ಗುರುವಾರ , ಅಕ್ಟೋಬರ್ 22, 2020
23 °C
ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದಾರೆ ನೋಂದಣಿ ಮಾಡುವವರ ಸಂಖ್ಯೆ

ಚಾಮರಾಜನಗರ: ಬೆಳೆ ವಿಮೆ; ಕಡಿಮೆಯಾಯಿತೇ ರೈತರ ಆಸಕ್ತಿ?

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ (ಪಿಎಂಎಫ್‌ಬಿಐ–ಬೆಳವಿಮೆ ಯೋಜನೆ) ಬಗ್ಗೆ ಜಿಲ್ಲೆಯ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದು, ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. 

ಎರಡು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಬೆಳೆ ವಿಮೆಗೆ ನೋಂದಣಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗುರುತಿಸಬಹುದು. ಕಳೆದ ವರ್ಷದ ಹಿಂಗಾರು ಅವಧಿಯಲ್ಲಿ ಕೇವಲ 1,255 ಮಂದಿ ನೋಂದಣಿ ಮಾಡಿಕೊಂಡಿದ್ದರೆ, ಈ ವರ್ಷದ ಮುಂಗಾರು ಅವಧಿಯಲ್ಲಿ 11,579 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿದ್ದಾರೆ (ಈ ಪೈಕಿ 9,569 ರೈತರ ಅರ್ಜಿಗಳನ್ನು ಮಾತ್ರ ವಿಮಾ ಕಂಪನಿ ಅಂಗೀಕರಿಸಿದೆ).

2019ರ ಮಂಗಾರು ಅವಧಿಯಲ್ಲಿ 25,826 ಮಂದಿ, 2018ರ ಹಿಂಗಾರು ಅವಧಿಯಲ್ಲಿ 16,100 ಮತ್ತು 2018ರ ಮುಂಗಾರಿನಲ್ಲಿ 25,822 ಮಂದಿ ನೋಂದಣಿ ಮಾಡಿಕೊಂಡಿದ್ದರು. 2018 ಮತ್ತು 2019ಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಾರು ಅವಧಿಯಲ್ಲಿ ನೋಂದಣಿ ಮಾಡಿದವರ ಸಂಖ್ಯೆ ಅರ್ಧಕ್ಕೂ ಹೆಚ್ಚು ಕುಸಿದಿದೆ. 

ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಹೆಚ್ಚಿನ ರೈತರು ನೋಂದಣಿ ಮಾಡಿಕೊಂಡಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

‘ಜಿಲ್ಲೆಯಲ್ಲಿ ಮಳೆ ಚೆನ್ನಾಗಿ ಆಗಿದೆ. ರೈತರು ಬಿತ್ತನೆ ಮಾಡಿದ ನಂತರ ಬೇಕಾದಾಗಲೆಲ್ಲ ಮಳೆಯಾಗಿದೆ. ನೀರಿನ ಕೊರತೆಯಿಂದ ಎಲ್ಲೂ ಬೆಳೆಹಾನಿಯಾಗಿಲ್ಲ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈ ವರ್ಷ ನಷ್ಟ ಆಗಲಾರದು ಎಂಬ ನಂಬಿಕೆಯೂ ಅವರಲ್ಲಿದೆ. ಬೆಳೆ ನಷ್ಟ ಆಗುವ ಸಾಧ್ಯತೆ ಇಲ್ಲದಿರುವುದರಿಂದ ಬೆಳೆ ವಿಮೆಯ ಅಗತ್ಯವಿಲ್ಲ ಎಂಬ ಕಾರಣಕ್ಕೆ ರೈತರು ನೋಂದಣಿ ಮಾಡಿಕೊಂಡಿಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘2019-20ನೇ ಸಾಲಿನಲ್ಲಿ ಉತ್ತಮ ಮಳೆ ಆಗಿದೆ. ಕಾಲುವೆ ಮತ್ತು ಕರೆಯಲ್ಲಿ ನೀರಿನ ಪೂರೈಕೆ ಸುಗಮವಾಗಿದೆ. ಬೆಳೆ ಸಂಪೂರ್ಣ ಬೇಸಾಯಗಾರರ ಕೈ ಹಿಡಿಯುವ ನಿರೀಕ್ಷೆಯಿಂದ ಬಹುತೇಕರು ವಿಮೆ ಕಂತು ಕಟ್ಟಿಲ್ಲ’ ಎಂದು ಯಳಂದೂರು ತಾಲ್ಲೂಕಿನ ಕೆಸ್ತೂರು ನಾಗರಾಜು ಅವರು ಹೇಳಿದರು. 

ಕೆಲವು ರೈತರ ವಿಚಾರದಲ್ಲಿ ಇದು ನಿಜವಿರಬಹುದು. ಆದರೆ, ನೋಂದಣಿ ಕಡಿಮೆಯಾಗಲು ಇದೊಂದೇ ಕಾರಣವಲ್ಲ. ರೈತರು ಹಾಗೂ ರೈತ ಮುಖಂಡರನ್ನು ಮಾತನಾಡಿಸಿದರೆ ಬೆಳೆ ವಿಮೆ ಪ್ರಕ್ರಿಯೆಯ ಬಗ್ಗೆ ಹಲವು ಆರೋಪಗಳನ್ನೇ ಮಾಡುತ್ತಾರೆ.

ವಿಮೆ ಕಂತು ಕಟ್ಟಿದವರಿಗೆ ಸರಿಯಾದ ಸಮಯಕ್ಕೆ ಪರಿಹಾರ ಮೊತ್ತ ಬಾರದೇ ಇರುವುದು ಬೆಳೆ ವಿಮೆಗೆ ನೋಂದಣಿ ಮಾಡದಿರಲು ಪ್ರಮುಖ ಕಾರಣ ಎಂದು ಹೇಳುತ್ತಾರೆ ಬಹುತೇಕ ರೈತರು. 2016–17ನೇ ಸಾಲಿನ ಹಿಂಗಾರು ಅವಧಿಯಲ್ಲಿ ಸಂಭವಿಸಿದ ಬೆಳೆ ನಷ್ಟಕ್ಕೆ ಹಲವು ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಮೂರು ವರ್ಷಗಳ ಕಾದ ಬಳಿಕ ಮೂರ್ನಾಲ್ಕು ತಿಂಗಳ ಹಿಂದೆ ಕೆಲವರಿಗೆ ವಿಮೆ ಹಣ ಖಾತೆಗೆ ಜಮಾವಣೆಯಾಗಿದೆ. 2019ರ ಮುಂಗಾರು ಅವಧಿಯ ಫಲಾನುಭವಿಗಳ ಪೈಕಿ ಕೇವಲ 64 ಮಂದಿಗೆ ಪರಿಹಾರ ಸಿಕ್ಕಿದೆಯಷ್ಟೆ. ಉಳಿದವರಿಗೆ ಇನ್ನೂ ಬಂದಿಲ್ಲ.  

ಬೆಳೆ ವಿಮೆ ಉತ್ತಮ ಯೋಜನೆಯಾಗಿದ್ದರೂ, ಜಿಲ್ಲೆಯಲ್ಲಿ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸುತ್ತಾರೆ ರೈತ ಮುಖಂಡ ಗುರುಪ್ರಸಾದ್‌ ಅವರು.

‘ಬೆಳೆ ಸಮೀಕ್ಷೆಯ ಆಧಾರದಲ್ಲಿ ವಿಮೆ ಪರಿಹಾರ ಮೊತ್ತ ನೀಡಲಾಗುತ್ತದೆ. ಆದರೆ, ಸಮೀಕ್ಷೆ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ. ವೈಯಕ್ತಿಕ ತೋಟದ ಸಮೀಕ್ಷೆ ನಡೆಸದೇ, ಒಂದು ಪ್ರದೇಶದ ಸಮೀಕ್ಷೆ ನಡೆಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಒಳ್ಳೆಯ ಬೆಳೆ ಬಂದಿದ್ದರೆ, ನಷ್ಟ ಆಗಿಲ್ಲ ಎಂದು ತೋರಿಸಲಾಗುತ್ತಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರ ಖಾತೆಗಳಿಗೆ ಹಣ ಬರುತ್ತಿಲ್ಲ. ಆಧಾರ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗಳು ಸ್ಪಷ್ಟವಾಗಿ ನಮೂದಿಸಿರಬೇಕು. ಇವೆರಡು ಸರಿ ಇಲ್ಲ ಎಂಬ ಕಾರಣದಿಂದಲೇ ಹಲವರಿಗೆ ಇನ್ನೂ ಹಣ ಬಂದಿಲ್ಲ. ಅಧಿಕಾರಿಗಳು ರೈತರಿಗೆ ಇಂತಹದ್ದರ ಬಗ್ಗೆ ಸರಿಯಾಗಿ ತಿಳಿಸಿಕೊಡಬೇಕು’ ಎಂದು ಅವರು ಹೇಳಿದರು. 

ವಿಮಾ ಕಂಪನಿಗಳು ಸರಿಯಾಗಿ ಪರಿಹಾರ ನೀಡದೆ ರೈತರನ್ನು ವಂಚಿಸುತ್ತವೆ ಎಂಬ ಭಾವನೆಯೂ ರೈತರಲ್ಲಿದೆ. ಕೃಷಿ ಇಲಾಖೆ ಯೋಜನೆ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರೂ ಅದು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಯೋಜನೆ ಬಗ್ಗೆ ಅರಿವು ಇರುವವರು ಹಾಗೂ ಈ ಹಿಂದೆ ನೋಂದಣಿ ಮಾಡಿಕೊಂಡು ಪರಿಹಾರ ಮೊತ್ತ ಪಡೆದವರು ಮಾತ್ರ ನೋಂದಣಿ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಪರಿಹಾರ ಮೊತ್ತ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಆಗುವುದರಿಂದ ಹಣವು ಸಾಲದ ಖಾತೆಗೆ ಜಮೆ ಆಗುತ್ತದೆ ಎಂಬ ಭಯವೂ ಕೆಲವು ಕೃಷಿಕರಲ್ಲಿದೆ. 

––––––

ವಿಳಂಬವಾದರೂ, ಪರಿಹಾರ ಖಚಿತ

2016ರ ಹಿಂಗಾರು ಅವಧಿಯ ಪರಿಹಾರ ಮೊತ್ತ ತಾಂತ್ರಿಕ ಕಾರಣದಿಂದ ಬಂದಿರಲಿಲ್ಲ. ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿ ಬಹುತೇಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. 2019ರ ಮುಂಗಾರು ಹಾಗೂ ಹಿಂಗಾರು ಅವಧಿಯ ಬೆಳೆ ವಿಮೆ ಪರಿಹಾರ ವಿತರಣೆ ಕೋವಿಡ್‌–19 ಕಾರಣದಿಂದ ವಿಳಂಬವಾಗಿದೆ. ಎಲ್ಲ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು,  ಇನ್ನು ಒಂದೆರಡು ದಿನಗಳಲ್ಲಿ ಬರಲಿದೆ. ವಿಮೆ ಮಾಡಿಸಿಕೊಂಡ ನಂತರ ಬೆಳೆ ನಷ್ಟ ಅನುಭವಿಸಿದವರಿಗೆ ತಡವಾದರೂ ಪರಿಹಾರ ಮೊತ್ತ ಬಂದೇ ಬರುತ್ತದೆ.

– ಎಚ್‌.ಟಿ.ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

–––

ರೈತರಲ್ಲಿ ವಿಶ್ವಾಸ ಮೂಡಿಸಬೇಕಿದೆ

ಯೋಜನೆ ಆರಂಭದ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಜಾಗೃತಿ ಮೂಡಿಸಿದ್ದೆವು. ಆಗ ಹೆಚ್ಚಿನ ರೈತರು ಬೆಳೆ ವಿಮೆ ಕಟ್ಟಿದ್ದರು. ಬರ ಸ್ಥಿತಿ ಇದ್ದುದರಿಂದ ಹೆಚ್ಚಿನವರಿಗೆ ಪರಿಹಾರ ಬಂದಿತ್ತು. ಮರು ವರ್ಷವೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದರು. 2016–17ನೇ ಸಾಲಿನಲ್ಲಿ ನೋಂದಣಿ ಮಾಡಿಕೊಂಡವರಿಗೆ ಪರಿಹಾರ ಹಣದ ಬಾರದ ನಂತರ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಯಿತು. ಅಧಿಕಾರಿಗಳು ಅಥವಾ ವಿಮಾ ಕಂಪನಿಗಳು ಮೋಸ ಮಾಡುತ್ತವೆ ಎಂಬ ಭಾವನೆ ರೈತರಲ್ಲಿ ಬಂದಿದೆ. ಬೆಳೆ ನಷ್ಟ ಅನುಭವಿಸಿದ ಅರ್ಹ ರೈತರಿಗೆ ಹಣ ಬಾರದೇ, ಏನೂ ಸಮಸ್ಯೆ ಆಗದ ರೈತರಿಗೆ ಬಂದ ನಿದರ್ಶನಗಳೂ ಇವೆ. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಈ ವಿಷಯ ಪ್ರಸ್ತಾಪಿಸಿದ್ದೇವೆ. ಮಳೆಯ ಪ್ರಮಾಣದ ಬಗ್ಗೆ ಅಧಿಕಾರಿಗಳು ನೀಡುವ ಮಾಹಿತಿ, ಇನ್ನಿತರ ತಾಂತ್ರಿಕ ಕಾರಣಗಳಿಂದಲೂ ಪರಿಹಾರ ಹಣ ಬರುತ್ತಿಲ್ಲ. ಹಣ ಕಟ್ಟಿಯೂ ಪ್ರಯೋಜನ ಇಲ್ಲ ಎಂಬ ಭಾವನೆ ರೈತರಲ್ಲಿದೆ. ಯೋಜನೆ ಬಗ್ಗೆ ರೈತರಲ್ಲಿ ವಿಶ್ವಾಸ ಮೂಡಿಸಬೇಕಿದೆ.

ಕೆ.ಪಿ.ಸದಾಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ

–––––––

ರೈತರು ಏನಂತಾರೆ...?

ನೋಂದಣಿಗೆ ಕಾಲಾವಕಾಶ ಕಡಿಮೆ

ಕೃಷಿ ಇಲಾಖೆಯು ವಿಮೆ ನೋಂದಣಿಗೂ ತರಾತುರಿ ಮಾಡುತ್ತದೆ. ಈ ಬಾರಿ ಕೆಲವು ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಕೇವಲ ಎರಡು ದಿನಗಳ ಸಮಯ ನೀಡಲಾಗಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಎಷ್ಟು ರೈತರಿಗೆ ನೋಂದಣಿ ಮಾಡಿಕೊಳ್ಳಬಹುದು. ಇದರ ಜೊತೆಗೆ ಬ್ಯಾಂಕುಗಳು ಕೂಡ ರೈತರಿಗೆ ಸ್ಪಂದಿಸುತ್ತಿಲ್ಲ. ವಿಮೆ ಮಾಡಿಸಿಕೊಳ್ಳಲು ಬರುವವರಿಗೆ ಬ್ಯಾಂಕ್‌ ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ

–ಗುರುಪ್ರಸಾದ್‌, ರೈತ ಮುಖಂಡ, ಚಾಮರಾಜನಗರ

***

ಅವೈಜ್ಞಾನಿಕ ಯೋಜನೆ

ವಿಮೆ ಕಂಪನಿಗಳಿಗೆ ದೊಡ್ಡ ಲಾಭ ಮಾಡುವ ಲಾಬಿ ಇದು. ವಿಮೆ ಕಟ್ಟಿಸಿಕೊಳ್ಳುವಾಗ ವೈಯಕ್ತಿಕವಾಗಿ ಕಟ್ಟಿಸಿಕೊಳ್ಳುತ್ತಾರೆ. ರೈತರ ಬೆಳೆ ನಷ್ಟವಾದಾಗ ಮಾತ್ರ ಕ್ಷೇತ್ರವಾರು ಸರ್ವೆ ಮಾಡಿ ವಿಮೆ ನೀಡುತ್ತಾರೆ. ಒಂದು ಪ್ರದೇಶದಲ್ಲಿ ಉತ್ತಮವಾಗಿ ಬೆಳೆ ಬಂದಿರುವುದನ್ನು ನೋಡಿ ವಿಮೆ ಪರಿಹಾರವನ್ನು ರದ್ದು ಮಾಡುತ್ತಾರೆ. ಬೆಳೆ ನಷ್ಟವಾದಾಗ ವಿಮೆ ನೀಡುವುದು ಕಂಪನಿಯ ಜವಾಬ್ದಾರಿ. 2016-17ನೇ ಸಾಲಿನ ವಿಮೆ ಹಣವೇ ಇನ್ನೂ ಬಂದಿಲ್ಲ. ಯೋಜನೆಯೇ ಅವೈಜ್ಞಾನಿಕವಾಗಿದೆ.

– ಮಹದೇವಪ್ಪ, ಹಂಗಳ, ಗುಂಡ್ಲುಪೇಟೆ ತಾಲ್ಲೂಕು 

***

ಎರಡು ದಿನಗಳ ಅವಕಾಶ

ಕೆಲವು ರೈತರಿಗೆ 2016-17ರ ನಂತರದ ಬೆಳೆ ವಿಮೆ ಪಾವತಿಯಾಗಿಲ್ಲ. ಈ ವರ್ಷದ ಉದ್ದು, ಹೆಸರು ಬೆಳೆಗಳಿಗೆ ವಿಮೆ ನೋಂದಣಿಗೆ ಎರಡು ದಿನಗಳ ಮಾತ್ರ ಅವಕಾಶ ನೀಡಿತ್ತು. ಈ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯೂ ಇರಲಿಲ್ಲ. ಹಾಗಾಗಿ ಕೆಲವರಿಗೆ ವಿಮೆ ಕಂತು ಕಟ್ಟಲು ಆಗಿಲ್ಲ. ನಾನು ಮೂರು ವರ್ಷಗಳಿಂದ ಸತತವಾಗಿ ಬೆಳೆ ವಿಮೆ ಕಟ್ಟುತ್ತಿದ್ದೇನೆ. ಇದುವರೆಗೂ ಯಾವುದೇ ವಿಮೆ ಪರಿಹಾರ ಬಂದಿಲ್ಲ 

–ಮಹದೇವಶೆಟ್ಟಿ, ಕಾವುದವಾಡಿ, ಚಾಮರಾಜನಗರ ತಾಲ್ಲೂಕು

***

ಗೊಂದಲದಿಂದಾಗಿ ಕಟ್ಟಿಲ್ಲ

ಕೆಲವು ಕೃಷಿಕರಷ್ಟೇ ಬೆಳೆ ವಿಮೆ ಮಾಡಿಸಿದ್ದಾರೆ. ಹಲವರಿಗೆ ಪರಿಹಾರ ಮೊತ್ತ ಬಂದಿದೆ. ಉಳಿದವರು ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷದ ಬೆಳೆ ನಷ್ಟ ಪರಿಹಾರ ಈ ವರ್ಷ ಬಂದರೆ, ಹೊಸ ವಿಮೆಗೂ ಅದರಿಂದಲ್ಲಿ ದುಡ್ಡು ಕಡಿತ ಮಾಡುತ್ತಾರೆ ಎಂಬ ಬಂತು. ಈ ಗೊಂದಲದಿಂದಾಗಿ ವಿಮೆ ಮಾಡಿಸಲಿಲ್ಲ. 

–ಅಂಬಳೆ ಶಿವಶಂಕರ, ಯಳಂದೂರು ತಾಲ್ಲೂಕು

***

ವಿಳಂಬ ನೀತಿಯಿಂದ ತೊಂದರೆ

ಬೆಳೆ ವಿಮೆಯಿಂದ ರೈತರಿಗೆ ಅನುಕೂಲಕ್ಕಿಂತ ಅನನುಕೂಲಗಳೇ ಅಧಿಕ. ಅಧಿಕಾರಿಗಳು ಸಮೀಕ್ಷೆಯನ್ನು ನೆಪಮಾತ್ರಕ್ಕೆ ಮಾಡುತ್ತಾರೆ. ಪರಿಣಾಮ ರೈತರಿಗೆ ಸರಿಯಾದ ಸಮಯಕ್ಕೆ ಬೆಳೆ ವಿಮೆ ಪರಿಹಾರ ಸಿಗದೆ ಕಂಗಾಲಾಗಿರುವ ಎಷ್ಟೋ ‌ನಿದರ್ಶನಗಳಿವೆ. ವಿಳಂಬ ಧೋರಣೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. 

– ಶ್ರೀಕಂಠಸ್ವಾಮಿ, ಕೊಳ್ಳೇಗಾಲ

***

ಗೊಂದಲ ನಿವಾರಿಸಲಿ

ಬೆಳೆ ವಿಮೆಯ ಪರಿಹಾರ ಮೊತ್ತ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಕಾರಣಕ್ಕೇ ಕೆಲವರು ವಿಮೆ ಮಾಡಿಸಿಕೊಂಡಿಲ್ಲ. ಕಾರಣ ಅವರಲ್ಲಿ ಬ್ಯಾಂಕ್‌ ಖಾತೆ ಇರುವುದಿಲ್ಲ. ಪರಿಹಾರದ ಹಣ ಎಲ್ಲಿ ಸಾಲಕ್ಕೆ ಜಮಾ ಆಗುವುದೋ ಎಂಬ ಭೀತಿಯೂ ಖಾತೆ ಹೊಂದಿರುವ ರೈತರಲ್ಲಿದೆ. ಈ ಎಲ್ಲ ಗೊಂದಲಗಳನ್ನು ಸರ್ಕಾರ ನಿವಾರಿಸಬೇಕು. 

–ಜಗದೀಶ್, ಕಣ್ಣೂರು, ಹನೂರು ತಾಲ್ಲೂಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು