ಸೋಮವಾರ, ಆಗಸ್ಟ್ 15, 2022
28 °C
ಹನೂರು: 50 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವವ ಪುಟ್ಟಮಾದಯ್ಯ

ಬದುಕು ಕೊಟ್ಟ ತಮಟೆ ವಾದನ ಕಲೆ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಕುತೂಹಲಕ್ಕಾಗಿ ಕಲಿತ ಕಲೆ ಇಂದು ಇವರ ಬದುಕಿಗೆ ದಾರಿಯಾಗಿದೆ. ತಾವು‌ ಕಲಿತ ಕಲೆ ತನ್ನ ತಲೆಮಾರಿಗೆ ಕೊನೆಯಾಗಬಾರದು ಎಂಬ ದೃಷ್ಟಿಯಿಂದ ಗ್ರಾಮದ ಯುವಕರಿಗೂ ತರಬೇತಿ ನೀಡುತ್ತಿದ್ದಾರೆ ಚೆನ್ನಾಲಿಂಗನಹಳ್ಳಿ ಗ್ರಾಮದ ಪುಟ್ಟಮಾದಯ್ಯ.

ಗ್ರಾಮದಲ್ಲಿ ತಮಟೆ ಪುಟ್ಟಮಾದಯ್ಯ ಎಂದೇ ಗುರುತಿಸಿಕೊಂಡಿರುವ ಇವರು, 50 ವರ್ಷಗಳಿಂದಲೂ ತಮಟೆ ವಾದನದಲ್ಲಿ ಪಳಗಿದ್ದಾರೆ. ತಮಟೆ ವಾದನಕಲೆಯನ್ನು ಪುಟ್ಟಮಾದಯ್ಯ ಅವರು ಕಲಿತಿದ್ದು ಹಿರಿಯರಿಂದ. ಈಗ 70ರ ಹರೆಯದಲ್ಲೂ ಅವರು ತಮಟೆ ವಾದನವನ್ನು ಬಿಟ್ಟಿಲ್ಲ. ತಮ್ಮ ಕಲೆಯನ್ನು ಪ್ರದರ್ಶನ ನೀಡುತ್ತಲೇ ಇದ್ದಾರೆ. 

ಪ್ರಾರಂಭದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ದೂರದ ಊರುಗಳಿಗೆ ಹೋಗಿ ತಮಟೆ ಬಾರಿಸುತ್ತಿದ್ದರು. ಈಗ ವಯಸ್ಸಾಗಿರುವುದರಿಂದ ಪುಟ್ಟಮಾದಯ್ಯ ಅವರ ಕಲಾ ಪ್ರದರ್ಶನ  ಹತ್ತಿರದ ಗ್ರಾಮಗಳಿಗೆ ಸೀಮಿತವಾಗಿದೆ. ಇವರು ತಮಟೆ ವಾದನ ಶುರುಮಾಡಿದರೆ ಪ್ರೇಕ್ಷಕರ ದಂಡೇ ಇವರ ಸುತ್ತ ನಿಲ್ಲುತ್ತದೆ. 

ಪುಟ್ಟಮಾದಯ್ಯ ಅವರಿಗೆ ಬಾಲ್ಯದಲ್ಲಿ ತಮಟೆ ವಾದನದ ಬಗ್ಗೆ ತೀವ್ರ ಕುತೂಹಲ ಇತ್ತು. ಅದೇ ಅವರಿಗೆ ಈಗ ಬದುಕು ಸಾಗಿಸಲು ನೆರವಾಗಿದೆ. 

‘ಮದುವೆ, ದೇವರ ಉತ್ಸವಗಳಿಗೆ ಆಹ್ವಾನವಿರುತ್ತದೆ. ತಂಡದ ಜತೆ ಹೋದರೆ ಅವರು ನೀಡುವ ಸಂಭಾವನೆಯನ್ನು ಎಲ್ಲರೂ ಹಂಚಿಕೊಳ್ಳುತ್ತೇವೆ. ಮೊದಲೆಲ್ಲಾ ನಮ್ಮ ಸಮಕಾಲೀನರು ಬರುತ್ತಿದ್ದರು. ಈಗ ಯುವಕರೇ ಹೆಚ್ಚಿನ ಆಸಕ್ತಿ ತೋರಿಸಿ ನನ್ನ ಜತೆಗೆ ಬರುತ್ತಿದ್ದಾರೆ. ಹೀಗಾಗಿ ನನಗೂ ಸ್ವಲ್ಪ ಹೊರೆ ಕಮ್ಮಿಯಾಗಿದೆ’ ಎಂದು ಪುಟ್ಟಮಾದಯ್ಯ ಹೇಳಿದರು. 

ಯುವಕರಿಗೆ ತರಬೇತಿ: ತಮಟೆ ವಾದನದ ಕಲೆಯನ್ನು ಗ್ರಾಮದ ಯುವಕರಿಗೂ ಹೇಳಿಕೊಡುತ್ತಿದ್ದಾರೆ. ಇದುವರೆಗೆ 10ಕ್ಕೂ ಹೆಚ್ಚು ಜನರು ತಮಟೆ ವಾದನ ಕಲಿತಿದ್ದಾರೆ. ಮತ್ತಷ್ಟು ಜನರಿಗೆ ಹೇಳಿಕೊಡುವ ಆಸೆ ಹೊಂದಿದ್ದಾರೆ. ಈ ಕಲೆ ಮುಂದಿನ ಪೀಳಿಗೆಯವರಿಗೂ ರವಾನೆಯಾಗಬೇಕು ಎಂಬುದು ಅವರ ಆಶಯ. ಹಾಗಾದಾಗ ಮಾತ್ರ ಗ್ರಾಮೀಣ ಭಾಗದ ಈ ದೇಶಿ ಕಲೆಗಳು ಉಳಿಯಲು ಸಾಧ್ಯ ಎಂಬುದು ಪುಟ್ಟಮಾದಯ್ಯ ಅನಿಸಿಕೆ. 

ಇಂದಿನ ತಂತ್ರಜ್ಞಾನ ಯುಗದಲ್ಲೂ ತಮಟೆ ವಾದನಕ್ಕೆ ಪ್ರಾಮುಖ್ಯ ಇದೆಯೇ ಎಂದು ಕೇಳಿದ್ದಕ್ಕೆ, ‘ಎಷ್ಟೇ ತಂತ್ರಜ್ಞಾನ ಮುಂದುವರೆದರೂ ದೇಶಿ ಕಲೆಗಳಿಗೆ ಎಂದಿಗೂ ಅಂತ್ಯವಿಲ್ಲ. ಜಾತ್ರೆಗಳು, ಮದುವೆ, ಉತ್ಸವ, ಮೆರವಣಿಗೆ ಮುಂತಾದವುಗಳು ದೇಶಿ ಕಲೆಗಳನ್ನು ಉಳಿಸಿ ಬೆಳೆಸಲು ಇರುವ ಸಂಗತಿಗಳು. ಇವುಗಳು ಇರುವವರೆಗೂ ದೇಶಿ ಕಲೆಗಳು ಇರಲಿವೆ’ ಎಂದು ವಿಶ್ವಾಸದಿಂದ ಉತ್ತರಿಸಿದರು ಪುಟ್ಟಮಾದಯ್ಯ. 

ಇನ್ನೂ ಎಲೆಮರೆ ಕಾಯಿ

ಐದು ದಶಕಗಳಿಂದ ದೇಶಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಪುಟ್ಟಮಾದಯ್ಯ ಇನ್ನೂ ಎಲೆಮರೆಕಾಯಿಯಂತೆ ಇದ್ದಾರೆ. ಅವರ ಕಲೆಯನ್ನು ಗುರುತಿಸುವ ಕೆಲಸವನ್ನು ಸರ್ಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ಮಾಡಿಲ್ಲ. ಈವರೆಗೆ ಯಾವುದೇ ಗೌರವ, ಸನ್ಮಾನ, ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿಲ್ಲ. 

‘ನಾನು ಕಲಿತ ಕಲೆ ನಾನು‌ ಮರೆಯಾದ ಮೇಲೂ ಉಳಿಯಬೇಕು ಎಂಬ ಆಸೆಯಿದೆ.‌ ಅದಕ್ಕಾಗಿಯೇ ಇದರಲ್ಲಿ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡಿ ಸಿದ್ಧಗೊಳಿಸುತ್ತಿದ್ದೇನೆ. ನಾನು ಹೋದ ಮೇಲೂ ಕಲೆ ಉಳಿದರೆ ನನಗೆ ಅದೇ ಸಾಕು’ ಎಂದು ಪುಟ್ಟಮಾದಯ್ಯ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು