ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಕಾಡ ದಾರಿಯಲ್ಲಿ ಕಂಡ ವಿಸ್ಮಯ ಜಗತ್ತು

ಬಿಆರ್‌ಟಿ: ಇಕೊ ಕ್ಲಬ್‌ಗಳಿಂದ ಮಕ್ಕಳಿಗೆ ಕೀಟ, ಹಕ್ಕಿ, ಪತಂಗ ಪಾಠ
Last Updated 10 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಯಳಂದೂರು: ಹಸಿರು ಚಿಗುರ ಕಾನನದ ದಾರಿ ನೂರೆಂಟು ಪಾಠ ಹೇಳುತ್ತದೆ. ಹುತ್ತಗಳು ವಿಸ್ಮಯಗಳ ಗೂಡಾಗಿ ಕಾಡುತ್ತದೆ. ನೀರ ಒರತೆಗಳ ಬಳಿ ಸಸ್ಯ ವೈವಿಧ್ಯತೆ ಗೋಚರಿಸಿದರೆ, ಹುಲ್ಲಿನಿಂದ ಆಮೃತವಾದ ಶಿಲಾ ಸಮಾಧಿಗಳು ಆದಿವಾಸಿಗಳ ಕಥೆ ಕಟ್ಟಿಕೊಡುತ್ತವೆ. ದಾರಿಯಲ್ಲಿ ಸಿಕ್ಕ ಹಿಕ್ಕೆ, ಲದ್ದಿ ಜೀವ ಜಾಲದಲ್ಲಿನ ಅಗಣಿತ ಪ್ರಾಣಿ ಪ್ರಪಂಚವನ್ನು ಪರಿಚಯಿಸುತ್ತವೆ.

ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಬಿಆರ್‌ಟಿ ಕಾಡಿನಲ್ಲಿ ಆಯೋಜಿಸಿದ್ದ ಇಕೊ ಕ್ಲಬ್‌ ಹಾಗೂ ವನ ದರ್ಶನ ಕಾರ್ಯಕ್ರಮವು ಪರಿಸರ ಮತ್ತು ಪ್ರಾಣಿಗಳ ಬಗ್ಗೆ ನೂರೆಂಟು ವಿಸ್ಮಯಗಳ ಗುಚ್ಛವನ್ನು ಕಟ್ಟಿಕೊಟ್ಟಿತು.

ವಿಶಿಷ್ಟ ಮತ್ತು ವಿಸ್ಮಯಗಳ ಗೂಡು ಬಿಳಿಗಿರಿರಂಗನಬನ. ಇಲ್ಲಿ ಶಾಲಾ ಮಕ್ಕಳು, ಶಿಕ್ಷಕರಿಗೆ ನಾಡಿನ ಪಕ್ಷಿಗಳ ಪರಿಚಯ, ಪರಿಸರ ವಿಜ್ಞಾನ, ಅರಣ್ಯ ಶಾಸ್ತ್ರ, ವನ್ಯ ಜೀವಿಗಳ ಜಗತ್ತಿನ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವತ್ತ ತಜ್ಞರ ಮಾರ್ಗದರ್ಶನ ಇದ್ದರೆ, ವಸುಂಧರೆಯ ಮಡಿಲಿನಲ್ಲಿ ಮನೆ ಮಾಡುವ ಗೆದ್ದಲು, ಸಸ್ಯ ವೈವಿಧ್ಯ ಉಳಿಸುವ ಜೇನು, ಚಿಟ್ಟೆ, ಹುಲಿ, ಆನೆಗಳ ಮೊಗಸಾಲೆ ಉಳಿಸುವ ಜರೂರತ್ತನ್ನು ಎಳೆಯರಿಗೆ ಮನದಟ್ಟು ಮಾಡುತ್ತದೆ.

'ಅರಣ್ಯಗಳು ಪ್ರಾಣವಾಯು ಉತ್ಪಾದಿಸುವ ಶ್ವಾಸಕೋಶ. ಇಲ್ಲಿನ ನಿಸರ್ಗದಲ್ಲಿ ಹಕ್ಕಿ ವಿಸರ್ಜಿಸುವ ಹಿಕ್ಕೆಗಳಲ್ಲಿ ಸಸ್ಯಗಳ ಜೀವತಂತು ಅರಳುತ್ತದೆ. ಆನೆಗಳ ಲದ್ದಿ ಬಿದಿರ ಸಂಕುಲವನ್ನು ಸೃಷ್ಟಿಸುತ್ತದೆ. ನೂರಾರು ಕೀಟಗಳು ಭುವಿಯ ಆಳದ ತಂಪು ಹೆಚ್ಚಿಸಿದರೆ, ಗೆದ್ದಲು ಮಣ್ಣಿನ ಸವಕಳಿ ತಪ್ಪಿಸುತ್ತದೆ. ಇದು ಸಸ್ಯ, ಪ್ರಾಣಿ ಜೀವಗಳ ಅವಲಂಬನೆಯ ಅಗತ್ಯವನ್ನು ಕಲಿಸುತ್ತದೆ' ಎಂದು ಪ್ರಾಣಿ ಶಾಸ್ತ್ರಜ್ಞ ಪ್ರೊ.ಸಿದ್ದರಾಮಯ್ಯ ಹೇಳಿದರು.

ಹಸಿರು ರಾಯಭಾರಿ: ‘ಶಾಲಾ ಚಿಣ್ಣರಿಗೆ ಅಡವಿ-ಕೈತೋಟ, ಬೀಜ ಪ್ರಸಾರ, ಪಕ್ಷಿ ಪ್ರಪಂಚ, ಹೂ ಲೋಕ, ಬೆಟ್ಟದ ಪುಷ್ಪ, ಛದ್ಮವೇಷದ ಪತಂಗ, ಬಳ್ಳಿ, ವೃಕ್ಷಗಳ ಪರಿಚಯಿಸುವ ಕೆಲಸ ಮೊದಲಾಗಬೇಕು. ಹಾಗಾದಾಗ ಮಕ್ಕಳು, ಜೀವನ ಪರ್ಯಂತ ಸಸ್ಯ ಸಂಪತ್ತು ಉಳಿಸುವ ಬಗ್ಗೆ ಆಸಕ್ತಿ ತಳೆಯುತ್ತಾರೆ. ಪ್ರಕೃತಿ ಶಿಬಿರ, ಸಾಕ್ಷ್ಯಚಿತ್ರ, ಕಾಡಿನ ಚಿತ್ರ ಪ್ರದರ್ಶನ, ಸಂವಾದ, ಚಾರಣ ಮಕ್ಕಳನ್ನು ಎಳೆವೆಯಲ್ಲಿ ಹಸಿರಿನ ರಾಯಭಾರಿಗಳಾಗಿ ರೂಪಿಸಲು ಸಾಧ್ಯ’ ಎಂದು ಶಿಕ್ಷಕ ಮಹದೇವಸ್ವಾಮಿ ಹೇಳಿದರು.

‘ಜೀವಜಗತ್ತಿನ ಕಲಿಕೆ ಸಾಧ್ಯ’
‘ಕಾಡಿನ ಮೂಲಕ ಮಳೆ ಋತು ಅಡಿ ಇಡುತ್ತದೆ. ಜಲಾವರಗಳ ಬಳಿ ಹತ್ತಾರು ವನ್ಯಜೀವಿ ಸಂಚರಿಸುತ್ತವೆ. ಅವುಗಳ ಹೆಜ್ಜೆ ಗುರುತು ಜೀವಜಗತ್ತಿನ ಕಲಿಕೆ. ಚಿರತೆ, ಹುಲಿ, ಕಾಡೆಮ್ಮೆ, ಜಿಂಕೆ, ಸೀಳು ನಾಯಿಗಳ ಪ್ರತಿ ನಡಿಗೆ ತೇವದ ನೆಲದಲ್ಲಿ ಹಚ್ಚಾಗುತ್ತದೆ. ಇಂತಹ ಸೂಕ್ಷ್ಮಗಳನ್ನು ಗಮನಿಸಲು, ಗುರುತಿಸಲು ಈ ಕಾರ್ಯಕ್ರಮ ನೆರವಾಗಿದೆ’ ಎಂಬುದು ವಿದ್ಯಾರ್ಥಿನಿ ಶ್ರೇಯಾ ಮಾತು.

‘ಕಾಡು ಪ್ರಾಣಿಗಳ ಆವಾಸದಲ್ಲಿ ಮಾನವನ ಹಸ್ತಕ್ಷೇಪ ನಿಲ್ಲಿಸಬೇಕು. ಇದರಿಂದ ವನ್ಯಜೀವಿ ಮತ್ತು ಮಾನವ ಸಂಘರ್ಷ ತಪ್ಪಲಿದೆ. ವನ ದರ್ಶನ ಕಾರ್ಯಕ್ರಮವು ಅರಣ್ಯ, ವನ್ಯಜೀವಿ ಸಂಕುಲಗಳ ಬಗ್ಗೆ ವಿಸ್ಮಯಕಾರಿಯಾದಂತಹ ಹಲವು ಮಾಹಿತಿಗಳನ್ನು ಒದಗಿಸಿತು’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ವರ್ಷಿಣಿ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT