ಮಂಗಳವಾರ, ಮೇ 18, 2021
22 °C
ಕೃಷಿ ಇಲಾಖೆಯೂ ಸಜ್ಜು: ಬಿತ್ತನೆ ಬೀಜ ವಿತರಣೆ ಆರಂಭ, ಸರ್ವರ್‌ ಸಮಸ್ಯೆಯಿಂದ ತೊಂದರೆ

ಮುಂಗಾರುಪೂರ್ವ ಮಳೆ: ಬಿತ್ತನೆಗೆ ರೈತರ ಸಿದ್ಧತೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗ‌ರ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಈಚೆಗೆ ವಿವಿಧ ಕಡೆಗಳಲ್ಲಿ ಸಾಧಾರಣ ಹಾಗೂ ಉತ್ತಮವಾಗಿ ಮಳೆಯಾಗುತ್ತಿದೆ. ಜಿಲ್ಲೆಯ ರೈತರು ಮುಂಗಾರು ಪೂರ್ವ ಬಿತ್ತನೆಗೆ ಸಿದ್ಧತೆ ನಡೆಸಿದ್ದು, ಕೃಷಿ ಇಲಾಖೆ ಕೂಡ ಬಿತ್ತನೆ ಬೀಜ ದಾಸ್ತಾನು ಹಾಗೂ ರಸಗೊಬ್ಬರಗಳ ದಾಸ್ತಾನು ಮಾಡಿಕೊಳ್ಳುತ್ತಿದೆ. 

ಸೋಮವಾರದಿಂದ (ಏ.12) ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಯನ್ನೂ ಆರಂಭಿಸಿದೆ. ಆದರೆ, ಈ ಬಾರಿ ಬಿತ್ತನೆ ಬೀಜ ಮಾರಾಟವೂ ಆನ್‌ಲೈನ್‌ನಲ್ಲೇ ಮಾಡುತ್ತಿರುವುದರಿಂದ ಹಲವು ಕಡೆಗಳಲ್ಲಿ ಸರ್ವರ್‌ ಸಮಸ್ಯೆ ತಲೆದೋರಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. 

ಭರವಸೆ ತಂದ ಮಳೆ

ಜಿಲ್ಲೆಯಲ್ಲಿ ಮಾರ್ಚ್‌ 1ರಿಂದಲೇ ಮುಂಗಾರು ಪೂರ್ವ ಅವಧಿ ಆರಂಭವಾಗುತ್ತದೆ. ಮಾರ್ಚ್‌ 1ರಿಂದ ಏಪ್ರಿಲ್‌ 15ರವರೆಗಿನ ವಾಡಿಕೆಯ ಮಳೆಗೆ ಹೋಲಿಸಿದರೆ ಈ ವರ್ಷ ಶೇ 44ರಷ್ಟು ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ ಈ ಒಂದೂವರೆ ತಿಂಗಳ ಅವಧಿಯಲ್ಲಿ 3.82 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 2.16 ಸೆಂ.ಮೀನಷ್ಟು ಮಾತ್ರ ಮಳೆಯಾಗಿದೆ.

ಆದರೆ, ಬುಧವಾರ (ಏಪ್ರಿಲ್‌ 14) ಮಳೆಯಾಗಿರುವುದು ರೈತರಲ್ಲಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ಆಶಾ ಭಾವನೆ ಮೂಡಿಸಿದೆ. ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1.27 ಸೆಂ.ಮೀ ಮಳೆಯಾಗಿದೆ.

ಗುರುವಾರವೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಹನೂರು ಭಾಗದ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಚಾಮರಾಜನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸಂಜೆ ಹೊತ್ತಿಗೆ ಸಾಧಾರಣ ಮಳೆ ಬಿದ್ದಿದೆ. 

‘ಕೃಷಿಗಾಗಿ ಮಳೆಯನ್ನೇ ಅವಲಂಬಿಸಿರುವ ರೈತರು ಹೊಲವನ್ನು ಉಳುಮೆ ಮಾಡಿದ್ದಾರೆ. ಮಳೆ ಸುರಿಯುತ್ತಿದ್ದಂತೆಯೇ ಕೃಷಿಕರು ಬಿತ್ತನೆ ಮಾಡಲು ಆರಂಭಿಸುತ್ತಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬಿತ್ತನೆ ಬೀಜ ದಾಸ್ತಾನು

ರೈತರಿಗೆ ಬಿತ್ತನೆ ಬೀಜ ವಿತರಿಸುವುದಕ್ಕಾಗಿ ಕೃಷಿ ಇಲಾಖೆಯು ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮಕ್ಕೆ ಜೋಳ, ಹೆಸರು, ಉದ್ದು, ಅಲಸಂದೆ, ತೊಗರಿ, ನೆಲಗಡಲೆ, ನವಣೆ ಬಿತ್ತನೆ ಬೀಜಕ್ಕಾಗಿ ಬೇಡಿಕೆ ಸಲ್ಲಿಸಿದೆ. ಸೂರ್ಯಕಾಂತಿ ಬೀಜವನ್ನು ಮೂರು ಖಾಸಗಿ ಸಂಸ್ಥೆಗಳಿಂದ ಖರೀದಿಸುತ್ತಿದೆ. 

2,819 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇಡಲಾಗಿದ್ದು, 707.8 ಕ್ವಿಂಟಲ್‌ಗಳಷ್ಟು ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ. 

ರಸಗೊಬ್ಬರ

ಮುಂಗಾರು ಪೂರ್ವ ಹಂಗಾಮಿಗಾಗಿ ಕೃಷಿ ಇಲಾಖೆ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ದಾಸ್ತಾನು ಇರಿಸಿದೆ. ಸದ್ಯ, 3,805.25 ಟನ್‌ಗಳಷ್ಟು ರಸಗೊಬ್ಬರ ದಾಸ್ತಾನು ಇದೆ.

ಸರ್ವರ್‌ ಸಮಸ್ಯೆ: ರೈತರ ಪರದಾಟ

ಸಂತೇಮರಹಳ್ಳಿ: ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸರ್ವರ್‌ ಸಮಸ್ಯೆಯಿಂದ ರೈತರು ಬಿತ್ತನೆ ಬೀಜ ಖರೀದಿಗಾಗಿ ಪರದಾಡುವಂತಾಗಿದೆ.

ಗುರುವಾರ ಮುಂಜಾನೆಯಿಂದಲೇ ರೈತರು ಸಂತೇಮರಹಳ್ಳಿಯಲ್ಲಿರುವ ರೈತಸಂಪರ್ಕ ಕೇಂದ್ರಕ್ಕೆ ರೈತರು ಬಂದಿದ್ದರು. ಈ ವರ್ಷದಿಂದ ಬಿತ್ತನೆ ಬೀಜ ವಿತರಣೆಯೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ರೈತರಿಗೆ ಬಿತ್ತನೆ ಬೀಜ ಸಕಾಲದಲ್ಲಿ ವಿತರಣೆಯಾಗುತ್ತಿಲ್ಲ. 

‘ಸರ್ವರ್‌ ಸಮಸ್ಯೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಂಡು ಬಂದಿದೆ. ರಾಜ್ಯದಾದ್ಯಂತ ಈ ಸಮಸ್ಯೆ ತಲೆದೋರಿದೆ. ಶೀಘ್ರದಲ್ಲಿ ಇದು ಬಗೆಹರಿಯಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು