ಶನಿವಾರ, ಅಕ್ಟೋಬರ್ 24, 2020
28 °C
ತಂಗಲು ಇನ್ನೂ ಅವಕಾಶ ನೀಡಿಲ್ಲ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ

ಮಹದೇಶ್ವರ ಬೆಟ್ಟ: ಖಾಸಗಿಯವರಿಂದ ಭಕ್ತರಿಗೆ ಕೊಠಡಿ

ಪ್ರದೀಪ್‌ ಕುಮಾರ್‌ ಜಿ. Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಕೋವಿಡ್‌ ಕಾರಣದಿಂದ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ರಾತ್ರಿ ತಂಗಲು ಜಿಲ್ಲಾಡಳಿತ ಇನ್ನೂ ಅವಕಾಶ ನೀಡಿಲ್ಲ. ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಅತಿಥಿ ಗೃಹಗಳನ್ನು ಇನ್ನೂ ತೆರೆದಿಲ್ಲ. ಆದರೆ, ಕೆಲವು ಖಾಸಗಿ ಅತಿಥಿ ಗೃಹಗಳ ಮಾಲೀಕರು ಜಿಲ್ಲಾಧಿಕಾರಿ ಅವರ ಆದೇಶ ಉಲ್ಲಂಘಿಸಿ ಭಕ್ತರಿಗೆ ಕೊಠಡಿಗಳನ್ನು ನೀಡುತ್ತಿದ್ದಾರೆ. 

ಲಾಕ್‌ಡೌನ್‌ ಅವಧಿ ಕಳೆದು, ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತಗೊಂಡ ನಂತರ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರಾಧಿಕಾರ ಕೊಠಡಿಗಳನ್ನು ನೀಡದೇ ಇರುವುದರಿಂದ, ಖಾಸಗಿಯವರು ಇದೇ ಅವಕಾಶವನ್ನು ಬಳಸಿಕೊಂಡು ತಮ್ಮ ಅತಿಥಿಗೃಹಗಳನ್ನು ಭಕ್ತರಿಗೆ ನೀಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಜೆ 7 ಗಂಟೆಯ ನಂತರ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಭಕ್ತರು ವಾಪಸ್‌ ಹೋಗ‌ಬೇಕು ಎಂಬುದು ನಿಯಮ. ಆದರೆ, ಕೆಲವರು ಏಳು ಗಂಟೆಯ ನಂತರವೂ ಬರುತ್ತಿದ್ದಾರೆ. ಸಾಲೂರು ಮಠದಲ್ಲೂ ಭಕ್ತರು ವಾಸ್ತವ್ಯ ಹೂಡುತ್ತಿದ್ದಾರೆ ಎಂದು ಅವರು ತಿಳಿಸಿದರು. 

ಯಾರಿಗೂ ಕೊಠಡಿಗಳನ್ನು ಬಾಡಿಗೆಗೆ ನೀಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಕಣ್ತಪ್ಪಿಸಿ ಕೊಠಡಿಗಳನ್ನು ನೀಡಲಾಗುತ್ತಿದೆ. 

‘ರಾತ್ರಿ ತಂಗುವ ವ್ಯವಸ್ಥೆ ಇಲ್ಲ ಎಂದು ನಮಗೆ ತಿಳಿದಿರಲಿಲ್ಲ. ದೇವರ ದರ್ಶನ ಪಡೆಯಬೇಕು ಎಂಬ ಹಂಬಲದಿಂದ ಮೈಸೂರಿನಿಂದ ಬಂದಿದ್ದೇವೆ. ವಾಸ್ತವ್ಯ ಹೂಡಲು ಅವಕಾಶ ನೀಡದಿದ್ದರೆ, ನಾವು ಮತ್ತೆ ಅಷ್ಟು ದೂರದಿಂದ ಬರುವುದಕ್ಕೆ ಆಗುವುದಿಲ್ಲ. ಜಿಲ್ಲಾಡಳಿತವು ಸಂಜೆ 5 ಗಂಟೆ ನಂತರ ತಾಳಬೆಟ್ಟ ಅಥವಾ ಕೌದಳ್ಳಿಯಲ್ಲಿ ಬೆಟ್ಟಕ್ಕೆ ಹೋಗುವ ವಾಹನಗಳನ್ನು ತಡೆಯಬೇಕು’ ಎಂದು ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಮೈಸೂರಿನ ಭಕ್ತರಾದ ಮಹೇಶ್‌ ಹಾಗೂ ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಪ್ರಭಾರ ತಹಶೀಲ್ದಾರ್‌, ‘ಈ ಬಗ್ಗೆ ಮಾಹಿತಿ ಇಲ್ಲ. ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. 

ಬೆಟ್ಟಕ್ಕೆ ಭಕ್ತರ ದಂಡು

ಈ ಮಧ್ಯೆ, ಭಾನುವಾರ ರಜಾ ದಿನವಾಗಿದ್ದರಿಂದ ಬೆಟ್ಟಕ್ಕೆ ಭಾರಿ ಪ್ರಮಾಣದ ಭಕ್ತರು ಭೇಟಿ ನೀಡಿದ್ದಾರೆ. ಪ್ರಾಧಿಕಾರ ನೀಡುವ ಮಾಹಿತಿ ಪ್ರಕಾರ 15 ಸಾವಿರದಿಂದ 20 ಸಾವಿರದಷ್ಟು ಭಕ್ತರು ದರ್ಶನ ಪಡೆದಿದ್ದಾರೆ. 

ಹಲವು ಕಡೆಗಳಲ್ಲಿ ಭಕ್ತರು ಸುರಕ್ಷಿತ ಅಂತರ ಕಾಪಾಡಿಕೊಳ್ಳದೇ ಇದ್ದುದು ಕಂಡು ಬಂತು. 

‘ಭಾನುವಾರ 15 ಸಾವಿರದಿಂದ 20 ಸಾವಿರದವರೆಗೆ ಭಕ್ತರು ಭೇಟಿ ನೀಡಿದ್ದಾರೆ. ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದ್ದೇವೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಲಾಗುತ್ತಿದೆ. ವಯಸ್ಸಾದವರು ಹಾಗೂ ಮಕ್ಕಳನ್ನು ರಂಗ ಮಂದಿರದಲ್ಲೇ ಇರಿಸಲಾಗಿತ್ತು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು