ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸೋನೆ ಮಳೆ, ನೇಸರನ ಕಣ್ಣು ಮುಚ್ಚಾಲೆ

Last Updated 3 ಜುಲೈ 2022, 14:41 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಜಿಲ್ಲೆಯಾದ್ಯಂತ ಭಾನುವಾರ ನಸುಕಿನಿಂದಲೇ ಮಲೆನಾಡಿನ ವಾತಾವರಣ. ಬೆಳಿಗ್ಗೆಯಿಂದ ಸಂಜೆಯವರೆಗೂ ಆಗಾಗ ಬಿಡುವು ನೀಡುತ್ತ ಸುರಿದ ಜಿಟಿ ಜಿಟಿ ಮಳೆ ಜನ ಜೀವನವನ್ನು ಕಾಡಿತು. ಕೃಷಿ ಚಟುವಟಿಕೆಯ ಮೇಲೂ ಪರಿಣಾಮ ಬೀರಿತು.

ಶೀತ, ಚಳಿ ಹಾಗೂ ಮಳೆಯ ವಾತಾವರಣ ಭೂಮಿಗೆ ತಂಬು ತುಂಬಿತು. ಹೊಲ, ಗದ್ದೆಗಳಿಗೆ ತೆರಳಲು ಬಿಸಿಲು ಬರುವುದನ್ನೇ ಕಾಯುತ್ತಿದ್ದ ರೈತರಿಗೆ, ಕಾರ್ಮಿಕರಿಗೆ ನಿರಾಶೆಯಾಯಿತು. ಮಧ್ಯಾಹ್ನದ ನಂತರ ಸೋನೆ ಮಳೆ ಕೊಂಚ ಕಡಿಮೆಯಾಯಿತು.

ಚಾಮರಾಜನಗರ, ಯಳಂದೂರು ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಭಾನುವಾರ ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ಮಳೆ ಹಾಗೂ ರಜಾ ದಿನವಾಗಿದ್ದರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಯಳಂದೂರಿನಸಂತೆಯಲ್ಲಿ ಮಾರಾಟಗಾರರು ಹಾಗೂ ಗ್ರಾಹಕರು ಮಳೆ ನಡುವೆ ವಹಿವಾಟು ನಡೆಸಿದರು.

ನಿಲ್ಲದ ಕಾಯಕ: ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದರೂ ಜನರು ಛತ್ರಿ ಹಿಡಿದು ತಮ್ಮ ಜಮೀನುಗಳತ್ತ ಸಾಗಿದರು.

‘ಆರ್ಧ್ರಾ ಮಳೆ ವೈಭವ ಹೆಚ್ಚಾಗುವ ಲಕ್ಷಣ ಇದೆ. ಈ ಬಾರಿ ಮಾಗಿ ಉಳುಮೆಗೆ ಸಿದ್ಧತೆ ನಡೆಸಲು ಸಮಯ ಸಿಕ್ಕಿಲ್ಲ. ಇದರಿಂದ ಬಿತ್ತನೆ ಅವಧಿಯಲ್ಲಿ ವ್ಯತ್ಯಯ ಆಗಲಿದೆ. ನೀರಾವರಿಗೆ ಕೊರತೆ ಇಲ್ಲ. ಮಳೆಯೂ ಹೆಚ್ಚಾದರೆ ಅಂತರ್ಜಲ ಏರಿಕೆ ಆಗಲಿದೆ' ಎಂದು ಗುಂಬಳ್ಳಿ ಗ್ರಾಮದ ರೈತ ಮಹಾದೇವ ಹೇಳಿದರು.

‘ಬಿಳಿಗಿರಿರಂಗನಬೆಟ್ಟದಲ್ಲಿ ಎರಡು ದಿನಗಳಿಂದ ವರ್ಷಧಾರೆಯಾಗುತ್ತಿದೆ. ಭಾನುವಾರ ಮಧ್ಯಾಹ್ನ3 ಗಂಟೆಯನಂತರ ಮಳೆ ಬಿಡುವು ಕೊಟ್ಟಿತು. ಇದರಿಂದ ತೋಟಗಾರಿಕಾ ಬೆಳೆಗಳ ನಿರ್ವಹಣೆಗೆ ಹಿನ್ನಡೆಯಾಗಿದೆ. ಆದರೆ, ಕೆರೆ-ಕಟ್ಟೆಗಳಿಗೆ ನೀರು ಹರಿಯುತ್ತಿದೆ’ ಎಂದು ಬೆಟ್ಟದ ನಿವಾಸಿ ಬೊಮ್ಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT