ಶನಿವಾರ, ಫೆಬ್ರವರಿ 27, 2021
23 °C
ಜಿಲ್ಲೆಯಲ್ಲೂ ಮುಂದುವರಿದ ವರುಣನ ಆರ್ಭಟ, ಬಂಡೀಪುರದ ಕೆರೆಕಟ್ಟೆಗಳಿಗೆ ಹರಿದು ಬಂದ ನೀರು

ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ‌ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಬಿರುಸು ಪಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಜಿಲ್ಲೆಯ ಅರಣ್ಯ ಭಾಗಗಳಲ್ಲಿರುವ ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.

ಈ ಮಧ್ಯೆ, ಕಬಿನಿ ಜಲಾಶಯದಿಂದ 85 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಯಾವ ಕ್ಷಣವಾದರೂ ಹೆಚ್ಚಾಗಬಹುದು. ನದಿ ದಂಡೆಯ ಗ್ರಾಮಗಳ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. 

ಕಾವೇರಿ ನದಿ ತೀರದ ಗ್ರಾಮಗಳಾದ ದಾಸನಪುರ, ಹಳೆ ಹಂಪಾಪುರ, ಮುಳ್ಳೂರು, ಹಳೆ ಅಣ್ಣಗಳ್ಳಿ, ಹರಳೆ, ನರೀಪುರ, ಸರಗೂರು, ಧನಗೆರೆ, ಸತ್ತೇಗಾಲ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ನೀರಿನ ಮಟ್ಟ ಹೆಚ್ಚುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ನದಿಯ ಹತ್ತಿರ ಯಾರೂ ಸುಳಿಯದಂತೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಕಳೆದ ವರ್ಷವೂ ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಐದು ಗ್ರಾಮಗಳು ಜಲಾವೃತವಾಗಿದ್ದವು. ಜನ ಹಾಗೂ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಎರಡು ಗಂಜಿ ಕೇಂದ್ರಗಳನ್ನೂ ತೆರೆಯಲಾಗಿತ್ತು. 

ಮುಂದುವರಿದ ಮಳೆ: ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮಳೆ ಎಡೆಬಿಡದೆ ಮಧ್ಯಾಹ್ನದವರೆಗೂ ಸುರಿಯಿತು. ಸ್ವಲ್ಪ ಹೊತ್ತು ಬಿಡುವು ಕೊಟ್ಟ ಬಳಿಕ ಮತ್ತೆ ಆರಂಭವಾಯಿತು.

ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜು ಆವರಣದಲ್ಲಿ ಕಾರೊಂದರ ಮೇಲೆ ಮರ ಬಿದ್ದು ಜಖಂಗೊಂಡಿದೆ. ಪಟ್ಟಣ ಪೊಲೀಸ್‌ ಠಾಣೆಯ ಕಟ್ಟಡ ಶಿಥಿಲವಾಗಿದ್ದು, ಚಾವಣಿ ಸೋರುತ್ತಿದ್ದುದರಿಂದ ಸಿಬ್ಬಂದಿ ಛತ್ರಿ ಹಿಡಿದು ಕೆಲಸ ಮಾಡಿದರು. ಬೆಳಿಗ್ಗೆಯಿಂದಲೇ ಒಂದೇ ಸಮನೆ ಮಳೆ ಸುರಿಯುತ್ತಿದ್ದರಿಂದ ಜನರು ಮನೆಯಿಂದ ಹೊರಗೆ ಬರಲಿಲ್ಲ. ನಗರದಲ್ಲಿ ವಾಹನಗಳ, ಜನರ ಸಂಚಾರ ವಿರಳವಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ಖರೀದಿಗೂ ಮಳೆ ಅಡ್ಡಿಯಾಯಿತು. ಮಧ್ಯಾಹ್ನದವರೆಗೆ ಮಾರುಕಟ್ಟೆಯಲ್ಲೂ ಜನರ ಓಡಾಟ ಕಂಡು ಬರಲಿಲ್ಲ.  

ಕೊಳ್ಳೇಗಾಲ: ತಾಲ್ಲೂಕಿನಲ್ಲಿ  ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ನರೀಪುರ, ಟಗರಪುರ, ಕುಂತೂರು, ಉತ್ತಂಬಳ್ಳಿ, ತೇರಂಬಳ್ಳಿ, ಮುಡಿಗುಂಡ, ಕೆಂಪನಪಾಳ್ಯ, ರಕ್ಕರಸನಪಾಳ್ಯ, ತಿಮ್ಮರಾಜೀಪುರ, ಕುರುಬನಕಟ್ಟೆ, ಜಕ್ಕಳಿ, ಜಾಗೇರಿ, ಗುಂಡೇಗಾಲ, ಪಾಳ್ಯ, ಕಮಲಪುರ, ಚೆಲುವನಹಳ್ಳಿ, ಹ್ಯಾಡ್‍ಪೋಸ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ಬುಧವಾರ ತುಂತುರು ಮಳೆ ಪ್ರಾರಂಭವಾಗಿ ಮಧ್ಯರಾತ್ರಿ ಜೋರು ಮಳೆ ಸುರಿದಿದೆ. ಬೆಳಿಗ್ಗೆ ಪ್ರಾರಂಭವಾದ ಮಳೆ ಮಧ್ಯಾಹ್ನದವರೆಗೂ ಸುರಿಯಿತು. 

ಗುಂಡ್ಲುಪೇಟೆಯಲ್ಲಿ: ತಾಲ್ಲೂಕಿನಲ್ಲೂ ಮಳೆ ಜನಜೀವನದ ಮೇಲೆ ಪರಿಣಾಮ ಬೀರಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪೂಜೆ ಸಾಮಗ್ರಿಗಳನ್ನು ಕೊಳ್ಳಲೂ ಮಳೆ ಬಿಡುವು ನೀಡಿಲ್ಲ. ಪಟ್ಟಣದ ಊಟಿ ವೃತ್ತ ಹಾಗೂ ಮಡಹಳ್ಳಿ ವೃತ್ತದಲ್ಲಿ ಕೆರೆಯಂತೆ ನೀರು ಸಂಗ್ರಹವಾಗಿ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆಯಾಯಿತು. ಮಳೆ ಸತತವಾಗಿ ಸುರಿಯುತ್ತಿದ್ದರಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಕೆಸರು ಗದ್ದೆಗಳಾಗಿದೆ. ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ನೀರು ಮನೆಗೆ ನುಗ್ಗಿದೆ. 

ಗೋಡೆ ಕುಸಿತ: ತಾಲ್ಲೂಕಿನ ಬೇಗೂರು ಹೋಬಳಿಯ ಚಿಕ್ಕಾಟಿ ಗ್ರಾಮದಲ್ಲಿ ಚಂದ್ರು ಎಂಬುವರು ಮನೆಯ ಗೊಡೆ ಮಳೆಯಿಂದ ಕುಸಿದಿದೆ. ತಾಲ್ಲೂಕಿನ ಮಂಚಳ್ಳಿ ಗ್ರಾಮದ ನಾಗಶೆಟ್ಟಿ ಎಂಬುವರ ಮನೆ ಕುಸಿದಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಹನೂರು: ಬುಧವಾರ ಹಾಗೂ ಗುರುವಾರ ಮುಂಜಾನೆಯಿಂದಲೇ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಪಟ್ಟಣದ ಬಸ್ ನಿಲ್ದಾಣ ಕೆಸರುಮಯವಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡಿದರು.

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಂಗಲ, ಆರ್.ಎಸ್.ದೊಡ್ಡಿ, ಕಾಮಗೆರೆ, ಅಜ್ಜಿಪುರ, ಮಣಗಳ್ಳಿ ಬಂಡಳ್ಳಿ, ಶಾಗ್ಯ ಇನ್ನಿತರ ಗ್ರಾಮಗಳಿಂದ ದವಸ ಧಾನ್ಯ, ಆಹಾರ ವಸ್ತು, ಹೂವುಗಳು, ವಿವಿಧ ಸಾಮಗ್ರಿಗಳನ್ನು ಖರೀದಿಸಲು ಬಂದಿದ್ದ ಜನರು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೈರಾಣರಾದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ತುಂಬಿದ್ದ ಪರಿಣಾಮ ವಾಹನ ಸವಾರರು ಸಂಚರಿಸಲು ಹರಸಾಸಹ ಪಡುವಂತಾಯಿತು. 

ಗೂಳಿಪುರ: ಮನೆ ಗೋಡೆ ಕುಸಿತ
ಯಳಂದೂರು:
ಸಮೀಪದ ಗೂಳೀಪುರ ಗ್ರಾಮದಲ್ಲಿ ದಿನವಿಡೀ ಸುರಿದ ವರ್ಷಧಾರೆಗೆ ಗುರುವಾರ ಹೆಂಚಿನ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ. 

ಮನೆ ಮಾಲೀಕ ಸುಬ್ಬು ಅವರು ಉದ್ಯೋಗ ನಿಮಿತ್ತ ಮೈಸೂರಿಗೆ ತೆರಳಿದ್ದರು. ರಾತ್ರಿ ಇಡೀ ತುಂತುರುಮಳೆ ಬರುತ್ತಿತ್ತು. ತಡರಾತ್ರಿ ಮನೆಯ ಗೋಡೆ ಕುಸಿಯಿತು. ವಿದ್ಯುತ್‌ ಮೀಟರ್‌ ಮತ್ತು ವೈರ್‌ ಕಳಚಿದೆ. ಮನೆಮಂದಿ ಹೊರ ಹೋಗಿದ್ದರಿಂದ ಅಪಾಯ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಬಸ್‌ ಸಂಚಾರ ಯಥಾಸ್ಥಿತಿ
ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಹಾಗೂ ರಾಜ್ಯದ ವಿವಿಧ ಕಡೆಗಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. 

‘ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೀವ್ರವಾಗಿ ಮಳೆ ಸುರಿಯುತ್ತಿರುವುದರಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ವಿರಾಜಪೇಟೆಗಳಿಗೆ ಹೋಗುವ ಬಸ್‌ಗಳ ಸಂಖ್ಯೆಯನ್ನು ಕಡಿತ ಮಾಡಲಾಗಿದೆ. ತಮಿಳುನಾಡು, ಕೇರಳಗಳ ವಿವಿಧ ಊರುಗಳಿಗೆ ಎಂದಿನಂತೆ ಬಸ್‌ಗಳು ಸಂಚರಿಸುತ್ತಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು