ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಜಿಲ್ಲೆಯಲ್ಲಿ ಜಾನಪದ ರಂಗಾಯಣ ಸ್ಥಾಪನೆಯಾಗಲಿ: ಮಂಡ್ಯ ರಮೇಶ್‌

Last Updated 30 ಜನವರಿ 2021, 15:16 IST
ಅಕ್ಷರ ಗಾತ್ರ

ಚಾಮರಾಜನಗರ: ಜಾನಪದ ಕಲೆಗೆ ಹೆಸರಾದ ಚಾಮರಾಜನಗರದಲ್ಲಿ ಜಾನಪದ ರಂಗಾಯಣ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ರಂಗಭೂಮಿ, ಚಿತ್ರ ನಟ ಮಂಡ್ಯರಮೇಶ್‌ ಅವರು ಶನಿವಾರ ಹೇಳಿದರು.

ನಗರದ ರಂಗತರಂಗ ಟ್ರಸ್ಟ್‌ ಹಮ್ಮಿಕೊಂಡಿದ್ದ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ‘ರಂಗಭೀಷ್ಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಮೈಸೂರಿನಲ್ಲಿ ರಂಗಾಯಣ ಇದೆ. ಹಲವು ಬುದ್ಧಿಜೀವಿಗಳು ಅಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ದಾವಣಗೆರೆಗೆ ವೃತ್ತಿಪರ ರಂಗಾಯಣ ನೀಡಲಾಗಿದೆ. ಅದೇ ರೀತಿ, ಜಾನಪದ ರಂಗಾಯಣ ಸಂಸ್ಥೆಯನ್ನು ಈ ಜಿಲ್ಲೆಯಲ್ಲಿ ಸ್ಥಾಪಿಸುವುದಕ್ಕೆ ಅವಕಾಶ ಇದೆ’ ಎಂದು ಅವರು ಹೇಳಿದರು.

‘ಈ ಸಂಸ್ಥೆ ಮೂಲಕ ರಂಗಭೂಮಿಯನ್ನು ಪ್ರಾಯೋಗಿಕವಾಗಿ ತಾಲ್ಲೂಕು ಹಾಗೂ ಅದರ ಕೆಳ ಹಂತಕ್ಕೂ ತೆಗೆದುಕೊಂಡು ಹೋಗುವಂತಾಗಬೇಕು. ಮಕ್ಕಳಿಗೆ ಡ್ಯಾನ್ಸ್, ಕ್ರೀಡೆ ಮುಂತಾದ ತರಬೇತಿ ಕೊಡಿಸದೆ, ವಿವಿಧ ಜನಪದ ಕಲೆಗಳನ್ನು ಶಾಲಾ ಕಾಲೇಜುಗಳಲ್ಲಿ ಕಲಿಸಿದರೆ ಅವರು ಖಂಡಿತವಾಗಿಯೂ ನಮ್ಮ ನೆಲದ ಸಂಸ್ಕೃತಿಯನ್ನು ಕಲಿತು ಬೆಳೆಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಂತಹ ಸಂಸ್ಥೆ ಸ್ಥಾಪಿಸಲು ಮುಂದಾಗಬೇಕು. ಜಿಲ್ಲಾಡಳಿತ ಹಾಗೂ ಜಾನಪದ ಕಲೆಗೆ ಮಿಡಿಯುವ ಮನಸ್ಸುಗಳು ಪ್ರಯತ್ನಪಟ್ಟರೆ ಜಾನಪದ ರಂಗಾಯಣವನ್ನು ಸ್ಥಾಪಿಸಲು ಸಾಧ್ಯ’ ಎಂದು ಅವರು ಹೇಳಿದರು.

‘ಜಾನಪದದಲ್ಲಿ ವಿಜ್ಞಾನ, ಅಧ್ಯಾತ್ಮ, ಶ್ರೇಷ್ಠತೆ, ಸಮಾನತೆ, ಐಕ್ಯತಾ ಭಾವ ಹೀಗೆ ಎಲ್ಲವೂ ಹಾಸು ಹೊಕ್ಕಾಗಿದೆ. ಒಂದು ಜಾನಪದ ಸಮ್ಮೇಳನ ನೂರಾರು ವಿಜ್ಞಾನ ಸಮ್ಮೇಳನಗಳಿಗೆ ಸಮ. ಜಾನಪದದಲ್ಲೂ ವೈಜ್ಞಾನಿಕ ಮನೋಭಾವ ಇದೆ. ಪದಗಳನ್ನು ಒಡೆದು ಅದನ್ನು ಅರ್ಥಮಾಡಿಕೊಂಡರೆ ಇದು ಅರಿವಿಗೆ ಬರುತ್ತದೆ’ ಎಂದರು.

‘ರಂಗ ಭೀಷ್ಮ ಎಂಬ ಪ್ರಶಸ್ತಿ ಪಡೆಯುವುದಕ್ಕೆ ನನಗೆ ಸ್ವಲ್ಪ ಹಿಂಜರಿಕೆಯಾಗುತ್ತದೆ. ಯಾಕೆಂದರೆ ನನಗೆ ಅಷ್ಟು ವಯಸ್ಸಾಗಿಲ್ಲ. ನಾನು ಭೀಷ್ಮನೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಭಾರತ ಈಗ ಶರಶಯ್ಯೆಯಲ್ಲಿ ಮಲಗಿರುವುದಾದರೆ ನಾನು ಕೂಡ ಭೀಷ್ಮನೇ. ದೇಶದ ರೈತ ಆತಂಕದಲ್ಲಿದ್ದಾನೆ. ಅವನಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ ಗಲಾಟೆಗಳನ್ನು ನೋಡುತ್ತಿದ್ದರೆ ಮೈ ಉರಿಯುತ್ತದೆ. ತಾವು ಮಾಡದ ಎಷ್ಟೋ ತಪ್ಪುಗಳಿಗೆ ಭಾರತೀಯರು ಹೊಣೆಗಾರರಾಗಬೇಕಾಗುತ್ತದೆ’ ಎಂದು ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮಂಡ್ಯ ರಮೇಶ್‌ ಅವರು ಬೆಳಕು ಚೆಲ್ಲಿದರು.

‘ಜಿಲ್ಲೆಗೆ ರಂಗಮಂದಿರ ಅತ್ಯಂತ ಅವಶ್ಯಕವಿದ್ದು, ಈಗಾಗಲೇ ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿರುವ ರಂಗಮಂದಿರವನ್ನು ಶೀಘ್ರವಾಗಿ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ಅವರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

ಜೀವಂತ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಿ:ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಚಾಮರಾಜನಗರ ವಿಸ್ಮಯಗಳ ಆಗರ. ಇಲ್ಲಿ ಪ್ರತಿದಿನ ಹೊಸತನವನ್ನು ಕಾಣಬಹುದು. ಹಲವು ದಾರ್ಶನಿಕರು ಇಲ್ಲಿ ನೆಲೆಸಿದ್ದರು. ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಮುಖ ಜಿಲ್ಲೆಯಾಗಿರುವ ಇಲ್ಲಿನ ಸಂಸ್ಕೃತಿ ಜೀವಂತವಾಗಿದೆ. ಅದಕ್ಕೆ ಎಲ್ಲರೂ ಹೆಮ್ಮೆ ಪಡಬೇಕು. ಆದರೆ, ಕೆಲವರಿಗೆ ಚಾಮರಾಜನಗರದವರು ಎಂದು ಹೇಳಿಕೊಳ್ಳಲು ಹಿಂಜರಿಕೆ ಮತ್ತು ಕೀಳರಿಮೆ ಇದೆ’ ಎಂದರು.

‘ಜಿಲ್ಲೆಯ ಸಂಸ್ಕೃತಿಯ ಹಿರಿಮೆ ಮತ್ತು ಮಹತ್ವ ನಮಗೆ ಗೊತ್ತಿಲ್ಲ. ನಮ್ಮ ಜಿಲ್ಲೆಯ ಬಗ್ಗೆ ಹೆಮ್ಮೆ ಪಡಬೇಕು. ಇಲ್ಲಿನ ಸಂಸ್ಕೃತಿಯ ಸಿರಿವಂತಿಗೆ ನಮ್ಮ ಮೂಲಕ ಮುಂದಿನ ಪೀಳಿಗೆಗೆ ತಲುಪಬೇಕು’ ಎಂದು ಅವರು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಕೆ.ಗಿರೀಶ್‌ ಅವರು ಮಂಡ್ಯ ರಮೇಶ್‌ ಅವರಿಗೆ ರಂಗಭೀಷ್ಮ ಪ್ರಶಸ್ತಿ ಪ್ರದಾನ ಮಾಡಿದರು.ಸಾಹಿತಿ ಮಂಜು ಕೋಡಿ ಉಗನೆ ಅವರು ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಎ.ಎಂ.ನಾಗಮಲ್ಲಪ್ಪ, ವಿರೂಪಾಕ್ಷಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT