ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ; ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಇವರು

ಜಿಲ್ಲೆಯಾದ್ಯಂತ 30 ಮಂದಿ ಕೊರೊನಾ ಸೈನಿಕರಿಂದ ಸಕ್ರಿಯ ಕಾರ್ಯ
Last Updated 13 ಮೇ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆಯು ಕೋವಿಡ್‌–19 ಮುಕ್ತವಾಗಿರಲು ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ಸ್ವಯಂ ಸೇವಕರ ಬಳಗವೊಂದು, ಒಂದೂವರೆ ತಿಂಗಳಿನಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಿಲ್ಲೆಯಾದ್ಯಂತ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಬಳಗದ ಸದಸ್ಯರೆಲ್ಲ ಕೊರೊನಾ ಸೈನಿಕರು.

ವಾರ್ತಾ ಇಲಾಖೆ, ರೆಡ್‌ ಕ್ರಾಸ್‌ ಹಾಗೂ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಇವರು, ಕೋವಿಡ್‌–19ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ, ಅವರ ಸಂಕಷ್ಟಕ್ಕೆ ನೆರವಾಗುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಕೋವಿಡ್‌–19ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡುವುದಕ್ಕಾಗಿ ವಾರ್ತಾ ಹಾಗೂ ಕಾರ್ಮಿಕ ಇಲಾಖೆಗಳ ಅಡಿಯಲ್ಲಿ ‘ಕೊರೊನಾ ಸೈನಿಕರು’ ಎಂಬ ಹೆಸರಿನಲ್ಲಿ ಸ್ವಯಂ ಸೇವಕರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 57 ಮಂದಿ ನೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ 30 ಮಂದಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನೂ ನೀಡಲಾಗಿದೆ.

ಸೇವೆಯೇ ಗುರಿ: ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು, ಖಾಸಗಿ ಕಂಪನಿಗಳ ಉದ್ಯೋಗಿಗಳು, ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವವರು, ಸಣ್ಣಪುಟ್ಟ ಉದ್ಯಮ ನಡೆಸುವವರು ಎಲ್ಲರೂ ಇದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಜನರ ಸೇವೆ ಮಾಡುವ ಗುರಿಯೊಂದಿಗೆ ಅವರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯಲ್ಲಿ ಸುಳ್ಳು ಸುದ್ದಿಗಳ ಹಾವಳಿ ಕಂಡು ಬಂದಿಲ್ಲ. ಹಾಗಾಗಿ, ಕೊರೊನಾ ಸೈನಿಕರು ಬೇರೆ ಕೆಲಸಗಳತ್ತ ಗಮನ ಹರಿಸಿದ್ದಾರೆ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅಗತ್ಯವಾದ ಔಷಧಿಗಳನ್ನು ಪೂರೈಸುವುದು, ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ ಕಡೆಗಳಲ್ಲಿ ಆಶ್ರಯ ಪಡೆದಿದ್ದ ವಲಸೆ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಪೂರೈಸುವುದು, ಉಚಿತ ಹಾಲು ವಿತರಣೆ, ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು, ಜನರು ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ.

‘ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂ ಸೇವಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ದುಡ್ಡು, ವಾಹನಕ್ಕೆ ಇಂಧನ ಸೇರಿದಂತೆ ಯಾವುದೇ ಖರ್ಚು ವೆಚ್ಚ ಕೊಡುತ್ತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ. ತಮ್ಮದೇ ಸ್ವಂತ ಖರ್ಚಿನಲ್ಲಿ ಓಡಾಡುತ್ತಾ ಕೆಲಸ ಮಾಡುತ್ತಿದ್ದಾರೆ’ ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎ.ರಮೇಶ್‌ ‘ಪ್ರಜಾವಾಣಿ‍’ಗೆ ತಿಳಿಸಿದರು.

‘ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರ ಸೂಚನೆ ಮೇರೆಗೆ ಕೊರೊನಾ ಸೈನಿಕರು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಈಗ ಆರೋಗ್ಯ ಸೇತು ಆ್ಯಪ್‌ ಅನ್ನು ಹೆಚ್ಚು ಹೆಚ್ಚು ಜನರು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಭವನ, ಬಣ್ಣಾರಿ ಸಕ್ಕರೆ ಕಾರ್ಖಾನೆ, ಗಾರ್ಮೆಂಟ್ಸ್‌ ಕಾರ್ಖಾನೆ, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಆ್ಯಪ್‌ ಬಗ್ಗೆ ಜಾಗೃತಿ ಮೂಡಿಸಿ ಡೌನ್‌ಲೋಡ್‌ ಮಾಡಿಸುತ್ತಿದ್ದಾರೆ’ ಎಂದರು.

ಸೇವೆಗೆ ಜನರ ಮೆಚ್ಚುಗೆ

ಕೊರೊನಾ ಸೈನಿಕರ ಕೆಲಸಕ್ಕೆ ಜನತೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಸ್ವಯಂ ಸೇವಕರಾಗಿರುವ ವಿಜಯ್‌ ಎಂಬುವರ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಸೂಚಿಸಿ, ಅವರು ಮಾಡುತ್ತಿರುವ ಕಾರ್ಯಕ್ಕೆ ಅಭಿನಂದಿಸಿದ್ದಾರೆ.

‘ಮೊದಲು ನಮಗೆ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಮಾತ್ರ ಹೇಳಲಾಗಿತ್ತು. ಈಗ ಬೇರೆ ಬೇರೆ ಕೆಲಸಗಳನ್ನು ನೀಡುತ್ತಿದ್ದಾರೆ. ಸದ್ಯ ಆರೋಗ್ಯ ಸೇತು ಆ್ಯಪ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಸ್ವಯಂ ಸೇವಕಿ ದಾಕ್ಷಾಯಿಣಿ ತಿಳಿಸಿದರು.

***

ಜನರು ಸಂಕಷ್ಟದಲ್ಲಿರುವಾಗ ಅವರಿಗೆ ಸಹಾಯ ಮಾಡಬೇಕು ಎಂದು ಅನಿಸಿತು. ಅದಕ್ಕಾಗಿ ನೋಂದಣಿ ಮಾಡಿಕೊಂಡೆ. ನಾನು ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇದೆ

-ದಾಕ್ಷಾಯಿಣಿ, ಸ್ವಯಂ ಸೇವಕಿ

***

ಸಮಾಜಸೇವೆ ಎಂದರೆ ನನಗೆ ಇಷ್ಟ. ಆಸ್ಪತ್ರೆ ಸೇರಿದಂತೆ ಎಲ್ಲ ಕಡೆಯೂ ಕೆಲಸ ಮಾಡಿದ್ದೇವೆ. ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದಕ್ಕೆ ಖುಷಿ ಇದೆ

-ಜೀವನ್‌, ಸ್ವಯಂ ಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT