ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬೇಡ, ಧೈರ್ಯದಿಂದ ಪರೀಕ್ಷೆ ಬರೆಯಿರಿ

‘ಪ್ರಜಾವಾಣಿ’ ಫೋನ್‌ ಇನ್‌: ವಿದ್ಯಾರ್ಥಿಗಳು, ಪೋಷಕರ ಗೊಂದಲಗಳಿಗೆ ತೆರೆ ಎಳೆದ ಡಿಡಿಪಿಐ
Last Updated 18 ಜುಲೈ 2021, 7:02 IST
ಅಕ್ಷರ ಗಾತ್ರ

ಚಾಮರಾಜನಗರ: ‘ಇದೇ 19 (ಸೋಮವಾರ) ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಮುಕ್ತ ವಾತಾವರಣದಲ್ಲಿ ಮಕ್ಕಳು ಧೈರ್ಯದಿಂದ ಪರೀಕ್ಷೆ ಬರೆಯಬೇಕು’

– ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿರುವ ಜಿಲ್ಲೆಯ 12,819 ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಎಸ್‌.ಟಿ.ಜವರೇಗೌಡ ಅವರು ನೀಡಿರುವ ಸಲಹೆ ಇದು.

‘ಪ್ರಜಾವಾಣಿ’ಶನಿವಾರ ಹಮ್ಮಿಕೊಂಡಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲೆಯ ಐದೂ ತಾಲ್ಲೂಕುಗಳಿಂದ ಕರೆ ಮಾಡಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಡಿಡಿಪಿಐ ಜವರೇಗೌಡ ಅವರೊಂದಿಗೆ ನೇರವಾಗಿ ಮಾತನಾಡಿ ಪರೀಕ್ಷೆಗೆ ಸಂಬಂಧಿಸಿದಂತೆ ತಮ್ಮಲ್ಲಿದ್ದ ಗೊಂದಲಗಳು, ಆತಂಕಗಳನ್ನು ಬಗೆಹರಿಸಿಕೊಂಡರು.

ಬಹುತೇಕ ಪ್ರಶ್ನೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದ್ದ ಕೋವಿಡ್‌ ಭಯಕ್ಕೆ ಸಂಬಂಧಿಸಿದ್ದವು. ಇನ್ನೂ ಕೆಲವು ಪೋಷಕರು ಹಾಗೂ ವಿದ್ಯಾರ್ಥಿಗಳು, ಗ್ರಾಮೀಣ ಭಾಗಗಳಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಅಗತ್ಯವಾದ ಸಾರಿಗೆ ವ್ಯವಸ್ಥೆ ಬಗ್ಗೆ ವಿಚಾರಿಸಿದರು.

ಕೊಳ್ಳೇಗಾಲದಿಂದ ಕರೆ ಮಾಡಿದ್ದ ಚಾಮರಾಜ್‌, ಶಶಿಕುಮಾರ್‌, ಸುರೇಶ್‌, ಬಿಳಿಗಿರಿರಂಗನಬೆಟ್ಟದ ಶಿವಮಲ್ಲು ಹಾಗೂ ಅನಿತಾ ಕೋವಿಡ್‌ ಭಯ ಕುರಿತಾದ ಪ್ರಶ್ನೆಗಳನ್ನು ಕೇಳಿದರು.

ಎಲ್ಲರಿಗೂ ಸಾವಧಾನವಾಗಿ ಉತ್ತರಿಸಿದ ಜವರೇಗೌಡ ಅವರು, ‘ವಿದ್ಯಾರ್ಥಿಗಳು ಯಾವುದೇ ಭಯ ಇಲ್ಲದೇ, ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಬೇಕಾದಂತಹ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಕೋವಿಡ್‌ ನಿಯಮಗಳನ್ನು ಪಾಲಿಸುವುದಕ್ಕಾಗಿ 85 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ರೋಟರಿ ಸಂಸ್ಥೆ ಹಾಗೂ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ವತಿಯಿಂದ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಕೇಂದ್ರಗಳಿಗೆ ಬರುವ ಪ್ರತಿ ವಿದ್ಯಾರ್ಥಿಗೆ ಥರ್ಮಲ್‌ ಸ್ಕ್ರೀನಿಂಗ್‌, ರಕ್ತದಲ್ಲಿ ಆಮ್ಲಜನಕ ಮಟ್ಟ ಎಷ್ಟಿದೆ ಎಂದು ಪರಿಶೀಲನೆ ನಡೆಸಲಾಗುವುದು, ಸ್ಯಾನಿಟೈಸರ್ ಒದಗಿಸಲಾಗುವುದು. ಸುರಕ್ಷಿತ ಅಂತರ ಕಾಪಾಡುವ ಉದ್ದೇಶದಿಂದ ಒಂದು ಪರೀಕ್ಷಾ ಕೊಠಡಿಯಲ್ಲಿ 12 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು. ಒಂದು ಡೆಸ್ಕ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ. ಇದಲ್ಲದೇ, ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ’ ಎಂದರು.

‘ಕೆಮ್ಮು, ಜ್ವರ ಸೇರಿದಂತೆ ಇತರ ರೋಗ ಲಕ್ಷಣ ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಕೋವಿಡ್‌ ದೃಢಪಟ್ಟ ವಿದ್ಯಾರ್ಥಿಗಳಿದ್ದರೆ ಅವರಿಗೆ ಕೋವಿಡ್‌ ಕೇರ್‌ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಒಂದು ವೇಳೆ ಕೇಂದ್ರದಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ಆಮ್ಲಜನಕ ಮಟ್ಟ ಕಡಿಮೆ ಇದ್ದರೆ, ಕೋವಿಡ್‌ ಇರುವುದು ಗೊತ್ತಾದರೆ ಅಂತಹ ವಿದ್ಯಾರ್ಥಿಯನ್ನು ತಕ್ಷಣ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದು ವಿವರಿಸಿದರು.

ಬಸ್‌ ವ್ಯವಸ್ಥೆ ಇದೆಯೇ?: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಿಂದ ದಾಕ್ಷಾಯಿಣಿ, ಚಾಮರಾಜನಗರ ತಾಲ್ಲೂಕು ಅರಕಲವಾಡಿಯಿಂದ ವಿದ್ಯಾರ್ಥಿ ಕಿರಣ್‌ ಹಾಗೂ ಹನೂರು ತಾಲ್ಲೂಕು ಯರಂಬಾಡಿಯಿಂದ ಮುರುಗೇಶ್‌ ಅವರು ಕರೆ ಮಾಡಿ, ಪರೀಕ್ಷಾ ದಿನಗಳಂದುಕಾಡಂಚಿನ ಗ್ರಾಮಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆಯೇ ಎಂದು ವಿಚಾರಿಸಿದರು.

‘ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹಾಕುವ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಒಂದು ವೇಳೆ ಬಸ್‌ ಸಿಗದಿದ್ದರೆ, ಬೇರೆ ವ್ಯವಸ್ಥೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಡಿಡಿಪಿಐ ಹೇಳಿದರು.

ಕೋವಿಡ್‌ನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಏನು ಮಾಡುವುದು ಎಂಬುದು ಬಿಳಿಗಿರಿರಂಗನಬೆಟ್ಟದ ಅನಿತಾ ಅವರ ಪ್ರಶ್ನೆಯಾಗಿತ್ತು.

ಇದಕ್ಕೆ ಉತ್ತರಿಸಿದ ಜವರೇಗೌಡ ಅವರು, ‘ಈಗ ಪರೀಕ್ಷೆ ಬರೆಯಲು ಆಗದಿದ್ದರೆ, ಮುಂದೆ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಆಗ ಹಾಜರಾಗಬಹುದು. ಆಗ ಪರೀಕ್ಷೆ ಬರೆದರೂ, ಮೊದಲ ಬಾರಿ ಪರೀಕ್ಷೆ ಬರೆಯಲಾಗಿದೆ ಎಂದೇ ಪರಿಗಣಿಸಲಾಗುತ್ತದೆ’ ಎಂದರು.

ಪ್ರವೇಶ ಪತ್ರ ಸಿಗದಿದ್ದರೆ ಬಿಇಒಗೆ ಕರೆ ಮಾಡಿ

'ಜಿಲ್ಲೆಯಲ್ಲಿ ಎಲ್ಲ ಶಾಲೆಗಳು ಮಕ್ಕಳಿಗೆ ಪ್ರವೇಶ ಪತ್ರ‌ ನೀಡಿವೆ. ಒಂದು ವೇಳೆ ನೀಡದಿದ್ದರೆ, ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ. ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಆಗದಿದ್ದರೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಬಿ ಇಒಗಳಿಗೆ ಕರೆ ಮಾಡಿ' ಎಂದು ಜವರೇಗೌಡ ಅವರು ತಿಳಿಸಿದರು.

'ಇತರ ಯಾವುದೇ ಸಮಸ್ಯೆ ಇದ್ದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಜಿಲ್ಲಾ ನೋಡೆಲ್ ಅಧಿಕಾರಿ ಅಥವಾ ಖುದ್ದು ನನಗೇ ಕರೆ ಮಾಡಬಹುದು' ಎಂದರು.

ನಿಮ್ಮ ಮೇಲಿನ ನಂಬಿಕೆಯಿಂದ ಮಗಳನ್ನು ಕಳುಹಿಸುತ್ತೇನೆ...‌

ಕೊಳ್ಳೇಗಾಲದಿಂದ ಕರೆ ಮಾಡಿದ್ದ ನಾಗೇಶ್‌ ಅವರು, ‘ನನ್ನ ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾಳೆ. ಕೋವಿಡ್‌ ಕಾರಣದಿಂದ ಮೂರು ತಿಂಗಳಿಂದ ಹೊರಗಡೆ ಹೋಗಿಲ್ಲ. ಆಕೆಗೆ ಮಾತ್ರ ಅಲ್ಲ ನಮಗೂ ಭಯವಿದೆ. ಕೋವಿಡ್‌ ಭಯದಲ್ಲಿ ಪರೀಕ್ಷೆಗೆ ಏನು ಸಿದ್ಧತೆ ಮಾಡಿಕೊಂಡಿದ್ದಾಳೋ ಏನೋ. ಈ ಸಮಯದಲ್ಲಿ ಪರೀಕ್ಷೆ ಮಾಡುವುದು ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜವರೇಗೌಡ ಅವರು, ‘ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಉದ್ದೇಶದಿಂದಲೇ ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ಅವರ ಶೈಕ್ಷಣಿಕ ಸಾಧನೆಯನ್ನು ಅಳೆಯಲಾಗುತ್ತದೆ. ಕೋವಿಡ್‌ ನಡುವೆಯೇ ಪರೀಕ್ಷೆ ನಡೆಸಲು ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ವಿವರಿಸಿದಾಗ, ‘ನಿಮ್ಮ ಮೇಲೆ ನಂಬಿಕೆ ಇಟ್ಟು ಮಗಳನ್ನು ಪರೀಕ್ಷೆಗೆ ಕಳುಹಿಸುತ್ತೇನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ನಾಗೇಶ್‌ ಅವರು ಮನವಿ ಮಾಡಿದರು.

ಪ್ರಶ್ನೋತ್ತರ

* ಸ್ಕೌಡ್ಸ್‌ ಮತ್ತು ಗೈಡ್ಸ್‌ನವರ ಸ್ವಯಂ ಸೇವಕರಾಗಿ ಪರೀಕ್ಷಾ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಆಯ್ಕೆಗೆ ಮಾನದಂಡ ಏನು?

– ಪ್ರದೀಪ್‌, ಯಳಂದೂರು

ಉ: 18 ವರ್ಷಕ್ಕಿಂತ ಹೆಚ್ಚುವ ವಯಸ್ಸಿನ, ಪದವಿ ವಿದ್ಯಾರ್ಥಿಗಳನ್ನೇ ಸ್ವಯಂ ಸೇವಕರನ್ನಾಗಿ (ಒಟ್ಟು 170 ಮಂದಿ) ನಿಯೋಜಿಸಲಾಗುವುದು. ಇವರೆಲ್ಲ ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಯಲ್ಲಿ (2,176) ಬಹುತೇಕ ಮಂದಿ ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ. ಕನಿಷ್ಠ ಒಂದು ಡೋಸ್‌ ಪಡೆದಿರುವವರನ್ನೇ ನೇಮಕ ಮಾಡಲಾಗಿದೆ.

* ಪ್ರಶ್ನೆ ಪತ್ರಿಕೆಗಳು ಹೇಗಿರುತ್ತವೆ?ನೇರ ಪ್ರಶ್ನೆಗಳೇ?

– ಮಹೇಶ್‌, ಹೊನ್ನೂರು ಮತ್ತು ಮಹೇಶ್ವರಿ, ಬಿಳಿಗಿರಿರಂಗನಬೆಟ್ಟ, ಯಳಂದೂರು

ಉ: ಬಹು ಆಯ್ಕೆಯ ಸರಳ, ನೇರ ಪ್ರಶ್ನೆಗಳನ್ನೇ ನೀಡಲಾಗುತ್ತದೆ. ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಮಾದರಿ ಪ್ರಶ್ನೆಪತ್ರಿಕೆಗಳನ್ನು ಪ್ರಕಟಿಸಲಾಗಿದೆ.

* ಒಎಂಆರ್‌ ಹಾಳೆಯ ಜೊತೆಗೆ, ಗಣಿತದ ಪ್ರಶ್ನೆಗಳನ್ನು ಬಿಡಿಸಲು (ರಫ್‌ ವರ್ಕ್‌) ಕಾಗದಗಳನ್ನು ಕೊಡುತ್ತಾರೆಯೇ?

ವಿಜಯ್‌, ಹೊನ್ನೂರು, ಯಳಂದೂರು, ಗೀತಾ, ಸಂದನಪಾಳ್ಯ, ಹನೂರು ಹಾಗೂ ಶಿವು, ಬರಗಿ, ಗುಂಡ್ಲುಪೇಟೆ (ಎಲ್ಲರೂ ವಿದ್ಯಾರ್ಥಿಗಳು)

ಉ: ಪ್ರಶ್ನೆಗಳು ಸುಲಭವಾಗಿರುತ್ತದೆ. ಉತ್ತರವನ್ನು ಒಎಂಆರ್‌ ಹಾಳೆಯಲ್ಲಿ ಶೇಡ್‌ ಮಾಡಿದರೆ ಆಯಿತು. ರಫ್‌ ವರ್ಕ್‌ಗಳನ್ನು ಮಾಡುವುದಕ್ಕೆ ಸ್ಥಳಾವಕಾಶ ಇರುತ್ತದೆ.

* ನಮ್ಮ ಹುಡುಗಿಗೆ ಕೋವಿಡ್‌ ಬಂದು ಮೂರು ತಿಂಗಳು ಆಗಿದೆ. ಪರೀಕ್ಷೆ ಬರೆಯಬಹುದೇ?

–ಗಣೇಶ್‌, ಹರಳೆ, ಕೊಳ್ಳೇಗಾಲ

ಉ: ಖಂಡಿತವಾಗಿ ಬರೆಯಬಹುದು. ನಿಶ್ಚಿಂತೆಯಿಂದ ಪರೀಕ್ಷೆಗೆ ಹಾಜರಾಗುವಂತೆ ಆಕೆಗೆ ತಿಳಿಸಿ.

* ಸರಳ ಪರೀಕ್ಷೆ ಎಂದು ಹೇಳುತ್ತಿದ್ದೀರಿ. ಉತ್ತಮ ಅಂಕಗಳಿಸಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಲ್ಯಾ‍ಪ್‌ಟಾಪ‍್‌ ಸೇರಿದಂತೆ ಇತರೆ ಸರ್ಕಾರಿ ಸರ್ಕಾರಿ ಸೌಲಭ್ಯಗಳು ಸಿಗುತ್ತದೆಯೇ?

– ಸೋನಿಕಾ ಹೊನ್ನೂರು, ಯಳಂದೂರು (ವಿದ್ಯಾರ್ಥಿನಿ)

ಉ: ಖಂಡಿತವಾಗಿಯೂ ಸಿಗಲಿದೆ. ಕೋವಿಡ್‌ ಕಾರಣಕ್ಕೆ‍‍ಪರೀಕ್ಷಾ ವಿಧಾನಗಳನ್ನು ಮಾತ್ರ ಸರಳಗೊಳಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲಾಖೆ ನೀಡುತ್ತಿರುವ ಪ್ರೋತ್ಸಾಹ ಮುಂದುವರಿಯಲಿದೆ.

* ಪರೀಕ್ಷೆಯ ದಿನ ಕೇಂದ್ರಕ್ಕೆ ಬೇಗ ಬರಬಹುದೇ? ತಡವಾಗಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆಯೇ?

ಇನ್‌ಫೆಂಟ್‌ ಶರ್ಮಿಳಾ, ಹೊನ್ನೂರು, ಯಳಂದೂರು (ವಿದ್ಯಾರ್ಥಿನಿ)

ಉ: 8.30ರ ಹೊತ್ತಿಗೆ ಪರೀಕ್ಷೆ ಕೇಂದ್ರ ಪರೀಕ್ಷೆಗೆ ಸಜ್ಜಾಗಲಿದೆ. ವಿದ್ಯಾರ್ಥಿಗಳು ಅದಕ್ಕಿಂತ ಮೊದಲು ಬಂದು ಶಾಲೆಯ ಆವರಣದಲ್ಲಿ ಕುಳಿತು ಓದುವುದಕ್ಕೆ ತೊಂದರೆ ಇಲ್ಲ. ಆದರೆ, ಕೊಠಡಿಯ ಒಳಗಡೆ ಬಿಡುವುದಿಲ್ಲ. 10.30ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ಕನಿಷ್ಠ 1 ಗಂಟೆಯ ಮೊದಲೇ ಕೇಂದ್ರದಲ್ಲಿ ಇರಿ. ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ.

ನಿರ್ವಹಣೆ: ಸೂರ್ಯನಾರಾಯಣ ವಿ., ಚಿತ್ರ: ಸಿ.ಆರ್‌.ವೆಂಕಟರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT