ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಚಿನ್ನದ ತೇರು ದಾಖಲೆ

ಒಂದೇ ದಿನ 634 ಮಂದಿಯಿಂದ ಸೇವೆ, 2020ರ ನವೆಂಬರ್‌ ಬಳಿಕ ಅತಿ ಹೆಚ್ಚು
Last Updated 16 ಏಪ್ರಿಲ್ 2022, 6:57 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಹಾವಳಿ ಪರಿಸ್ಥಿತಿ ತಿಳಿಯಾದ ನಂತರ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡುವ ಹಾಗೂ ಸ್ವಾಮಿಗೆ ವಿವಿಧ ಸೇವೆಗಳನ್ನು ಅರ್ಪಿಸುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದೆ.

ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಮಾದಪ್ಪನಿಗೆ ಚಿನ್ನದ ತೇರಿನ ಸೇವೆ ಮಾಡಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ.

2020ರ ನವೆಂಬರ್‌ನಲ್ಲಿ ದೀಪಾವಳಿಯ ಸಮಯದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ಬೆಟ್ಟದಲ್ಲಿ ದಾಖಲೆಯ ಪ್ರಮಾಣದಲ್ಲಿ ಅತಿ ಹೆಚ್ಚು ಅಂದರೆ 634 ಭಕ್ತರು ಚಿನ್ನದ ರಥೋತ್ಸವದ ಹರಕೆ ಸಲ್ಲಿಸಿದ್ದಾರೆ.

2020ರ ಶಿವರಾತ್ರಿ ಜಾತ್ರೆಯ ನಂತರ ಕೋವಿಡ್‌ ಕಾರಣಕ್ಕೆ ಬೆಟ್ಟದಲ್ಲಿ ದೊಡ್ಡ ಜಾತ್ರೆಗಳು ನಡೆದಿರಲಿಲ್ಲ. ಅದೇ ವರ್ಷದ ದೀಪಾವಳಿ ಜಾತ್ರೆ ನಡೆಯದಿದ್ದರೂ, ಕೋವಿಡ್‌ ಹಾವಳಿ ಕಡಿಮೆ ಇದ್ದುದರಿಂದ ಚಿನ್ನದ ತೇರು ಸೇರಿದಂತೆ ವಿವಿಧ ಉತ್ಸವಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ಸಂದರ್ಭದಲ್ಲಿ ಒಂದೇ ದಿನ 700 ಭಕ್ತರು ಚಿನ್ನದ ತೇರಿನ ಸೇವೆ ಸಲ್ಲಿಸಿದ್ದರು. ಆ ನಂತರ ಈ ಸಂಖ್ಯೆ 200ಕ್ಕಿಂತ ಹೆಚ್ಚು ದಾಟುತ್ತಿರಲಿಲ್ಲ.

ಕೋವಿಡ್‌ ಮೂರನೇ ಅಲೆಯ ಅಬ್ಬರ ಕಡಿಮೆಯಾದ ನಂತರ, ದೇವಾಲಯದಲ್ಲಿ ಭಕ್ತರಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದ್ದು, ಈ ಬಾರಿ ಶಿವರಾತ್ರಿ, ಯುಗಾದಿ ಜಾತ್ರೆಗಳು ವಿಜೃಂಭಣೆಯಿಂದ ನಡೆದಿವೆ. ಭಕ್ತರ ಸಂಖ್ಯೆಯೂ ಕೋವಿಡ್‌ ಪೂರ್ವ ಸ್ಥಿತಿಗೆ ಮರಳುತ್ತಿದೆ.

‘ವಾರಾಂತ್ಯದಲ್ಲಿ ಭಕ್ತರ ಸಂದಣಿ ಹೆಚ್ಚುತ್ತಿದ್ದು, ಸೇವೆಗಳನ್ನು ಮಾಡಿಸುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಇದೇ 10ರಂದು 547 ಮಂದಿ ಚಿನ್ನದ ತೇರು ಎಳೆಸಿದ್ದರು. ಶುಕ್ರವಾರ ಈ ಸಂಖ್ಯೆ 634ಕ್ಕೆ ಏರಿದೆ. 2020ರ ನವೆಂಬರ್‌ ನಂತರ ಇಷ್ಟು ದೊಡ್ಡ ಸಂಖ್ಯೆಯ ಭಕ್ತರು ಚಿನ್ನದ ತೇರಿನ ಸೇವೆ ಸಲ್ಲಿಸಿರುವುದು ಇದೇ ಮೊದಲು’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

₹21.94 ಲಕ್ಷ ಸಂಗ್ರಹ: ಶುಭ ಶುಕ್ರವಾರದ ಅಂಗವಾಗಿ ರಜಾ ಇದ್ದುದರಿಂದ ಶುಕ್ರವಾರ ಹೆಚ್ಚು ಭಕ್ತರು ಬೆಟ್ಟಕ್ಕೆ ಭೇಟಿ ನೀಡಿದ್ದು, ವಿವಿಧ ಉತ್ಸವಗಳಿಂದ ₹21.94 ಲಕ್ಷ ಸಂಗ್ರಹವಾಗಿದೆ.

ಚಿನ್ನದ ತೇರಿನ ಉತ್ಸವ (634) ಒಂದರಿಂದಲೇ ₹19.02 ಲಕ್ಷ ಆದಾಯ ಬಂದಿದೆ. 561 ಮಂದಿ ಹುಲಿವಾಹನ ಉತ್ಸವ ನಡೆಸಿದ್ದು ₹1.68 ಲಕ್ಷ ಸಂಗ್ರಹವಾಗಿದೆ.325 ಭಕ್ತರು ಬಸವ ವಾಹನ ಉತ್ಸವ ಸೇವೆ ಸಲ್ಲಿಸಿದ್ದು ₹97,500 ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT