ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ರೇಡಿಯೊ ಕಾಲರ್‌ ಅಳವಡಿಸಿದ್ದ ಕಾಡಾನೆ ಸೆರೆ

Last Updated 10 ಜನವರಿ 2023, 13:16 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದುಕೆರೆ ವಲಯದಲ್ಲಿ ಜನವಸತಿ ಪ್ರದೇಶಗಳಲ್ಲಿ ಉಪಟಳ ನೀಡುತ್ತಿದ್ದ, ರೇಡಿಯೊ ಕಾಲರ್ ಅಳವಡಿಸಿರುವ ಕಾಡಾನೆಯನ್ನು ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಎರಡು ವಾರಗಳಿಂದ ಬೀಡುಬಿಟ್ಟಿದ್ದ ಕಾಡಾನೆ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿತ್ತು. ಈ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿ. ಆನೆಯನ್ನು ಸೆರೆ ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದರು.

ಬಂಡೀಪುರದ ಅಧಿಕಾರಿಗಳು ಆನೆ ಸೆರೆ ಹಿಡಿಯುವುದಕ್ಕೆ ಮೇಲಾಧಿಕಾರಿಗಳ ಅನುಮತಿಗಾಗಿ ಡಿ.21ರಂದು ಪತ್ರ ಬರೆದಿದ್ದರು. ಡಿ.30ರಂದು ಅಧಿಕಾರಿಗಳು ಅನುಮತಿ ನೀಡಿದ್ದರು.

ಎರಡು ದಿನಗಳಿಂದ ಆನೆ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ ಮತ್ತು ಭೀಮ ಆನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸಿಂ, ಡಾ. ರಮೇಶ್ ಹಾಗೂ ಡಾ.ಮುಜೀಬ್ ರಹಮಾನ್ ತಂಡವು ಮಂಗಳವಾರ ಗೋಪಾಲಸ್ವಾಮಿ ಬೆಟ್ಟ ವಲಯದ ಕಡೈಕೋಟೆ ಪ್ರದೇಶದಲ್ಲಿ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಯಶಸ್ವಿಯಾದರು. ಆ ಬಳಿಕ ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.

ಕಾರ್ಯಾಚರಣೆಯಲ್ಲಿ ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ ಹಾಗೂ ಮದ್ದೂರು ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್‌, ‘ರೇಡಿಯೊ ಕಾಲರ್‌ ಅಳವಡಿಸಿರುವ ಗಂಡಾನೆ ಚಿಕ್ಕಮಗಳೂರು ಕಡೆಯಿಂದ ಬಂದಿದೆ. ಆನೆಯನ್ನು ಬಂಡೀಪುರದ ರಾಮಪುರ ಸಾಕಾನೆ ಶಿಬಿರದಲ್ಲಿ ಇರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT