ಶನಿವಾರ, ಮೇ 28, 2022
21 °C
ವಸತಿ ಇಲಾಖೆಯ ಯೋಜನೆಗಳನ್ನು ವಿವರಿಸಿದ ಸಚಿವ ವಿ.ಸೋಮಣ್ಣ

ಚಾಮರಾಜನಗರ: ಕೋವಿಡ್‌ ನಡುವೆ ಸರಳ, ಸಂಭ್ರಮದ ಗಣರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ 3ನೇ ಅಲೆಯ ನಡುವೆ ಜಿಲ್ಲೆಯಾದ್ಯಂತ ಬುಧವಾರ 73ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. 

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿ, ವಿವಿಧ ತಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. 

ಪೊಲೀಸರು, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಸೇರಿದಂತೆ ವಿವಿಧ ತುಕಡಿಗಳ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. 

ರಾಜ್ಯ, ಜಿಲ್ಲೆಯ ಅಭಿವೃದ್ಧಿಗೆ ಬದ್ಧ: ಗಣರಾಜ್ಯೋತ್ಸವದ ಸಂದೇಶ ನೀಡಿದ ಸಚಿವ ಸೋಮಣ್ಣ ಅವರು, ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸ್ಮರಿಸಿದರು. ಕೋವಿಡ್‌ ನಿಯಂತ್ರಣಕ್ಕಾಗಿ ಭಾರತವು ದೇಶೀಯವಾಗಿ ತಯಾರಿಸಿದ ಕೋವಾಕ್ಸಿ, ಕೋವಿಶೀಲ್ಡ್‌ ಲಸಿಕೆ ಹಾಗೂ 100 ಕೋಟಿಗೂ ಅಧಿಕ ಡೋಸ್‌ ನೀಡಿರುವುದನ್ನು ಪ್ರಸ್ತಾಪಿಸಿದರು. 

ನಂತರ ವಸತಿ ಇಲಾಖೆಯು ಕೈಗೊಂಡಿರುವ ಯೋಜನೆಗಳನ್ನು ಉಲ್ಲೇಖಿಸಿದರು. 

’ವಸತಿ ಹಾಗೂ ಮೂಲಸೌಕರ್ಉ ಅಭಿವೃದ್ಧಿ ಕ್ಷೇತ್ರದಲ್ಲಿ ಇಲಾಖೆ ಗಣನೀಯ ಸಾಧನೆ ಮಾಡಿದೆ. ವಸತಿ ಯೋಜನೆ ಅಡಿ ನಮ್ಮ ಸರ್ಕಾರ 2.74 ಲಕ್ಷ ಮನೆಗಳನ್ನು ನಿರ್ಮಿಸಇದ್ದು, ಫಲಾನುಭವಿಗಳಿಗೆ ₹4,467 ಕೋಟಿ ಬಿಡುಗಡೆ ಮಾಡಲಾಗಿದೆ. ನೆರೆ ಹಾವಳಿಯಿಂದ ಹಾನಿಯಾದ 1.74 ಲಕ್ಷ ಮನೆಗಳ ಫಲಾನುಭವಿಗಳ ಖಾತೆಗೆ ₹2,200 ಕೋಟಿ ಪರಿಹಾರ ನೀಡಲಾಗಿದೆ‘ ಎಂದರು. 

’ಸರ್ಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಒಡೆತನದ ಸುಮಾರು 8,626 ಎಕರೆ ಪ್ರದೇಶದ 1,821 ಘೋಷಿತ ಕೊಳಚೆ ಪ್ರದೇಶಗಳ 3.37 ಲಕ್ಷ ಕುಟುಂಬಗಳಿಗೆ ಸ್ವಂತ ಮನೆಯ ಮಾಲೀಕತ್ವದ ಹಕ್ಕನ್ನು ಕ್ರಮಪತ್ರದ ಮೂಲಕ ನೀಡುವ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳಡಿ 2021–22ನೇ ಸಾಲಿಗೆ ಗ್ರಾಮೀಣ ಭಾಗದಲ್ಲಿ 4 ಲಕ್ಷ, ನಗರ ಪ್ರದೇಶಗಳಲ್ಲಿ ಒಂದು ಲಕ್ಷ ಹೊಸ ಮನೆಗಳ ಗುರಿ ಮಂಜೂರು ಮಾಲಾಗಿದೆ‘ ಎಂದರು. 

ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ ಸಚಿವರು, ಕೋವಿಡ್‌ ಪರಿಹಾರ, ಅಮೃತ ಗ್ರಾಮ ಪಂಚಾಯಿತಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲ ಜೀವನ್ ಮಿಷನ್, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮಹನಿ ನೀರಾವರಿ ಯೋಜನೆ, ಪ್ರದಾನ ಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆ, ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆಗಳ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳು ಹಾಗೂ ಬಿಡುಗಡೆ ಮಾಡಿದ ಅನುದಾನಗಳ ವಿವರಗಳನ್ನು ನೀಡಿದರು. 

’ಸವಾಲುಗಳ ನಡುವೆಯೂ ತಮ್ಮೆಲ್ಲರ ಸಹಕಾರದೊಡನೆ ರಾಜ್ಯದ ಸವಾ೯೦ಗೀಣ ಅಭಿವೃದ್ಧಿಯ ಜೊತೆಗೆ ಜಿಲ್ಲೆಯ ಸವ೯ತೋಮುಖ ಅಭಿವೃದ್ಧಿಗೆ ಸಕಾ೯ರ ಕಟಿಬದ್ಧವಾಗಿದ್ದು, ಸ್ವಾತಂತ್ರ್ಯ, ಸಮಾನತೆ, ಸೋದರತ್ವಗಳ ಅಡಿಗಲ್ಲಿನ ಮೇಲೆ ಪ್ರಜಾಸತ್ತಾತ್ಮಕ ಗಣರಾಜ್ಯದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಯಾವುದೇ ಬೇಧ-ಭಾವವಿಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಕೈಜೋಡಿಸೋಣ‘ ಎಂದು ಕರೆ ನೀಡಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭೆ ಅಧ್ಯಕ್ಷೆ ಸಿ.ಎಂ ಆಶಾ, ಉಪಾಧ್ಯಕ್ಷೆ ಪಿ.ಸುಧಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂತಿ೯, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಪಂ ಸಿಇಒ ಕೆ.ಎಂ ಗಾಯತ್ರಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್ ರಾಜ್. ಜಿಲ್ಲಾ ಸಕಾ೯ರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು. 

ಮೂರು ಕಂತಿನಲ್ಲಿ ಅನುದಾನ

’ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ (ಗ್ರಾಮೀಣ) ರಾಜ್ಯದ 18.78 ಲಕ್ಷ ವಸತಿ ರಹಿತರು ಮತ್ತು 6.62 ಲಕ್ಷ ನಿವೇಶನ ರಹಿತರ ಮಾಹಿತಿಯನ್ನು ಆವಾಸ್‌+ ಡೇಟಾಬೇಸ್‌ನಲ್ಲಿ ನಮೂದು ಮಾಡುವ ಪ್ರಸ್ತಾವ ನಾಲ್ಕು ವರ್ಷಗಳಿಂದ ಬಾಕಿ ಇತ್ತು. ಕೇಂದ್ರ ಸರ್ಕಾರ ಈಗ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಇದರಿಂದ 25.40 ಲಕ್ಷ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗಿದೆ‘ ಎಂದು ಸೋಮಣ್ಣ ಹೇಳಿದರು. 

’ರಾಜ್ಯದ ವಸತಿ ಫಲಾನುಭವಿಗಳ ಹಿತದೃಷ್ಟಿಯಿಂದ ಪ್ರಸ್ತುತ ಇರುವ ನಾಲ್ಕು ಕಂತುಗಳ ಬದಲಿಗೆ ಮೂರು ಕಂತುಗಳಲ್ಲಿ ಪೂರ್ಣ ಅನುದಾನ ನೀಡಲು ಹಾಗೂ ಕಾರ್ಯಾದೇಶ ನೀಡುವ ಸಂದರ್ಭದಲ್ಲಿಯೇ ಮೊದಲಿನ ಕಂತಿನ ಅನುದಾನವನ್ನು ಮುಂಗಡವಾಗಿ ಬಿಡುಗಡೆ ಮಾಡಲು ಉದ್ದೇಶಿಸಿದೆ. ಅಲ್ಲದೇ ವಿವಿಧ ವಸತಿ ಯೋಜನೆಗಳಡಿ ಸರ್ಕಾರದ ಸಹಾಯಧನ ಪಡೆದು ಮನೆ ನಿರ್ಮಿಸಿಕೊಲ್ಳುವ ಫಲಾನುಭವಿಗಳ ನಿವೇಶನಕ್ಕೆ ಕಡ್ಡಾಯ ಅಡಮಾನ ನೋಂದಣಿಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು