ಗುರುವಾರ , ಸೆಪ್ಟೆಂಬರ್ 23, 2021
21 °C
ಕೊಳ್ಳೇಗಾಲ: ನಗರ ವ್ಯಾಪ್ತಿಯಲ್ಲಿನ ಕೆರೆಯಂಗಳದಲ್ಲೇ ಕಟ್ಟಡ, ಜಮೀನು

ಚಾಮರಾಜನಗರ: ಕೆರೆ ಒತ್ತುವರಿ ತೆರವು ದೊಡ್ಡ ಸವಾಲು

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರವೂ ಸೇರಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಒತ್ತುವರಿ ನಡೆದಿದ್ದು; ಇದನ್ನು ತೆರವು ಗೊಳಿಸುವುದೇ ತಾಲ್ಲೂಕು ಆಡಳಿತಕ್ಕೆ ದೊಡ್ಡ ಸವಾಲಾಗಿದೆ. 

ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ, ತಾಲ್ಲೂಕಿನಲ್ಲಿ 208 ಕೆರೆಗಳಿವೆ. ಸೆಪ್ಟೆಂಬರ್‌ ತಿಂಗಳ ಆರಂಭದವರೆಗೆ 202 ಕೆರೆಗಳ ಸರ್ವೆ ನಡೆಸಲಾಗಿದ್ದು, 110 ಕೆರೆಗಳ 193.23 ಎಕರೆ ಪ್ರದೇಶ ಒತ್ತುವರಿಯಾಗಿರುವುದನ್ನು ಗುರು ತಿಸಲಾಗಿದೆ.

ಈ ಪೈಕಿ 58 ಕೆರೆಗಳ 85.39 ಎಕರೆ ಒತ್ತುವರಿಯನ್ನು ಮಾತ್ರ ತೆರವು ಗೊಳಿಸಲಾಗಿದೆ. ಇನ್ನೂ 52 ಕೆರೆಗಳ 107.24 ಎಕರೆಗಳಷ್ಟು ಪ್ರದೇಶದ ಒತ್ತುವರಿ ತೆರವಿಗೆ ಬಾಕಿ ಇದೆ. 

ಇಡೀ ಜಿಲ್ಲೆಯಲ್ಲಿ ಕೆರೆಯಂಗಳದಲ್ಲಿ 300 ಮನೆಗಳು ಹಾಗೂ ಕಟ್ಟಡಗಳು ಇರುವುದನ್ನು ಗುರುತಿಸಲಾಗಿದ್ದು, ಬಹುತೇಕ ಕಟ್ಟಡಗಳು ಕೊಳ್ಳೇಗಾಲ ವ್ಯಾಪ್ತಿಯಲ್ಲೇ ಬರುತ್ತಿವೆ ಎಂದು ಮೂಲಗಳು ತಿಳಿಸಿವೆ. 

ಬೇರೆ ತಾಲ್ಲೂಕುಗಳಲ್ಲಿ ನಡೆದಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ಹೋಲಿಸಿದರೆ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 50ರಷ್ಟು ಪ್ರಗತಿಯಾಗಿ ದೆಯಷ್ಟೇ.

ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಚಿಕ್ಕರಂಗನಾಥನ ಕೆರೆ, ದೊಡ್ಡರಂಗನಾಥನಕೆರೆ, ಕೊಂಗಳ ಕೆರೆ, ಕೆಂಚನಕೆರೆ, ಕೃಷ್ಣಯ್ಯನಕಟ್ಟೆ, ಸಿದ್ಧರ ಕಟ್ಟೆ... ಎಲ್ಲವೂ ಒತ್ತುವರಿಯಾಗಿವೆ. 

‘ಪ್ರಭಾವಿಗಳು ಹಾಗೂ ಸ್ಥಿತಿವಂತರೇ ಇಲ್ಲಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಬೆವರು ಹರಿಸಬೇಕಾಗಿದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಸೈಯದ್‌ ಎಜಾಜ್‌.

ಕೆರೆಗಳು ಮಲಿನ: ತಾಲ್ಲೂಕಿನಲ್ಲಿ ನೀರಿಗೆ ಅಭಾವವಿಲ್ಲ. ನಾಲೆ ನೀರು ಬರುತ್ತಿರುವುದರಿಂದ ಕೆರೆಗಳಲ್ಲಿ ನೀರು ಇರುತ್ತದೆ. ನಾಲೆ ಹಾಗೂ ಕೆರೆಗಳ ನೀರನ್ನೇ ನಂಬಿ ಕೃಷಿ ಮಾಡುವವರು ಹೆಚ್ಚು.

ನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಕೆರೆಗಳು ಮಲಿನಗೊಂಡಿವೆ. ಹೂಳಿನ ಸಮಸ್ಯೆಯೂ ಕಾಡುತ್ತಿದೆ. ಹಾಗಾಗಿ ರೈತರಿಗೆ ಗುಣಮಟ್ಟದ ನೀರು ಸಿಗುತ್ತಿಲ್ಲ. ಹೂಳಿನ ಸಮಸ್ಯೆ ಹಾಗೂ ಒತ್ತುವರಿಯಿಂದಾಗಿ ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕೃಷಿಗೆ ತೊಂದರೆಯಾಗಲಿದೆ ಎಂಬುದು ರೈತರ ಆತಂಕ.

ನಗರದ ದೊಡ್ಡರಂಗನಾಥ, ಚಿಕ್ಕರಂಗನಾಥ ಕೆರೆಗಳು ಮಲಿನಗೊಂಡಿವೆ. ನಗರದ ವಿವಿಧ ಬಡಾವಣೆಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಈ ಕೆರೆಗಳನ್ನು ಸೇರುತ್ತಿದೆ. ಕೆರೆಯಲ್ಲಿ ಹೂಳು ಭಾರಿ ಪ್ರಮಾಣದಲ್ಲಿದೆ. ಕೆರೆಯಂಗಳದ ಎರಡರಿಂದ ಮೂರು ಅಡಿ ಮಾತ್ರ ನೀರು ನಿಲ್ಲುತ್ತಿದೆ. ಜೊಂಡು ಹುಲ್ಲು, ಕಳೆ ಗಿಡಗಳು ನೀರನ್ನು ಆವರಿಸಿದ್ದು, ಕೆರೆಯ ಸೌಂದರ್ಯಕ್ಕೆ ಅಡ್ಡಿಯಾಗಿವೆ. 

ತಾಲ್ಲೂಕಿನ ಪಾಳ್ಯ ಗ್ರಾಮದ ದೊಡ್ಡ ಕೆರೆ, ಮುಳ್ಳೂರಿನ ಕೆರೆ, ಸರಗೂರಿನ ಕೆರೆ, ಕುಂತೂರಿನ ಕೆರೆ ಸೇರಿದಂತೆ ಅನೇಕ ಕೆರೆಗಳನ್ನು ಹೂಳಿನ ಸಮಸ್ಯೆ ಬಾಧಿಸುತ್ತಿದೆ. ಗಿಡ್ಡ ಗಂಟಿಗಳು ಅಂಗಳದಲ್ಲಿ ಬೆಳೆದು ನಿಂತಿವೆ.

ಮಾದರಿ ಕೆರೆ: ಘೋಷಣೆಗಷ್ಟೇ ಸೀಮಿತ
ಕೊಳ್ಳೇಗಾಲದ ಚಿಕ್ಕರಂಗನಾಥ ಕೆರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕ ಎನ್‌.ಮಹೇಶ್‌ ಶಾಸಕರಾಗಿ ಆಯ್ಕೆಯಾದಾಗಿನಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಗತಿಯಾಗಿಲ್ಲ. 

ಕೆರೆಯ ಹೂಳು ತೆಗೆದು, ಒತ್ತುವರಿ ತೆರವುಗೊಳಿಸಿ, ಕೆರೆಯ ಸುತ್ತಲೂ ವಾಯುವಿಹಾರದ ಮಾರ್ಗ, ಬೋಟಿಂಗ್‌ ವ್ಯವಸ್ಥೆ ಸೇರಿದಂತೆ ಪ್ರವಾಸಿಗರನ್ನು ಸೆಳೆಯುವ ಎಲ್ಲ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಶಾಸಕರ ಯೋಚನೆ. ಇದಕ್ಕಾಗಿ ಕ್ರಿಯಾಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಆದರೆ, ಇದೆಲ್ಲವೂ ಕಡತದಲ್ಲೇ ಇದ್ದು, ಯಾವುದೇ ಪ್ರಗತಿಯಾಗಿಲ್ಲ. 

ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪ‍ಡುವ, ತಾಲ್ಲೂಕಿಗೆ ಸೇರಿರುವ ಪಾಳ್ಯ ಕೆರೆಯನ್ನೂ ಅಭಿವೃದ್ಧಿ ಪಡಿಸುವ ಪ್ರಸ್ತಾವವೂ ಇದೆ. ಇದುವರೆಗೂ ಇದು ಕೂಡ ಘೋಷಣೆಯಾಗಿಯಷ್ಟೇ ಉಳಿದಿದೆ.

***

ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಒತ್ತುವರಿ ಮಾಡಿಕೊಂಡವರು ಪ್ರಭಾವಿ ವ್ಯಕ್ತಿಯಾಗಿದ್ದರೂ ತೆರವುಗೊಳಿಸುತ್ತೇವೆ. ಕಾನೂನು ಕ್ರಮ ಕೈಗೊಳ್ಳಲಾಗುವುದು
-ಕುನಾಲ್‌, ತಹಶೀಲ್ದಾರ್‌

***

ಒತ್ತುವರಿಯಾಗಿರುವ ಹಾಗೂ ಮಲಿನಗೊಂಡಿರುವ ಕೆರೆಗಳ ಸಂರಕ್ಷಣೆ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
-ದಶರಥ್‌, ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು