ಸೋಮವಾರ, ಮೇ 17, 2021
21 °C
ಫಲಾನುಭವಿ ಕೃಷಿಕರ ಖಾತೆಗೆ ಸಹಾಯಧನ ಪಾವತಿ

ಯಳಂದೂರು: ಸಿರಿಧಾನ್ಯ ಬೆಳೆಗಾರರಿಗೆ ‘ರೈತಸಿರಿ‘

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ರಾಷ್ಟ್ರೀಯ ಕೃಷಿ ವಿಕಾಸ ಕಾರ್ಯಕ್ರಮದ ಭಾಗವಾಗಿ ರಾಜ್ಯದಾದ್ಯಂತ ಅನುಷ್ಠಾನಗೊಂಡ ‘ರೈತಸಿರಿ’ ಯೋಜನೆ ಮೂಲಕ ತಾಲ್ಲೂಕಿನ ಫಲಾನುಭವಿ ರೈತರ ಖಾತೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬೆಳಗಾರರಿಗೆ ಸಹಾಯಧನ ಪಾವತಿಯಾಗಿದೆ.

ಸಿರಿಧಾನ್ಯ ಬೆಳೆಯಲು ಕೃಷಿಕರಿಗೆ ಉತ್ತೇಜನ ನೀಡುವ ಮೂಲಕ ಆ ಬೆಳೆಗಳ ವ್ಯಾಪ್ತಿ ವಿಸ್ತರಿಸುವ ಉದ್ದೇಶದಿಂದ ಕೃಷಿ ಇಲಾಖೆ ಮೂಲಕ ತಾಲ್ಲೂಕಿನಲ್ಲಿ 2019–20ನೇ ಸಾಲಿನಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗಾಗಲೇ ನೂರಾರು ರೈತರು ಸಹಾಯಧನ ಪಡೆದಿದ್ದಾರೆ.

ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆ ಕೆಲ ಬೇಸಾಯಗಾರರಿಗೆ ಮಿತಿಗೊಂಡಿದೆ. 50 ಹೆಕ್ಟೇರ್‌ ಪ್ರದೇಶಕ್ಕೆ ವಿಸ್ತರಿಸಲು ಕೃಷಿ ಇಲಾಖೆ ಯೋಜನೆ ರೂಪಿಸಿತ್ತು. ಆದರೆ, ಅದು 35 ಹೆಕ್ಟೇರ್‌ ಹಿಡುವಳಿಗೆ ಸೀಮಿತವಾಗಿದೆ. ಒಟ್ಟಾರೆ ಶೇ 10 ಫಲಾನುಭವಿಗಳು ಯೋಜನೆ ವ್ಯಾಪ್ತಿಯಲ್ಲಿ ಇದ್ದಾರೆ. ಹೊನ್ನೂರು ಮತ್ತು ಕೆಸ್ತೂರು ಗ್ರಾಮಗಳ ರೈತರು ಸಿರಿಧಾನ್ಯವನ್ನು ಹೆಚ್ಚು ಬೆಳೆಯುತ್ತಿದ್ದಾರೆ.

‘ಪೌಷ್ಟಿಕ ಆಹಾರವಾದ ಸಿರಿಧಾನ್ಯಗಳಿಂದ ರೈತರ ಭದ್ರತೆ, ಸುಸ್ಥಿರ ಕೃಷಿ ಹಾಗೂ ಪರಿಸರ ಸಂರಕ್ಷಣೆ ಸಾಧ್ಯವಾಗಿದೆ. ಹೀಗಾಗಿ, ಅವುಗಳನ್ನು ಬೆಳೆಯಲು ಪ್ರೋತ್ಸಾಹ ಸಿಕ್ಕಿದೆ. ಅತಿ ಕಡಿಮೆ ಮಳೆ ಮತ್ತು ಕಡಿಮೆ ಫಲವತ್ತತೆ ಇರುವ ಗದ್ದೆಗಳಲ್ಲಿ ವ್ಯವಸಾಯ ಕೈಗೊಳ್ಳಬಹುದು. ಸಿರಿಧಾನ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ, ಮಾರುಕಟ್ಟೆ ಸಂಪರ್ಕ ಹೆಚ್ಚು ಮಾಡುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ’ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

‘ಇಲಾಖೆ ನಿಯಾಮನುಸಾರ ಕೃಷಿಭೂಮಿ ಇರುವವರು ಕೊರಲೆ, ಹಾರಕ, ಊದಲು, ನವಣೆ, ಸಾಮೆ, ಬರಗು ಬೆಳೆದು ಯೋಜನೆ ಲಾಭ ಪಡೆದಿದ್ದಾರೆ. ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಸಹಾಯ ಧನ ನಿಗದಿ ಪಡಿಸಿದೆ. ಅದರಂತೆ ₹6 ಸಾವಿರ ಮತ್ತು ₹4 ಸಾವಿರದಂತೆ 2 ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಸಹಾಯಧನ ವಿತರಿಸಲಾಗಿದೆ. ಇನ್ನೂ ಕೆಲವರಿಗೆ ಪಾವತಿಯಾಗಬೇಕಿದೆ’ ಎಂದು ಕೃಷಿಕರಾದ ಪ್ರಸನ್ನ ಮತ್ತು ಮಹದೇವಪ್ಪ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿತ್ತನೆ ಮಾಡಿದ ಹೊಲಗಳಲ್ಲಿ ಜಿಪಿಎಸ್ ಆಧರಿತ ಛಾಯಾಚಿತ್ರಗಳನ್ನು ಪರಿಶೀಲಿಸಿದ ನಂತರ ಕೇಂದ್ರದಿಂದ ಬಿಡುಗಡೆಯಾದ ಅನುದಾನದಲ್ಲಿ ಮೊದಲ ಕಂತಿನ ₹6 ಸಾವಿರ ಮೊತ್ತವನ್ನು ರೈತರ ಖಾತೆಗೆ ಹಾಕಲಾಗುತ್ತದೆ. ರಾಜ್ಯ ಸರ್ಕಾರ ನಂತರ ತನ್ನ ಪಾಲಿನ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡುತ್ತದೆ.

‘ತಾಲ್ಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ 70 ರೈತರಲ್ಲಿ 35 ಮಂದಿಗೆ ವಿತರಿಸಲಾಗಿದೆ. ಸಿರಿಧಾನ್ಯವನ್ನು ಸರಾಸರಿ ಕೆ.ಜಿಗೆ ₹100 ರಂತೆ ಮಾರಾಟ ಮಾಡಬಹುದು. ಅಲ್ಪ ಮಳೆಗೆ 85–90 ದಿನಗಳಲ್ಲಿ ಫಸಲು ಕೈಸೇರುತ್ತದೆ. 9 ಸಾವಿರ ಕೃಷಿಕರಲ್ಲಿ ಶೇ 10 ರಷ್ಟು ರೈತರು ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಾರೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಂತ್ರಿಕ ಕಾರಣಕ್ಕೆ ಬಾರದ ಹಣ 

ತಾಂತ್ರಿಕ ದೋಷ, ಆಧಾರ್ ಜೋಡಣೆ ಆಗದೇ ಇರುವ ರೈತರ ಖಾತೆಗಳಿಗೆ ಸಹಾಯಧನ ಜಮಾ ಆಗುವುದಿಲ್ಲ. ಈ ಕಾರಣದಿಂದ ಹಲವರಿಗೆ ಇನ್ನೂ ಪಾವತಿ ಆಗಿಲ್ಲ. ಸಮಸ್ಯೆ ಸರಿಪಡಿಸಲು ಪ್ರಯತ್ನ ನಡೆಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಸಿರಿಧಾನ್ಯಗಳ ಒಕ್ಕಣೆ, ಮಾರುಕಟ್ಟೆ ಸಮಸ್ಯೆ ಮತ್ತಿತರ ಕಾರಣಗಳಿಂದ ಬೆಳೆಗಾರರಿಗೆ ಹಿಂಜರಿಕೆ ಇದೆ. ಈ ಬೆಳೆಗಳನ್ನು ವರ್ಷಪೂರ್ತಿ ಬೆಳೆಯಲು ಅವಕಾಶ ಇದೆ. ಹಾಗಾಗಿ, ಸಮುದಾಯ ಬೇಸಾಯದಡಿ ಸಂಸ್ಕರಣೆ ಮತ್ತು ಅವುಗಳ ಮೌಲ್ಯ ಹೆಚ್ಚಿಸುವ ಕೆಲಸಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಪ್ರಗತಿಪರ ಕೃಷಿಕರ ಸಂಘಗಳು ಕೈಜೋಡಿಸಿವೆ. ಈ ಬಗ್ಗೆ ರೈತರಿಗೆ ಸರ್ಕಾರ ಹೆಚ್ಚಿನ ಮಾಹಿತಿ ನೀಡಿದರೆ ಬೆಳೆಗಾರರ ಸಂಖ್ಯೆ ಹೆಚ್ಚಾಗಲಿದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು