ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಟೊಮೆಟೊ ಮತ್ತೆ ದುಬಾರಿ

ಬದಲಾಗದ ಹಣ್ಣುಗಳ ಧಾರಣೆ; ಮಳೆಯಿಂದ ಹೂವಿಗೆ ಬೇಡಿಕೆ ಕುಸಿತ
Last Updated 16 ಮೇ 2022, 16:13 IST
ಅಕ್ಷರ ಗಾತ್ರ

ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ಟೊಮೆಟೊ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.

ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹ 80 ಇದೆ. ಎರಡು ವಾರಗಳ ಹಿಂದೆ ₹ 40 ಇದ್ದ ಬೆಲೆ ₹ 60ಕ್ಕೆ ಏರಿಕೆಯಾಗಿತ್ತು. ಮಳೆ ಕಾರಣದಿಂದ ಟೊಮೆಟೊ ಬೆಳೆ ಹಾನಿಗೀಡಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿರುವುದರಿಂದ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ ಎನ್ನುತ್ತಾರೆ ವ್ಯಾಪಾರಿಗಳು.

ರೈತರಿಗೆ ಉತ್ತಮ ಬೆಲೆ: ಜಿಲ್ಲೆಯಲ್ಲಿ ಈ ಸಮಯದಲ್ಲಿ ಟೊಮೆಟೊ ಬೆಳೆಯುವವರ ಸಂಖ್ಯೆ ಕಡಿಮೆ. ಈರುಳ್ಳಿ, ಅರಿಸಿನ, ಸೂರ್ಯಕಾಂತಿ ಬೆಳೆಯುತ್ತಾರೆ. ಕೆಲವು ರೈತರು ಈಗ ಗಿಡ ನಾಟಿ ಮಾಡಿದ್ದು, ಪೈರು ಬಂದು, ಹೂ, ಹೀಚು ಕಾಯಿ ಬಿಟ್ಟಿದೆ. ಕೆಲವು ರೈತರ ಜಮೀನುಗಳಲ್ಲಿ ಮಾತ್ರ ಟೊಮೆಟೊ ಸಿಗುತ್ತದೆ. ಮಳೆಯೂ ಆಗುತ್ತಿರುವುದರಿಂದ ಟೊಮೆಟೊ ಬೆಳೆ ಹಾನಿಗೀಡಾಗುತ್ತಿದ್ದು, ಉತ್ಪಾದನೆ ಕಡಿಮೆಯಾಗಿದೆ.

ಹಾಗಾಗಿ, ಎಪಿಎಂಸಿಯಲ್ಲೇ ಟೊಮೆಟೊ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಕೆಜಿ ಟೊಮೆಟೊಗೆ ಸೋಮವಾರ ₹ 65 ಇತ್ತು. ಅಲ್ಲಿಂದ ಸಗಟು ದರದಲ್ಲಿ ಟೊಮೆಟೊ ಖರೀದಿಸುವ ವ್ಯಾಪಾರಿಗಳು, ತಮ್ಮ ಮಳಿಗೆಗಳಲ್ಲಿ ಲಾಭದ ಅಂತರ ಇಟ್ಟು ಮಾರಾಟ ಮಾಡುತ್ತಿದ್ದಾರೆ.

ಕೆಲವು ತಳ್ಳುಗಾಡಿ ವ್ಯಾ‍ಪಾರಿಗಳು ಕೆಜಿಗೆ ₹ 60ಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಟೊಮೆಟೊ ಬಿಟ್ಟು, ಇತರ ತರಕಾರಿಗಳ ಪೈಕಿ ಆಲೂಗಡ್ಡೆಯ ಬೆಲೆ ಕೆಜಿಗೆ ₹ 10 ಹೆಚ್ಚಾಗಿದೆ. ಹಲವು ತಿಂಗಳುಗಳಿಂದ ಆಲೂಗಡ್ಡೆ ಬೆಲೆ ಸ್ಥಿರವಾಗಿತ್ತು. ಹಾಪ್‌ಕಾಮ್ಸ್‌ನಲ್ಲಿ ₹ 30 ಇತ್ತು. ಈಗ ₹ 40ಕ್ಕೆ ತಲುಪಿದೆ.

ಬೀನ್ಸ್‌ನ ದುಬಾರಿ ಬೆಲೆ (ಕೆಜಿಗೆ ₹80) ಈ ವಾರವೂ ಮುಂದುವರಿದಿದೆ. ಕ್ಯಾರೆಟ್‌ (₹ 40), ಈರುಳ್ಳಿ (₹ 20), ಮೂಲಂಗಿ (₹ 30) ಸೇರಿದಂತೆ ಉಳಿದ ತ‌ರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಪೈಕಿ ಕೆಜಿಗೆ ₹ 180 ಇರುವ ಸೇಬು ದುಬಾರಿ ಹಣ್ಣು. ದಾಳಿಂಬೆಗೆ ₹ 160 ಇದೆ. ದ್ರಾಕ್ಷಿ (₹ 100), ಕಿತ್ತಳೆ (₹ 120), ಮೂಸಂಬಿ (₹ 80), ಏಲಕ್ಕಿ ಬಾಳೆ (₹ 60) ಸೇರಿದಂತೆ ಎಲ್ಲ ಹಣ್ಣುಗಳ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ (₹ 180–₹ 220) ಹಾಗೂ ಮಟನ್‌ ಬೆಲೆಯಲ್ಲಿ (₹ 600) ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT