ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಾರ್ಜನೆಗೆ ಭಾಷೆಯ ಹಂಗಿಲ್ಲ, ಅನುಭವ ಮಾಗದೆ ಸಾಹಿತ್ಯ ಸಾಧ್ಯವಿಲ್ಲ

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮಹಾದೇವ ಶಂಕನಪುರ ಅಭಿಮತ
Last Updated 8 ಫೆಬ್ರುವರಿ 2023, 6:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ (ಫೆ.8) ಚಾಲನೆ ಕೊಳ್ಳೇಗಾಲದಲ್ಲಿ ಚಾಲನೆ ಸಿಗಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮಹಾದೇವ ಶಂಕನಪುರ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಅಕ್ಷರ ಜಾತ್ರೆಯ ಹೊತ್ತಿನಲ್ಲಿ ಜಿಲ್ಲೆ, ಜಾನಪದ ಕಲೆ, ಕನ್ನಡ ಭಾಷೆ, ತಮ್ಮ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಅವರೊಂದಿಗೆ ನಡೆಸಿರುವ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ:–

ಪ್ರಶ್ನೆ: ಹುಟ್ಟೂರಲ್ಲೇ ನಡೆಯುತ್ತಿರುವ ಸಮ್ಮೇಳನದ ಸರ್ವಾಧ್ಯಕ್ಷ ಹುದ್ದೆ ಅಲಂಕರಿಸುತ್ತಿದ್ದೀರಿ. ನಿಮಗೆ ಏನು ಅನಿಸುತ್ತಿದೆ?

ಉತ್ತರ: ನಾನು ಹುಟ್ಟಿದ, ಬಾಲ್ಯ ಕಳೆದ, ಓದಿದ ಮತ್ತು ವೃತ್ತಿ ಮಾಡಿದ ಊರಿದು. ನನ್ನ ಕರ್ಮಭೂಮಿ. ಅಲ್ಲಿಯೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ಸಿಕ್ಕಿರುವ ಅಪರೂಪದ ಅವಕಾಶ. ಜಿಲ್ಲೆಯ ಜಾನಪದ, ಸಾಂಸ್ಕೃತಿಕ ಪರಂಪರೆ ಬಗ್ಗೆ ಸದಾ ಧ್ಯಾನಸ್ಥ ಸ್ಥಿತಿಯಲ್ಲಿರುವ ನನಗೆ ಒಲಿದ ಬಹುದೊಡ್ಡ ಜವಾಬ್ದಾರಿ.

ಪ್ರಶ್ನೆ: ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆ ಇದೆಯೇ? ಗಡಿ ಜಿಲ್ಲೆಯಲ್ಲಿ ನಡೆಯುವ ನುಡಿ ಜಾತ್ರೆಯ ಪ್ರಾಮುಖ್ಯ ಏನು?

ಉತ್ತರ: ಖಂಡಿತವಾಗಿಯೂ ಅವಶ್ಯಕತೆ ಇದೆ. ಗ್ರಾಮೀಣ‌, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿರುವ ಬರಹಗಾರರಿಗೆ, ಕವಿಗಳಿಗೆ ಲೇಖಕರಿಗೆ ಸಾಹಿತ್ಯ ಸಮ್ಮೇಳನಗಳ ವೇದಿಕೆ ಚಿಮ್ಮು ಹಲಗೆಯಾಗುತ್ತವೆ. ಎಲ್ಲರಿಗೂ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗಿಯಾಗಲು, ತಮ್ಮ ಸಾಹಿತ್ಯದ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗುವುದಿಲ್ಲ. ಅಂತಹವರಿಗೆ ಅವಕಾಶ ಸಿಗಬೇಕಾದರೆ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಬೇಕು.

ಗಡಿ ಜಿಲ್ಲೆಯಲ್ಲಿ ನಡೆಯುವ ಸಮ್ಮೇಳನಕ್ಕೆ ಇತರ ಕಡೆಗಳಿಗಿಂತಲೂ ಹೆಚ್ಚು ಮಹತ್ವ ಇದೆ. ನಮ್ಮ ಜಿಲ್ಲೆಯನ್ನೇ ತೆಗೆದುಕೊಂಡರೆ, ನಾವು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದ್ದೇವೆ. ತಮಿಳು ಹಾಗೂ ಮಲಯಾಳದೊಂದಿಗೆ ಭಾಷೆ ಹಾಗೂ ಸಂಸ್ಕೃತಿಯ ಕೊಡುಕೊಳ್ಳುವಿಕೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳನ್ನು ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳಲ್ಲಿ ಚರ್ಚೆಯೂ ನಡೆಯಬೇಕು.

ಪ್ರಶ್ನೆ: ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಘೋಷಣೆಗಷ್ಟೇ ಸೀಮಿತವಾಗಿರುತ್ತಲ್ಲವೇ?

ಉತ್ತರ: ಅಂತಹ ಆರೋಪ ದೀರ್ಘ ಸಮಯದಿಂದ ಕೇಳಿಬರುತ್ತಿದೆ. ನಿರ್ಣಯ
ಗಳನ್ನು ಅನುಷ್ಠಾನಗೊಳಿಸುವುದು ಜನಪ್ರನಿಧಿಗಳು, ಸರ್ಕಾರಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಅವರು ಗಮನಹರಿಸಬೇಕು.

ಪ್ರಶ್ನೆ: ಶಿಕ್ಷಣ ಭಾಷಾ ಮಾಧ್ಯಮ ಯಾವುದಾಗಿರಬೇಕು? ಕನ್ನಡವೇ ಅಥವಾ ಇಂಗ್ಲೀಷೇ?

ಉತ್ತರ: ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಿಕ್ಷಣಕ್ಕೇ ಆದ್ಯತೆ ನೀಡಬೇಕು. ಕನ್ನಡ ನಮ್ಮ ಅಸ್ಮಿತೆ. ಶಿಕ್ಷಣ, ಉದ್ಯೋಗದಲ್ಲಿ ಮಾತೃಭಾಷೆಗೇ ಪ್ರಾಮುಖ್ಯ ನೀಡಬೇಕು. ನಮ್ಮ ಪ್ರತಿಭೆ, ಅಸ್ಮಿತೆಯನ್ನು ಎತ್ತಿ ಹಿಡಿಯುವುದಕ್ಕೆ, ಅಭಿವ್ಯಕ್ತಿಗೊಳಿಸುವುದಕ್ಕೆ ಕನ್ನಡ ಹೆಚ್ಚು ಪೂರಕ. ಅಂದ ಮಾತ್ರಕ್ಕೆ ಇಂಗ್ಲಿಷ್‌ ಅಥವಾ ಇನ್ಯಾವುದೇ ಭಾಷೆಯನ್ನು ತಿರಸ್ಕರಿಸಬೇಕು ಎಂದಲ್ಲ. ಜ್ಞಾನಾರ್ಜನೆಗೆ ಭಾಷೆಯ ಹಂಗಿಲ್ಲ. ಜಗತ್ತಿನ ವಿವಿಧ ವಿಚಾರಗಳು ನಮಗೆ ತಿಳಿಯಬೇಕು. ನಮ್ಮ ವಿಷಯಗಳು ಅಲ್ಲಿಗೆ ಪಸರಿಸಬೇಕು. ಇದಕ್ಕೆ ಇಂಗ್ಲಿಷ್‌ ಬೇಕು. ಜ್ಞಾನದ ಬಾಗಿಲು ತೆರೆಯಲು ಎಲ್ಲ ಭಾಷೆಗಳೂ ಮುಖ್ಯವಾಗುತ್ತವೆ.

ಪ್ರಶ್ನೆ: ಕನ್ನಡ ಸಾಹಿತ್ಯದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯ ಇದೆ. ನಿಜ ಎಂದೆನಿಸುತ್ತದೆಯೇ?

ಉತ್ತರ: ಹಿಂದಿನ ಕಾಲದ ಸಾಹಿತಿಗಳು, ಅವರ ಕೃತಿಗಳು, ಬರಹಗಳನ್ನು ನೋಡಿದಾಗ ಈಗಿನವು ದುರ್ಲಭ ಎಂದೆನಿಸಬಹುದು. ಆದರೆ, ಹೊಸ ತಲೆಮಾರಿನಲ್ಲಿ ಹಲವು ಕವಿಗಳು, ಲೇಖಕರು, ಕಥೆಗಾರರು, ವಿಮರ್ಶಕರು ಇದ್ದಾರೆ. ಅವರ ಸಾಹಿತ್ಯಗಳನ್ನು ಗಮನಿಸಿದರೆ ಆಶಾದಾಯಕವಾಗಿದೆ.

ಈಗಿನ ಬರಹಗಾರರು, ತಮ್ಮನ್ನು ಜನರು ಬೇಗ ಗುರುತಿಸಬೇಕು ಎಂದು ಬಯಸುತ್ತಾರೆ. ಹಾಗಾಗಿ, ಅವಸರದ ಸಾಹಿತ್ಯಕ್ಕೆ ಮುಂದಾಗುತ್ತಿದ್ದಾರೆ. ಅನುಭವ ಮಾಗಿದಾಗ ಮಾತ್ರ ಒಳ್ಳೆಯ ಕೃತಿ, ಸಾಹಿತ್ಯ ಬರುತ್ತದೆ. ಅದಕ್ಕೆ ತಾಳ್ಮೆ ಬೇಕು. ಅಧ್ಯಯನ, ಓದು ಹೆಚ್ಚಿರಬೇಕು. ಹೆಚ್ಚೆಚ್ಚು ಅನುಭವ ಪಡೆಯಬೇಕು.

ಪ್ರಶ್ನೆ: ಪುಸ್ತಕ ಖರೀದಿ, ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆಯೇ?

ಉತ್ತರ: ಪುಸ್ತಕಗಳ ಡಿಜಿಟಲೀಕರಣ ಆಗುತ್ತಿದೆ. ಸರ್ಕಾರ ಕೂಡ ಡಿಜಿಟಲ್‌ ಗ್ರಂಥಾಲಯ ತೆರೆಯುತ್ತಿದೆ. ಸಾಮಾಜಿಕ ಜಾಲತಾಣಗಳು, ಮೊಬೈಲ್‌ಗಳ ಅಬ್ಬರದಲ್ಲಿ ಪುಸ್ತಕ ಖರೀದಿಸಿ ಓದುವವರು ಕಡಿಮೆಯಾಗುತ್ತಿದ್ದಾರೆ ಎಂಬ ಭಾವನೆ ಸೃಷ್ಟಿಯಾಗಿದೆ. ಈಗ ಕೃತಿಗಳ ಆಡಿಯೊ, ವಿಡಿಯೊ ಅವತರಣಿಗೆ ಲಭ್ಯವಿದೆ. ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಹಾಗಿದ್ದರೂ, ಪುಸ್ತಕ ಖರೀದಿಸಿ ಓದುವವರು ಇದ್ದಾರೆ. ಆ ಸಂಸ್ಕೃತಿಯೂ ಜೀವಂತವಾಗಿದೆ.

ಪ್ರಶ್ನೆ: ನಿಮ್ಮ ಮುಂದಿನ ಯೋಜನೆಗಳೇನು?

ಉತ್ತರ: ಬೋಧನಾ ವೃತ್ತಿಯಿಂದ ನಿವೃತ್ತಿಯಾದ ನಂತರ ಸಾಹಿತ್ಯ, ಅಧ್ಯಯನಕ್ಕೆ ಒತ್ತು ನೀಡುತ್ತಿದ್ದೇನೆ. ಜಿಲ್ಲೆಯಲ್ಲಿ ಜಾನಪದ ಅಧ್ಯಯನಕ್ಕೆ ಸಾಕಷ್ಟು ವಿಷಯಗಳಿವೆ. ಇದುವರೆಗೆ ದಾಖಲಾದ ಜಾನಪದ ವಿಚಾರಗಳ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೇನೆ. ಇದರ ಜೊತೆಗೆ ಜಿಲ್ಲೆಯ ಜಾನಪದ ಕಲೆ, ಸಂಸ್ಕೃತಿ ಹಾಗೂ ಅದರ ವಿವರಗಳು ಸೇರಿದಂತೆ ಎಲ್ಲವೂ ಸಮಗ್ರವಾಗಿ ಒಂದೇ ಕಡೆ ಸಿಗುವಂತೆ ಮಾಡುವ ಕೇಂದ್ರ ಮಾಡಬೇಕು ಎಂಬುದು ನನ್ನ ಆಸೆ.

ಪ್ರಶ್ನೆ: ನಮ್ಮದು ಜಾನಪದ ಶ್ರೀಮಂತ ಜಿಲ್ಲೆ. ಆದರೆ, ಕಲೆ ಗುರುತಿಸುವ ಕೆಲಸ, ಅಧ್ಯಯನ ಸಾಕಷ್ಟು ಆಗಿಲ್ಲವಲ್ಲಾ?

ಉತ್ತರ: ಒಂದಷ್ಟು ಪ್ರಯತ್ನಗಳು ಆಗಿವೆ. ಆದರೆ, ತುಂಬಾ ಆಗಿಲ್ಲ ಎನ್ನುವುದು ನಿಜ. ಮಲೆ ಮಹದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯದಂತಹ ಅತ್ಯದ್ಭುತ ಕಾವ್ಯಗಳನ್ನು ಹೊಂದಿರುವ ಜಿಲ್ಲೆ ಇದು. ಆದಿವಾಸಿ ಸಂಸ್ಕೃತಿಯೂ ಇಲ್ಲಿ ಶ್ರೀಮಂತವಾಗಿದೆ. ಗೊರುಕನ ನೃತ್ಯ, ಗೊರವರ ನೃತ್ಯ ಸೇರಿದಂತೆ ಹಲವು ಜನಪದ ಕಲೆಗಳು ಇಲ್ಲಿವೆ. ಹಾವೇರಿಯ ಶಿಗ್ಗಾಂವಿಯಲ್ಲಿ ಜಾನಪದ ವಿವಿ ಸ್ಥಾಪನೆಗೆ ಮುಂದಾದಾಗ, ಜಿಲ್ಲೆಯಲ್ಲೇ ಅದನ್ನು ಸ್ಥಾಪಿಸಬೇಕು ಎಂಬ ಒತ್ತಾಯ ಮಾಡಿದ್ದೆವು. ಮಹದೇಶ್ವರ ಬೆಟ್ಟದಲ್ಲಿ ಒಂದು ಕೇಂದ್ರ ತೆರೆಯಲಾಗಿತ್ತು. ಕೇಂದ್ರದ ಆಶ್ರಯದಲ್ಲಿ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಆಚರಣೆಗಳ ಬಗ್ಗೆ ಒಂದು ಅಧ್ಯಯನ ನಡೆದಿದೆ. ಮೈಸೂರು ವಿವಿಯು ಮಂಟೇಸ್ವಾಮಿ ಅಧ್ಯಯನ ಪೀಠವನ್ನು ನಮ್ಮ ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರದಲ್ಲಿ ತೆರೆದಿದೆ. ಅಲ್ಲಿಯೂ ಜಾನಪದ ಕಾವ್ಯಗಳ ದಾಖಲೀಕರಣ ನಡೆಯುತ್ತಿದೆ.

ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಜಿಲ್ಲೆಯ ಜಾನಪದ ಕಲೆಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಹೆಚ್ಚು ಆಗಿಲ್ಲ. ಅಧ್ಯಯನವೂ ನಡೆದಿಲ್ಲ. ಈ ಬಗ್ಗೆ ಸರ್ಕಾರ, ಸಂಶೋಧಕರು ಹೆಚ್ಚು ಒಲವು ತೋರಬೇಕು.

ಪ್ರಶ್ನೆ: ಹಿಂದಿ ಹೇರಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ಹಿಂದಿ ಒಂದು ಭಾಷೆಯಾಗಿ ಕಲಿಯುವುದಕ್ಕೆ ನಿರ್ಬಂಧಗಳನ್ನು ಹಾಕುವ ಅಗತ್ಯವಿಲ್ಲ. ಆದರೆ, ಒತ್ತಾಯಪೂರ್ವಕವಾಗಿ, ಪೂರ್ವಗ್ರಹ ಪೀಡಿತವಾಗಿ ಅದನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಪ್ರಾದೇಶಿಕ ಭಾಷೆಗಳು, ಆಯಾ ರಾಜ್ಯಗಳ ಭಾಷೆಗಳು ಉಳಿಯಬೇಕು, ಬೆಳೆಯಬೇಕು. ಅವುಗಳ ಅಸ್ಮಿತೆಗೆ ಧಕ್ಕೆಯಾಗುವ ರೀತಿಯಲ್ಲಿ ಹಿಂದಿ ಮಾತ್ರವಲ್ಲ, ಯಾವುದೇ ಭಾಷೆಯನ್ನು ಹೇರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT