ನಿಸರ್ಗದತ್ತ ಧಾರ್ಮಿಕ ಕ್ಷೇತ್ರಗಳಿದ್ದರೂ ಅವುಗಳನ್ನು, ನಿಸರ್ಗದತ್ತ ಚೆಲುವನ್ನು ಜನ ಸಮೂಹಕ್ಕೆ ಪರಿಚಯಿಸುವ ಕೆಲಸ ಆಗಿಲ್ಲ. ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ಕೆಲಸವನ್ನು ಇನ್ನು ಕಾರ್ಯರೂಪಕ್ಕೆ ತಂದಿಲ್ಲ. ಇದರಿಂದ ನಿಸರ್ಗದತ್ತ ಕ್ಷೇತ್ರಗಳು ಬಣಗುಟ್ಟುತ್ತಿವೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಬೇಕು.

ಅನಂತ ಪದ್ಮನಾಭ,ತಿರುಪತಿ ತಿರುಮಲ ಪ್ರತಿಷ್ಠಾನ ಅಧ್ಯಕ್ಷ,ಯಳಂದೂರು

ಜಿಲ್ಲೆಯ ಮಹತ್ವದ ಅರಿವಿಲ್ಲ

ಕವಿ ಕಲಾವಿದರು ಮತ್ತು ಸ್ವಾತಂತ್ರ ಹೋರಾಟಗಾರರ ನೆಲೆಯಾದ ಜಿಲ್ಲೆಯ ಮಹನೀಯರನ್ನು ಪರಿಚಯಿಸುವ ಕೆಲಸ ಇನ್ನು ನಡೆದಿಲ್ಲ. ಜೈನ ಮತ್ತು ಹಿಂದೂ ದೇವಾಲಯಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಜಿಲ್ಲೆಯ ಐತಿಹಾಸಿಕ ಮತ್ತು ಚಾರಿತ್ರಿಕ ಮಹತ್ವವನ್ನು ಬಿಂಬಿಸಬೇಕಿದೆ. ಯಳಂದೂರು ತಾಲ್ಲೂಕಿನ ಸುತ್ತಮುತ್ತಲ ಜಲಾವರಗಳನ್ನು ಪರಿಚಯಿಸುವ ಕೆಲಸ ಆಗಬೇಕಾಗಿದೆ.

ಮುರಳಿ ಕೃಷ್ಣ,ಮುಖಂಡ,ಯಳಂದೂರು

ಇಚ್ಛಾ ಶಕ್ತಿಯ ಕೊರತೆ

ಜಿಲ್ಲೆಯ ಅಭಿವೃದ್ಧಿ ಬಗ್ಗೆ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಜಿಲ್ಲೆಯು ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ, ಜನಪದೀಯವಾಗಿ ಶ್ರೀಮಂತಿಕೆ ಹೊಂದಿದೆ. ಇದಕ್ಕೆ ಪೂರಕವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. 25 ವರ್ಷಗಳಲ್ಲಿ ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರ ಎಷ್ಟು ಅಭಿವೃದ್ಧಿಯಾಗಬೇಕಿತ್ತು? ಜಿಲ್ಲೆಯ ಕೇಂದ್ರ ಸ್ಥಾನ ಎನ್ನುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಪ್ರೇಕ್ಷಣೀಯ ಸ್ಥಳಗಳು ಹೇರಳವಾಗಿವೆ. ಇವುಗಳನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕಾಗಿ ರಾಜಕಾರಣಿಗಳು ಸಣ್ಣತನ ಬಿಡಬೇಕು.

–ಮಹದೇವಸ್ವಾಮಿ, ಬಸವಟ್ಟಿ, ಚಾಮರಾಜನಗರ ತಾಲ್ಲೂಕು

ಕೈಗಾರಿಕೆ ಪ್ರವಾಸೋದ್ಯಮಕ್ಕೆ ಬೇಕಿದೆ ಉತ್ತೇಜನ

ಜಿಲ್ಲೆ ಪ್ರವಾಸಿ ತಾಣಗಳ ಬೀಡು. ಧಾರ್ಮಿಕ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ ಇದೆ. ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಪ್ರವಾಸಿಗರು ಬರುತ್ತದೆ. ಅರಣ್ಯ ಪ್ರದೇಶದಲ್ಲಿ 6 ಗಂಟೆಯ ನಂತರ ಸಂಚಾರಕ್ಕೆ ಅವಕಾಶ ಇಲ್ಲ. ಇಂತಹ ನಿಬಂಧನೆಗಳನ್ನು ಸ್ವಲ್ಪ ಸಡಿಲಿಕೆ ಮಾಡಬೇಕು. ಕೈಗೆಟುಕುವ ದರದಲ್ಲಿ ಸಿಗುವ ಹೋಟೆಲ್‌ಗಳನ್ನು ಸ್ಥಾಪಿಸಬೇಕು. ನಮ್ಮ ತಾಲ್ಲೂಕಿನಲ್ಲೇ ಸುವರ್ಣಾವತಿ, ಚಿಕ್ಕಹೊಳೆ ಅಣೆಕಟ್ಟೆ ಇದೆ. ಇವುಗಳು ರಾಷ್ಟ್ರೀಯ ಹೆದ್ದಾರಿಯ ಪ‍ಕ್ಕದಲ್ಲೇ ಇವೆ. ಕೆಆರ್‌ಎಸ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ ಇಲ್ಲಿಗೂ ಪ್ರವಾಸಿಗರು ಬರುತ್ತಾರೆ.

ಜಿಲ್ಲೆಯಲ್ಲಿ ಉದ್ಯಮ ಆಕರ್ಷಣೆಗೆ ಜಿಲ್ಲಾಡಳಿತ ಪ್ರಯತ್ನ ಪಡುತ್ತಿದೆ. ಇನ್ನಷ್ಟು ಕೆಲಸ ಆಗಬೇಕು. ರಸ್ತೆಗಳು ಅಭಿವೃದ್ಧಿಯಾಗಬೇಕು. ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಉತ್ಪನ್ನಗಳ ಪ್ರದರ್ಶನಕ್ಕೆ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಬೇಕು.

–ಪ್ರಭಾಕರ್‌, ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆಯ ಜಿಲ್ಲಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT