ಗುರುವಾರ , ಫೆಬ್ರವರಿ 25, 2021
20 °C
ಕೇಂದ್ರ ಸರ್ಕಾರದ ಪಡಿತರ ವಿತರಣೆ ಆರಂಭ, ವಾಪಸ್‌ ಮಾಡಿದ್ದು 175 ಕ್ವಿಂಟಲ್‌ ಬೇಳೆ

ಚಾಮರಾಜನಗರ: ಕಳಪೆ ಬದಲು ಹೊಸ ಬೇಳೆ ಪೂರೈಕೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲು ಪೂರೈಕೆಯಾಗಿದ್ದ ಕಳಪೆ ಗುಣಮಟ್ಟದ 175 ಕ್ವಿಂಟಲ್‌ ಬೇಳೆ ಬದಲಿಗೆ, ಹೊಸ ಬೇಳೆ ಬಂದಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ನಡೆಯುತ್ತಿದೆ. 

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಅವರು ಇದೇ 2ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೂರೈಕೆಯಾಗಿದ್ದ ಬೇಳೆಯ ಗುಣಮಟ್ಟವನ್ನು ಪರಿಶೀಲಿಸಿದ್ದರು. ಬೇಳೆ ಚೆನ್ನಾಗಿಲ್ಲ ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಅದನ್ನು ವಾಪಸ್‌ ಮಾಡಲಾಗುವುದು ಎಂದು ಹೇಳಿದ್ದರು. 

ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು (ನಾಫೆಡ್‌) ಬೇಳೆಯನ್ನು ಪೂರೈಸಿದೆ. ಜಿಲ್ಲೆಗೆ 291 ಟನ್‌ ಬೇಳೆಯನ್ನು ನಾಫೆಡ್‌ ಕಳುಹಿಸಿದ್ದು, ಸಚಿವರು ಬಂದಿದ್ದಾಗ 113 ಟನ್‌ಗಳಷ್ಟು ಬೇಳೆ ಬಂದಿತ್ತು. ಅಷ್ಟೂ ಬೇಳೆಯನ್ನು ವಾಪಸ್‌ ಕಳುಹಿಸಲಾಗುವುದು ಎಂದು ಸಚಿವರು ಹೇಳಿದ್ದರು. 

‘ಸಚಿವರು ಪರಿಶೀಲನೆ ನಡೆಸಿದ್ದ ಬೇಳೆಯ ಮಾದರಿಯ ಗುಣಮಟ್ಟ ಚೆನ್ನಾಗಿರಲಿಲ್ಲ. ಹಾಗಾಗಿ ವಾಪಸ್‌ ಮಾಡುವುದಾಗಿ ಹೇಳಿದ್ದರು. ನಂತರ ಬಂದಿದ್ದ ಎಲ್ಲ ಬೇಳೆಯನ್ನು ಪರಿಶೀಲಿಸಿದಾಗ, ರೈಲಿನ ಒಂದು ಬೋಗಿಯಲ್ಲಿದ್ದ 175 ಕ್ವಿಂಟಲ್‌ ಬೇಳೆ ಮಾತ್ರ ಕಳಪೆಯಾಗಿದ್ದದು ಕಂಡು ಬಂತು. ಅಷ್ಟು ಬೇಳೆಯನ್ನು ವಾಪಸ್‌ ಕಳುಹಿಸಿದ್ದು, ಗುಣಮಟ್ಟದ ಬೇಳೆ ಬಂದಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲೂ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಆರ್‌.ರಾಚಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಎರಡು ತಿಂಗಳ ಪಡಿತರ ವಿತರಣೆ: ರಾಜ್ಯ ಸರ್ಕಾರದ ವತಿಯಿಂದ ಕಳೆದ ತಿಂಗಳೇ ಏಪ್ರಿಲ್‌ ಮತ್ತು ಮೇ ತಿಂಗಳ ಪಡಿತರವನ್ನು ವಿತರಿಸಿತ್ತು. ಕೇಂದ್ರ ಸರ್ಕಾರದ ಪಡಿತರವನ್ನು ಈಗ ಪೂರೈಸಲಾಗುತ್ತಿದೆ. ಸದ್ಯಕ್ಕೆ ಏಪ್ರಿಲ್‌ ತಿಂಗಳ ಪಡಿತರ ಮಾತ್ರ ಬಂದಿದ್ದು, ಎರಡು ದಿನಗಳಿಂದ ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಕಾರ್ಯ ನಡೆಯುತ್ತಿದೆ.

ಪಡಿತರ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 5 ಕೆಜಿಯಂತೆ ಎರಡು ತಿಂಗಳಿಗೆ 10 ಕೆಜಿ ಅಕ್ಕಿ ಹಾಗೂ ಕಾರ್ಡ್‌ ಒಂದಕ್ಕೆ ಒಂದು ಕೆಜಿ ಬೇಳೆ ನೀಡಲಾಗುತ್ತದೆ. ಎಪಿಎಲ್‌ ಕಾರ್ಡ್‌ದಾರರು 10 ಕೆಜಿ ಖರೀದಿ ಮಾಡಲು ಅವಕಾಶ ಇದ್ದು,  ಕೆಜಿ ₹15 ಪಾವತಿಸಬೇಕು. ಸದ್ಯ ಬೇಳೆ ಒಂದು ತಿಂಗಳಿದ್ದು ಮಾತ್ರ ವಿತರಿಸಲಾಗುತ್ತಿದೆ.

‘ಎರಡು ದಿನಗಳಿಂದ ಎಲ್ಲ ಕಡೆಗಳಲ್ಲಿ ಅಕ್ಕಿ ಮತ್ತು ಬೇಳೆ ವಿತರಿಸಲಾಗುತ್ತಿದೆ. ಎರಡು ತಿಂಗಳ ಅಕ್ಕಿ ಹಾಗೂ ಒಂದು ತಿಂಗಳ ಬೇಳೆ ವಿತರಿಸಲಾಗುತ್ತಿದೆ. ಮೇ ತಿಂಗಳ ಬೇಳೆ ಜೂನ್‌ ತಿಂಗಳಲ್ಲಿ ಪೂರೈಕೆಯಾಗುವ ಸಾಧ್ಯತೆ ಇದೆ’ ಎಂದು ರಾಚಪ್ಪ ಅವರು ಮಾಹಿತಿ ನೀಡಿದರು.

ಪಾಲನೆಯಾಗದ ಅಂತರ ಕಾಯ್ದುಕೊಳ್ಳುವಿಕೆ

ಕೋವಿಡ್‌–19 ತಡೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಸೂಚನೆಯನ್ನೂ ಜಿಲ್ಲಾಡಳಿತ ನೀಡಿದ್ದರೂ, ಬಹುತೇಕ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. 

ಅಂಗಡಿಗಳ ಎದುರು ನಿಗದಿತ ಅಂತರದಲ್ಲಿ ಗುರುತು ಮಾಡಲಾಗಿದ್ದರೂ ಜನರೂ ಅಲ್ಲಿ ನಿಲ್ಲದೆ, ಒತ್ತೊತ್ತಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅಂಗಡಿಯವರು ಹೇಳಿದರೂ ಜನರು ಕೇಳುತ್ತಿಲ್ಲ. 

ಅಂಕಿ ಅಂಶ

2,916 ಕ್ವಿಂಟಲ್‌

ಜಿಲ್ಲೆಗೆ ನಾಫೆಡ್‌ ಪೂರೈಕೆ ಮಾಡಿದ್ದ ಬೇಳೆ

175 ಕ್ವಿಂಟಲ್‌

ಕಳಪೆ ಗುಣಮಟ್ಟದ ಬೇಳೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು