ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಶಿಕ್ಷಣ ವಂಚಿತ ಮಕ್ಕಳನ್ನು ಶಾಲೆಗೆ ಸೇರಿಸಲು ಸೂಚನೆ

‘ಪ್ರಜಾವಾಣಿ’ ವರದಿಗೆ ಸ್ಪಂದಿಸಿ ಅಧಿಕಾರಿಗಳ ಸಭೆ ಕರೆದ ನ್ಯಾಯಾಧೀಶ ಶ್ರೀಧರ ಎಂ.
Last Updated 9 ಫೆಬ್ರುವರಿ 2023, 6:21 IST
ಅಕ್ಷರ ಗಾತ್ರ

ಚಾಮರಾಜನಗರ: ವಿವಿಧ ಕಾರಣಗಳಿಂದಾಗಿ ಶಾಲೆಗಳಿಂದ ಹೊರಗುಳಿದಿರುವ ಜಿಲ್ಲೆಯ 634 ಮಕ್ಕಳನ್ನು ಗುರುತಿಸಿ ಅವರನ್ನು ಮತ್ತೆ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಅಧಿಕಾರಿಗಳಿಗೆ ಬುಧವಾರ ಸೂಚಿಸಿದರು.

ಕೈಗೊಂಡಿರುವ ಕ್ರಮಗಳ ಬಗ್ಗೆ ಅನುಪಾಲನಾ ವರದಿ ನೀಡುವಂತೆಯೂ ಅವರು ತಾಕೀತು ಮಾಡಿದರು.

‘ಪ್ರಜಾವಾಣಿ’ಯ ಜನವರಿ 31ರ ಸಂಚಿಕೆಯಲ್ಲಿ ‘634 ಮಕ್ಕಳು ಶಾಲೆಯಿಂದ ಹೊರಗಡೆ’ ಎಂಬ ವಿಶೇಷ ವರದಿಗೆ ಸ್ಪಂದಿಸಿರುವ ಶ್ರೀಧರ ಅವರು ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎನ್‌ಜಿಒಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಈ ವಿಚಾರವನ್ನು ಚರ್ಚಿಸಿದರು. ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು.

ಜಾಗೃತಿ ಮೂಡಿಸಿ: ‘ಶಾಲೆಗೆ ಹೋಗದಿರುವ ಮಕ್ಕಳ ಪೋಷಕರಿಗೆ ತಿಳಿವಳಿಕೆ ನೀಡಿ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ಈ ಬಗ್ಗೆ ಕ್ರಿಯಾ ಯೋಜನೆಯನ್ನು ರೂಪಿಸಬೇಕು’ ಎಂದು ಶ್ರೀಧರ ಅವರು ಸೂಚಿಸಿದರು.

‘ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವ ಕೆಲಸ ಆಗಬೇಕು. ಅದಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಶಾಲೆಗೆ ಹೋಗದಿರುವ 634 ಮಕ್ಕಳಿಗೆ ಸಂಬಂಧಿಸಿದ ತಾಲ್ಲೂಕುವಾರು ಶಾಲಾ ದಾಖಲಾತಿ ಹಾಗೂ ಮಕ್ಕಳ ಹಾಜರಾತಿಯ ಮಾಹಿತಿಗಳನ್ನೊಳಗೊಂಡ ಸಂಪೂರ್ಣ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು’ ಎಂದೂ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಮಹದೇವಸ್ವಾಮಿ, ಕಾರ್ಮಿಕ ಇಲಾಖೆಯ ಮಹೇಶ್‌, ವೀಣಾ, ಶಿಕ್ಷಣ ಇಲಾಖೆಯ ಸಂಯೋಜನಾಧಿಕಾರಿ ಲಕ್ಷ್ಮಿಪತಿ, ಎನ್‌ಜಿಒ ಪ್ರತಿನಿಧಿಗಳು ಇದ್ದರು.

ಅಧಿಕಾರಿಗಳ ಪತ್ರ: ಸಭೆಯ ಬಳಿಕ ಶ್ರೀಧರ ಅವರು, ಸಭೆಯಲ್ಲಿ ಚರ್ಚಿಸಿರುವ ಅಂಶಗಳು ಹಾಗೂ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗಳು, ಡಿಡಿಪಿಐ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಪತ್ರವನ್ನೂ ಬರೆದಿದ್ದಾರೆ.

ಹಲವು ಕಾರಣ: ಜಿಲ್ಲೆಯಲ್ಲಿ 634 ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗೆ ಉಳಿದಿರುವುದನ್ನು ಶಿಕ್ಷಣ ಇಲಾಖೆ ಸಮೀಕ್ಷೆ ಮೂಲಕ ಗುರುತಿಸಿತ್ತು.

ಶಾಲೆಗೆ ಕಳುಹಿಸಲು ಪೋಷಕರ ನಿರಾಸಕ್ತಿ, ಮಕ್ಕಳಲ್ಲಿರುವ ನಿರುತ್ಸಾಹ, ಸಾರಿಗೆ ಸೌಲಭ್ಯ ಇಲ್ಲದಿರುವುದು, ಹೆಣ್ಣು ಮಕ್ಕಳ ವೈಯಕ್ತಿಕ ಸಮಸ್ಯೆ, ವಲಸೆ , ಶಾಲೆ ದೂರ ಉಳಿದಿರುವುದು, ದುಡಿಮೆ ಸೇರಿದಂತೆ 16 ಕಾರಣಗಳಿಂದಾಗಿ ಮಕ್ಕಳು ಶಾಲೆಯಿಂದ ವಂಚಿತರಾಗಿರುವುದು ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT