ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಮುಂದುವರಿದ ರೋಹಿಣಿ ಮಳೆ, ಕೃಷಿ ಚಟುವಟಿಕೆಗಳಿಗೆ ಕಳೆ

ಕೃಷಿ ಹೊಂಡ, ಕೆರೆಗಳಲ್ಲಿ ತುಂಬಿದ ನೀರು
Last Updated 30 ಮೇ 2020, 16:55 IST
ಅಕ್ಷರ ಗಾತ್ರ

ಯಳಂದೂರು: ಜಿಲ್ಲೆಯಲ್ಲಿ ಐದಾರು ದಿನಗಳಿಂದ ರಾತ್ರಿ ಹೊತ್ತು ಸುರಿಯುತ್ತಿರುವ ರೋಹಿಣಿ ಮಳೆ ಶನಿವಾರವೂ ಮುಂದುವರಿದಿದೆ. ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಸಿನ ಗಾಳಿ ಮಳೆಯಾಗಿದೆ.

ಶುಕ್ರವಾರ ರಾತ್ರಿ ಜಿಲ್ಲೆಯಾದ್ಯಂತ 1.8 ಸೆಂ.ಮೀ ಮಳೆಯಾಗಿದೆ. ಯಳಂದೂರು ತಾಲ್ಲೂಕಿನಲ್ಲಿ 2.8 ಸೆಂ.ಮೀ, ಕೊಳ್ಳೇಗಾಲ–ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಸೆಂ.ಮೀ ಮಳೆ ಬಿದ್ದಿದೆ. ಹನೂರು ತಾಲ್ಲೂಕಿನ ಸಿಂಗನಲ್ಲೂರು ಮತ್ತು ಮಂಗಲ ಗ್ರಾಮಗಳಲ್ಲಿ ಅತಿ ಹೆಚ್ಚು ಅಂದರೆ 8.45 ಸೆಂ.ಮೀ ಮಳೆಯಾಗಿದೆ.

ಕೃಷಿ ಚಟುವಟಿಕೆ ಬಿರುಸು:ಮುಂಗಾರಿನ ಆರಂಭ ಎಂದೇ ಕೃಷಿಕರು ನಂಬಿರುವ ರೋಹಿಣಿ ಮಳೆ ಉತ್ತಮ ಆರಂಭ ನೀಡಿದೆ. ಪ್ರತಿ ದಿನ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಹೊಂಡ, ಕೆರೆ, ಅಣೆಕಟ್ಟೆಗಳಿಗೆ ನೀರು ಹರಿದು ಬರಲು ಆರಂಭಿಸಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

‘ಕಾಳು ಕಟ್ಟುವಿಕೆ ಹಂತ ಮುಟ್ಟಿರುವ ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ಮಳೆಯಿಂದ ಅನುಕೂಲವಾಗಲಿದೆ. ಅರಿಸಿನ, ಈರುಳ್ಳಿ ಮೊಳಕೆ ಒಡೆದಿವೆ. ತೆಂಗು ಮತ್ತು ಅಡಿಕೆ ನಾಟಿ ಮಾಡುವ ಕೃಷಿಕರಿಗೆ ಈ ಮಳೆ ವರ. ಆದರೆ, ಉದ್ದು, ಹೆಸರು ಬೆಳೆಗಾರರು ತೇವಾಂಶ ಹೆಚ್ಚಾಗದಂತೆ ಎಚ್ಚರ ವಹಿಸಬೇಕು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಅವರು ‘ಪ್ರಜಾವಾಣಿ’ಗೆ ಹೇಳಿದರು.

‘15 ದಿನಗಳಿಂದ ಹದವಾದ ಮಳೆ ಇಲ್ಲದೆ ತಾಕಿನಲ್ಲಿದ್ದ ಹೆಸರು, ಅಲಸಂದೆ, ಬಾಳೆ, ತೆಂಗು ಒಣಗುತ್ತಿದ್ದವು. ಶೇ 70 ಭಾಗ ಫಸಲು ಉಷ್ಣಾಂಶ ಏರಿಕೆಯಿಂದ ಬಾಡಿದ್ದವು. ಮಳೆ ಸುರಿಯುತ್ತಲೇ ಬೆಳೆ ಚೇತರಿಕೆ ಕಂಡಿದೆ. ಉತ್ತಮ ಫಸಲು ಕೈಸೇರುವ ಹಂಬಲದಲ್ಲಿ ಇದ್ದೇವೆ’ ಎಂದು ಕೆಸ್ತೂರು ಗ್ರಾಮದ ಮಲ್ಲಪ್ಪ ಅವರು ಆಶಾಭಾವನೆ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ರೋಹಿಣಿ ಮಳೆಯ ಆರಂಭಕ್ಕೆ ಭೂಮಿ ಹದಗೊಳಿಸಿ ಕೊನೆಯ ಚರಣಕ್ಕೆ ಬಿತ್ತನೆ ಕೈಗೊಳ್ಳಲಾಗುತ್ತದೆ. ಜೋಳ, ರಾಗಿ, ಸಿರಿಧಾನ್ಯ ಬಿತ್ತನೆ ಮಾಡಲಾಗುತ್ತದೆ. ವಾರದಿಂದ ನೀರಿಗಾಗಿ ಹಂಬಲಿಸುತ್ತಿದ್ದ ಕೃಷಿಕರು ಉತ್ತು, ಬಿತ್ತುವ ಕೆಲಸಗಳತ್ತ ಚಿತ್ತ ಹರಿಸಿದ್ದಾರೆ’ ಎಂದು ಕಿನಕಹಳ್ಳಿ ಪರಶಿವಪ್ಪ ಅವರು ಹೇಳಿದರು.

2 ಎಕರೆ ಬಾಳೆ ನಾಶ

ಯಳಂದೂರು: ತಾಲ್ಲೂಕಿನಾದ್ಯಂತ ಶುಕ್ರವಾರ ಸುರಿದ ಮಳೆ ಮತ್ತು ವೇಗವಾಗಿ ಬೀಸಿದ ಗಾಳಿಗೆ ಬಾಳೆ ಫಸಲು ನಾಶವಾಗಿದೆ.
ತಾಲ್ಲೂಕಿನ ಕಂದಹಳ್ಳಿ ಗ್ರಾಮದ ನಂಜುಂಡಸ್ವಾಮಿ ಅವರು ಎರಡು ಎಕರೆಯಲ್ಲಿ ಬಾಳೆ ನಾಟಿ ಮಾಡಿದ್ದರು.

‘ಗಿಡಗಳಲ್ಲಿ ಹೂ ಬಂದಿತ್ತು. ₹40 ಸಾವಿರ ಖರ್ಚು ಮಾಡಿ ಇಳುವರಿಯ ನಿರೀಕ್ಷೆಯಲ್ಲಿ ಇದ್ದೆವು. ರಾತ್ರಿಪೂರ ಸುರಿದ ಮಳೆ, ಗಾಳಿಗೆ ಬಾಳೆ ಫಸಲು ನಾಶವಾಗಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT