ಶುಕ್ರವಾರ, ಜುಲೈ 1, 2022
27 °C
ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ: ಅರ್ಜಿ ಪಡೆಯಲು ಸರತಿ ಸಾಲು, ದಾಖಲಾತಿ ಹೆಚ್ಚುವ ನಿರೀಕ್ಷೆ

ಪಿಯುಸಿ: ವಾಣಿಜ್ಯ, ವಿಜ್ಞಾನಕ್ಕೆ ಬೇಡಿಕೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಲೇ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಬಿರುಸು ಪಡೆದಿದ್ದು, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಕ್ಕೆ ಸೇರಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. 

ಜಿಲ್ಲೆಯಲ್ಲಿ 61 ಪಿಯು ಕಾಲೇಜುಗಳಿವೆ. ಈ ಪೈಕಿ 34 ಖಾಸಗಿ ಕಾಲೇಜುಗಳು. 24 ಸರ್ಕಾರಿ ಹಾಗೂ ಏಳು ಅನುದಾನಿತ ಕಾಲೇಜುಗಳಿವೆ. 

ಬಹುತೇಕ ಎಲ್ಲ ಕಾಲೇಜುಗಳಲ್ಲೂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿವೆ. ಖಾಸಗಿ ಕಾಲೇಜುಗಳಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಸಮಾನವಾದ ಬೇಡಿಕೆ ಇದ್ದು, ಸರ್ಕಾರಿ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಸೇರಲು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. 

ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ (ಶೇ 92.13) ಬಂದಿದ್ದು, ಪಿಯುಸಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರಬಹುದು ಎಂಬ ನಿರೀಕ್ಷೆಯಲ್ಲಿ ಪಿಯು ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜುಗಳ ಆಡಳಿತ ಮಂಡಳಿಗಳು ಇವೆ. 

ಕಾಲೇಜುಗಳಲ್ಲೂ ದಾಖಲಾತಿಗಾಗಿ ಅರ್ಜಿ ಪಡೆಯಲು ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ. 

ಖಾಸಗಿ ಕಾಲೇಜುಗಳಲ್ಲಿ ಅರ್ಜಿಗಳ ವಿತರಣೆ ಹಾಗೂ ದಾಖಲಾತಿ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಸರ್ಕಾರಿ ಕಾಲೇಜುಗಳಲ್ಲಿ ನಿಧಾನವಾಗಿದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಅರ್ಜಿ ಪಡೆಯಲು ಕೊನೆಯ ದಿನವೂ ಮುಕ್ತಾಯವಾಗಿದೆ. ಜೂನ್‌ 9ರಂದು ಪಿಯು ತರಗತಿಗಳು ಆರಂಭವಾಗಲಿವೆ. 

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ನಗರ ಹಾಗೂ ಪಟ್ಟಣ ಪ್ರದೇಶದ ಮಕ್ಕಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ವಾಣಿಜ್ಯ ವಿಷಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆರ್ಥಿಕವಾಗಿ ಪ್ರಬಲವಾಗಿರುವವರು ಮೈಸೂರಿನ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗುತ್ತಿದ್ದಾರೆ.

‘ಮಗಳಿಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳು ಬಂದಿವೆ. ಆಕೆಗೆ ವಾಣಿಜ್ಯ ವಿಷಯದಲ್ಲಿ ಆಸಕ್ತಿ. ಹಾಗಾಗಿ, ಅದೇ ವಿಭಾಗಕ್ಕೆ ಸೇರಲು ಮುಂದಾಗಿದ್ದಾಳೆ’ ಎಂದು ಬೆಂಡರವಾಡಿಯ ಮಹದೇವಮ್ಮ ಅವರು ತಿಳಿಸಿದರು.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿಗೆ ಮಗಳನ್ನು ಸೇರಿಸಲು ಮುಂದಾಗಿರುವ ತಾಲ್ಲೂಕಿನ ಮೇಲಾಜಿಪುರದ ಮಹೇಂದ್ರ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ‘ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಮಗಳು ಹೇಳುತ್ತಿದ್ದಾಳೆ. ಅದೇ ವಿಭಾಗಕ್ಕೆ ಸೇರಿಸಲು ಬಂದಿದ್ದೇನೆ’ ಎಂದು ಅವರು ಹೇಳಿದರು. 

‘ನಮ್ಮಲ್ಲಿ ಮಕ್ಕಳು ಹೆಚ್ಚಾಗಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಾಣಿಜ್ಯ ವಿಭಾಗಕ್ಕೂ ಬೇಡಿಕೆ ಇದೆ. ಕಲಾ ವಿಭಾಗಕ್ಕೆ ಸೇರುತ್ತಿರುವವರ ಸಂಖ್ಯೆ ಕಡಿಮೆ ಇದೆ’ ಎಂದು ಕೊಳ್ಳೇಗಾಲದ ನಿಸರ್ಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮ್ಮಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿಗೆ ಸೇರುವವರ ಸಂಖ್ಯೆ ಹೆಚ್ಚಿದೆ. ಕಲಾ ವಿಷಯದಲ್ಲಿ ಆಸಕ್ತಿ ತೋರಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಒಟ್ಟಾರೆಯಾಗಿ ಈ ಬಾರಿಯ ಚಿತ್ರಣ ನೋಡುವುದಾದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದ್ದರೂ, ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿಲ್ಲ’ ಎಂದು ನಗರದ ಜೆಎಸ್‌ಎಸ್‌ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲ ದೇವರಾಜ್‌ ಅವರು ಹೇಳಿದರು. 

‘ವಿಜ್ಞಾನ ವಿಷಯದಲ್ಲೂ ಪಿಸಿಎಂಬಿಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ವಾಣಿಜ್ಯ ವಿಷಯದಲ್ಲಿ ಇಬಿಎಸಿಎಸ್‌ (ಅರ್ಧಶಾಸ್ತ್ರ, ಬಿಸಿನೆಸ್‌ ಸ್ಟಡೀಸ್‌, ಲೆಕ್ಕಶಾಸ್ತ್ರ ಹಾಗೂ ಕಂಪ್ಯೂಟರ್‌ ವಿಜ್ಞಾನ) ಕೋರ್ಸ್‌ ಅನ್ನು ಹೆಚ್ಚು ವಿದ್ಯಾರ್ಥಿಗಳು ಸೇರುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು. 

ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ನಿಧಾನ

ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಪಿಯುಸಿ ದಾಖಲಾತಿ ಪ್ರಕ್ರಿಯೆ ನಿಧಾನವಾಗಿದೆ. ಕಾಲೇಜುಗಳ ಪ್ರಾಂಶುಪಾಲರಾದಿಯಾಗಿ ಬೋಧಕ ವೃಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೆರಳಿರುವುದರಿಂದ ಸದ್ಯ, ಅರ್ಜಿಗಳನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆ.

‘ವಾರದಿಂದ 10 ದಿನಗಳ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಸದ್ಯ, ಅತಿಥಿ ಉಪನ್ಯಾಸಕರು, ಕಾಲೇಜು ಸಿಬ್ಬಂದಿಯನ್ನು ಬಳಸಿಕೊಂಡು ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಪ್ರಾಂಶುಪಾಲರು, ಉಪನ್ಯಾಸಕರು ಬಂದ ನಂತರ ದಾಖಲಾತಿ ಆರಂಭವಾಗಲಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗಮಲ್ಲೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೆಲವು ವರ್ಷಗಳಿಂದೀಚೆಗೆ ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಲಾ ವಿಭಾಗವನ್ನು ಹೆಚ್ಚಿನವರು ಇಷ್ಟ ಪಡುವುದಿಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಗಳು ಕಷ್ಟ. ಜಿಲ್ಲೆಯಲ್ಲಿ ಸಮರ್ಪಕವಾದ ಕೋಚಿಂಗ್‌ ವ್ಯವಸ್ಥೆ ಇಲ್ಲ ಎಂಬ ಕಾರಣಕ್ಕೆ ಮೈಸೂರು ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ’ ಎಂದು ಅವರು ವಿವರಿಸಿದರು. 

‘ವಾಣಿಜ್ಯ ಕೋರ್ಸ್‌ ಮಾಡಿದವರಿಗೆ ಈಗ ಉದ್ಯೋಗಾವಕಾಶ ಹೆಚ್ಚಿದೆ. ಬ್ಯಾಂಕಿಂಗ್‌ ಕ್ಷೇತ್ರಗಳು, ತೆರಿಗೆ, ವ್ಯಾಪಾರ, ಉದ್ದಿಮೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನೂ ಗಳಿಸಬಹುದು. ಹಾಗಾಗಿ, ಹೆಚ್ಚು ವಿದ್ಯಾರ್ಥಿಗಳು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ನಾಗಮಲ್ಲೇಶ್‌ ಅಭಿಪ್ರಾಯಪಟ್ಟರು. 

---

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಎಸ್ಸೆಸ್ಸೆ‌ಲ್ಸಿ ಫಲಿತಾಂಶ ಉತ್ತಮವಾಗಿರುವುದರಿಂದ ದಾಖಲಾತಿ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ
ನಾಗಮಲ್ಲೇಶ್‌, ಡಿಡಿಪಿಯು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು