ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮುಂಗಾರು ಪೂರ್ವ ಮಳೆ; ಟೊಮೆಟೊ ದುಬಾರಿ

ಸೇಬಿನ ಬೆಲೆ ಮತ್ತೆ ಏರಿಕೆ; ಈದ್‌ ಉಲ್‌ ಫಿತ್ರ್‌–ಮಲ್ಲಿಗೆಗೆ ಹೆಚ್ಚಿದ ಬೇಡಿಕೆ
Last Updated 2 ಮೇ 2022, 16:23 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೊ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

ಹಾಪ್‌ಕಾಮ್ಸ್‌, ತರಕಾರಿ ಅಂಗಡಿ ಗಳಲ್ಲಿ ಕೆಜಿ ಟೊಮೆಟೊಗೆ ₹ 50–₹ 60 ಬೆಲೆ ಇದೆ. ಎಪಿಎಂಸಿಗಳಲ್ಲೇ ₹ 40–₹ 45 ಕೊಟ್ಟು ಖರೀದಿಸುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು. ತಳ್ಳುಗಾಡಿ ವ್ಯಾಪಾರಿಗಳು ಕಾಲು ಕೆಜಿಗೆ ₹ 20 ಪಡೆಯುತ್ತಿದ್ದಾರೆ. ಕೆಜಿಗೆ ₹ 80 ಹೇಳು ತ್ತಿದ್ದಾರೆ. ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಟೊಮೆಟೊಗೆ ₹ 40 ಇತ್ತು.

‘ಮಳೆ ಬಂದರೆ ಟೊಮೆಟೊ ಬೆಳೆ ಹಾನಿಯಾಗುತ್ತದೆ. ಬಹುತೇಕ ರೈತರು ಈಗಷ್ಟೇ ಟೊಮೆಟೊ ನಾಟಿ ಮಾಡಿದ್ದಾರೆ. ಹಾಗಾಗಿ, ಮಾರು ಕಟ್ಟೆಗೆ ಆವಕವಾಗುತ್ತಿರುವ ಪ್ರಮಾಣ ಕಡಿಮೆಯಾಗಿದೆ. ಶುಭ ಸಮಾರಂಭ ನಡೆಯುತ್ತಿರುವುದರಿಂದ ಹಾಗೂ ಗ್ರಾಹಕರಿಂದ ಬೇಡಿಕೆಯೂ ಹೆಚ್ಚಿರು ವುದರಿಂದ ಬೆಲೆ ಹೆಚ್ಚಾಗಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿ ದರು.

ಕಳೆದ ವಾರ ಹಾಪ್‌ಕಾಮ್ಸ್‌ನಲ್ಲಿ ಕೆಜಿ ಟೊಮೆಟೊಗೆ ₹ 30 ಇತ್ತು. ಈ ವಾರ ₹ 60ಕ್ಕೇರಿದೆ. ಮಳೆ ಹೀಗೆ ಮುಂದು ವರಿದರೆ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳುತ್ತಾರೆ ವ್ಯಾಪಾರಿಗಳು.

ಉಳಿದ ತರಕಾರಿಗಳ ಪೈಕಿ ಹಸಿಮೆಣಸಿನಕಾಯಿ ಬೆಲೆ ಕೆಜಿಗೆ ₹ 20 ಹೆಚ್ಚಾಗಿ, ₹ 60 ತಲುಪಿದೆ. ಹಲವು ವಾರಗಳಿಂದ ಬೀನ್ಸ್‌ (₹ 60), ಕ್ಯಾರೆಟ್‌ (₹ 40), ಆಲೂಗಡ್ಡೆ (₹ 30), ಮೂಲಂಗಿ (₹ 20), ಬೀಟ್‌ರೂಟ್‌ (₹ 20), ದಪ್ಪ ಮೆಣಸಿನಕಾಯಿ (₹ 80), ಗೆಡ್ಡೆಕೋಸು (₹ 40) ಸ್ಥಿರವಾಗಿವೆ.

ಸೇಬು ದುಬಾರಿ: ಹಣ್ಣುಗಳ ಪೈಕಿ ಸೇಬಿನ ಬೆಲೆ ಈ ವಾರ ಮತ್ತಷ್ಟು ಹೆಚ್ಚಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರದವರೆಗೂ ಕೆಜಿ ಸೇಬಿನ ಬೆಲೆ ₹ 160 ಇತ್ತು. ಈಗ ₹ 180ಕ್ಕೆ ತಲುಪಿದೆ. ಮಾರುಕಟ್ಟೆಗೆ ಸೇಬು ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ, ಬೇಡಿಕೆ ಹೆಚ್ಚಿರುವುದರಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ದಾಳಿಂಬೆ (ಕೆಜಿಗೆ ₹ 160), ಕಿತ್ತಳೆ (₹ 120), ದ್ರಾಕ್ಷಿ (₹ 100) ದುಬಾರಿ ದರ ಈ ವಾರವೂ ಮುಂದುವರಿದಿದೆ. ಏಲಕ್ಕಿ ಬಾಳೆಯ ಬೆಲೆಯಲ್ಲೂ ಬದಲಾವಣೆ ಕಂಡು ಬಂದಿಲ್ಲ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ಕೆಜಿಗೆ ₹ 180ರಿಂದ ₹ 220ರವರೆಗೂ ಇದೆ.

ಮುಸ್ಲಿಮರ ಹಬ್ಬ; ಮಲ್ಲಿಗೆ ದುಬಾರಿ
ಹೂವಿನ ಮಾರುಕಟ್ಟೆಯಲ್ಲಿ ಈ ವಾರ ಕೆಲವು ಹೂವುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ.

ಮಂಗಳವಾರ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಆಚರಿಸಲಿದ್ದು, ಹಬ್ಬದ ಅಂಗವಾಗಿ ಮಲ್ಲಿಗೆಗೆ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ಬೆಲೆಯಲ್ಲೂ ಹೆಚ್ಚಳವಾಗಿದೆ.

ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕೆಜಿ ಮಲ್ಲಿಗೆಗೆ ₹ 500ರಿಂದ ₹ 600 ಬೆಲೆ ಇತ್ತು.

‘ಮುಸ್ಲಿಂ ಸಮುದಾಯದವರು ಹಬ್ಬದ ಅಂಗವಾಗಿ ಮಲ್ಲಿಗೆ ಖರೀದಿಸುತ್ತಿದ್ದು, ಮಂಗಳವಾರವೂ ಈ ಬೆಲೆ ಮುಂದುವರಿಯಲಿದೆ. ಆ ಬಳಿಕ ಧಾರಣೆ ಇಳಿಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು.

ಮರ್ಲೆ ಹೂವಿಗೂ ಬೇಡಿಕೆ ಕಂಡು ಬಂದಿದ್ದು, ಕೆಜಿಗೆ ₹ 320 ಇದೆ.

ಶುಭ ಸಮಾರಂಭ, ಸರ್ಕಾರಿ ಜಯಂತಿ ಕಾರ್ಯಕ್ರಮ ಇರುವುದರಿಂದ ಚೆಂಡು ಹೂವಿಗೆ ಬೇಡಿಕೆ ಇದ್ದು, ಕೆಜಿಗೆ ₹ 50ರಿಂದ ₹ 60ರವರೆಗೆ ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT