ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಸಾಹಿತಿ, ನಾಟಕಕಾರ ಸಂಸ ಸ್ಮರಣೆ

Last Updated 12 ಜನವರಿ 2023, 19:31 IST
ಅಕ್ಷರ ಗಾತ್ರ

ಯಳಂದೂರು: ಸುತ್ತಾಟ, ವಿದೇಶದಲ್ಲಿ ಅಲೆದಾಟ, ಕನ್ನಡ ಸಾಹಿತ್ಯ‌, ರಂಗಭೂಮಿಯ ಒಡನಾಟ ಹಾಗೂ ವಿಕ್ಷಪ್ತ ಮನಸ್ಥಿತಿಯ ಓರೆನೋಟಗಳಲ್ಲಿ ಅಚ್ಚಳಿಯದ ನೆನಪುಗಳನ್ನು ಬಿತ್ತಿದ್ದಾರೆ ಸಂಸ.

ವರ್ಣಮಯ ಹಾಗೂ ರಹಸ್ಯಮಯ ಬದುಕಿನೊಂದಿಗೆ ಚಾರಿತ್ರಿಕ ಕೃತಿ ರತ್ನಗಳು ಇವರ ರಚನೆಯಲ್ಲಿ ಅರಳಿವೆ. ಚಿಂತಕರ ವಿಮರ್ಶೆಗೆ ನಿಲುಕದ ಇವರ ಕೃತಿಗಳು ನಕ್ಷತ್ರಗಳಾಗಿವೆ. ನೇರ, ದಿಟ್ಟ ನುಡಿಗಳಲ್ಲಿ ಸಂಸರ ಸಾಹಿತ್ಯ ಸಂರಚನಾ ಕೌಶಲ ಬಿಚ್ಚಿಕೊಳ್ಳುತ್ತದೆ. ಇವರ ಜನ್ಮದಿನದಂದು (ಜ.13) ಇವರ ಬದುಕು-ಸ್ಮರಣೆಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ತಾಲ್ಲೂಕಿನ ಅಗರ ಗ್ರಾಮದ ಸಂಸ ಅವರ ಬದುಕು, ಬರಹ ಹಾಗೂ ಸಮಗ್ರ ನಾಟಕಗಳ ಸಂಗ್ರಹದ ಬಗ್ಗೆ 70ರ ದಶಕದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಬಿ.ವಿ.ವೈಕುಂಠರಾಜು ಚಾಲನೆ ನೀಡಿದರು. ಇದರ ಭಾಗವಾಗಿ 700 ಪುಟಗಳ ಸಂಸ ನಾಟಕಗಳು ಕೃತಿಯಾದವು. ಪ್ರೊ.ಕಿ.ರಂ.ನಾಗರಾಜು ಅವರ ‘ನೀಗಿಕೊಂಡ ಕಂಸ’ ಹಾಗೂ ಲಂಕೇಶ್ ಅವರ ‘ಪೊಲೀಸರಿದ್ದಾರೆ ಎಚ್ಚರಿಕೆ’ ಹಾಗೂ ಶ್ರೀನಿವಾಸಪ್ರಭು ಅವರ ‘ಬಿಂಬ’ ಚಲನಚಿತ್ರ ಸಂಸರನ್ನು ದಕ್ಕಿಸಿಕೊಡುವ ಪ್ರಯತ್ನ ನಡೆಸಿವೆ.

20ನೇ ಶತಮಾನದ ಆರಂಭ ಆಧುನಿಕ ರಂಗಭೂಮಿ ವರ್ಷ. ಪ್ರತಿಷ್ಠಿತ ಎ.ಡಿ.ಎ ನಾಟಕ ರಚನಾ ಸ್ಪರ್ಧೆಯಲ್ಲಿ ಕೈಲಾಸಂ ಅವರ ‘ಟೊಳ್ಳುಗಟ್ಟಿ’ ಪ್ರಥಮ ಸ್ಥಾನ ಪಡೆಯಿತು. ಎರಡನೇಯ ಕೃತಿಯೇ ಸಂಸ ಅವರ ‘ಸುಗುಣ ಗಂಭೀರ’.

‘ಕೈಲಾಸಂ ಮತ್ತು ಸಂಸ ಒಂದೇ ಕಾಲಮಾನದಲ್ಲಿ ಜೀವಿಸಿದ್ದರು. ರಂಗದ ಮೂಲಕ ಚಾರಿತ್ರಿಕ ನಾಟಕಗಳನ್ನು ಕಟ್ಟಿ ನಿಲ್ಲಿಸಿದರು ಸಂಸ. ಅವರ ಭಾಷಾ ಪ್ರಯೋಗ ಹಳಗನ್ನಡದ ರಸಪಾಕ, ಶುದ್ಧ ಕನ್ನಡದ ಸ್ಪರ್ಶದಿಂದ ಕೂಡಿತ್ತು. ಶಾಸ್ತ್ರೀಯವಾಗಿ ಕಲಿತವರು ಮಾತ್ರ ಅರ್ಥೈಸಿಕೊಳ್ಳಬಹುದಾದ ಅಪ್ಪಟ ಸುಂದರ ಪ್ರಯೋಗಗಳು’ ಎಂದು ಕವಿ ಗುಂಬಳ್ಳಿ ಬಸವರಾಜು ಹೇಳಿದರು.

ಸಂಸ ಕಂಸರಾದ ಬಗೆ: ತಾಲ್ಲೂಕಿನ ಅಗರ ಗ್ರಾಮದಲ್ಲಿ 1898ರ ಜ.13ರಂದು ಜನಿಸಿದ ಸಂಸ ಅವರ ನಿಜ ಹೆಸರು ಎ.ಎಚ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ತಂದೆ ನರಸಿಂಹಪಂಡಿತ. ತಾಯಿ ಗೌರಮ್ಮ. ಸಂಸ ‘ವಿಗಡ ವಿಕ್ರಮರಾಯ’ ನಾಟಕವನ್ನು ಕಂಸ ಎಂಬ ಕಾವ್ಯನಾಮ ನೀಡಿ ಕಳುಹಿಸಿದ್ದರು. ಮುದ್ರಣ ದೋಷದಿಂದ ಅದು ಸಂಸ ಎಂದು ಹೆಸರಾಯಿತು ಎಂಬ ವಾದವೂ ಇದೆ. ಇವರು 23 ನಾಟಕ ರಚಿಸಿದ್ದಾರೆ. ಉಳಿದಿದ್ದು ಆರು (ಬೆಟ್ಟದ ಅರಸು, ಮಂತ್ರಶಕ್ತಿ, ಬಿರುದೆಂತೆಂಬರಗಂಡ, ವಿಜಯನರಸಿಂಹ, ಸುಗುಣಗಂಭೀರ, ವಿಗಡ ವಿಕ್ರಮರಾಯ..) ಮಾತ್ರ.

ಸಂಚಾರಿ ಸಂಸ: ಹಲವು ದೇಶಗಳಿಗೆ ಭೇಟಿ ನೀಡಿದ್ದ ಸಂಸ ಅವರು ಈಜಿಪ್ಟ್, ಆಫ್ರಿಕಾ, ಫಿಜಿ, ಅಫ್ಗಾನಿಸ್ತಾನಗಳಲ್ಲಿ ಕೂಲಿ ಕೆಲಸವನ್ನೂ ಮಾಡಿದ್ದರು. ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳ ಬಾಗಿಲನ್ನೂ ಬಡಿದಿದ್ದರು. ಪ್ರತಿಭಾಶಾಲಿ ಹಾಗೂ ಶ್ರೇಷ್ಠ ಕೃತಿರಚನಾ ಸಾಮರ್ಥ್ಯದ ಸಂಸರಿಗೆ ಜೀವ ಭಯ ಸದಾ ಕಾಡುತ್ತಿತ್ತು. ತಮ್ಮ 22 ಹಾಗೂ 37ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. 1939ರ ಫೆ.14 ಮೈಸೂರು ಸದ್ವಿದ್ಯಾ ಶಾಲೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ವಿವಿಧ ಕಾರ್ಯಕ್ರಮಗಳು
ಶುಕ್ರವಾರ (ಜ.13) ಸಂಸ ಅವರ 125ನೇ ವರ್ಷದ ಜನ್ಮದಿನ. ಇದರ ಅಂಗವಾಗಿ ತಾಲ್ಲೂಕಿನ ಶಾಲೆ ಮತ್ತು ಕಸಾಪ ಕಾರ್ಯಕ್ರಮಗಳಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ಚಿತ್ರಕಲೆ, ರೇಖಾಚಿತ್ರಗಳಲ್ಲಿ ಸಂಸರ ಮುಖಭಾವ ಮೂಡಲಿದೆ. ಇಂದಿನ ವಿದ್ಯಾರ್ಥಿಗಳಿಗೆ ಅವರ ಬದುಕು, ಸಾಧನೆ, ಅನುಪಮ ನಾಟಕಗಳ ಬಗ್ಗೆ ಚರ್ಚಾ ಗೋಷ್ಠಿಗಳು ಅವರನ್ನು ಮತ್ತೆ ಮುನ್ನಲೆಗೆ ತರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT