ಬುಧವಾರ, ಮಾರ್ಚ್ 29, 2023
23 °C
ಚಾಮರಾಜನಗರ: ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದ 16ನೇ ವಾರ್ಡ್‌ ನಾಯಕರ ಬೀದಿ ಜನ

ಕಾವೇರಿ ನೀರಿಗೆ ಆಗ್ರಹಿಸಿ ನಿವಾಸಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ 16ನೇ ವಾರ್ಡ್‌ನ ರೈಲ್ವೆ ಬಡಾವಣೆಯ ನಾಯಕರ ಬೀದಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಬೀದಿಯ ನಿವಾಸಿಗಳು ಶನಿವಾರ ಖಾಲಿ ಕೊಡ ಹಿಡಿದು ದಿಢೀರ್ ಪ್ರತಿಭಟನೆ ನಡೆಸಿದರು.

ನಾಯಕರ ಬೀದಿಯಲ್ಲಿ ಜಮಾಯಿಸಿದ ನಿವಾಸಿಗಳು ಖಾಲಿಕೊಡ ಹಿಡಿದು ನಗರಸಭೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೀದಿಯ ನಿವಾಸಿ ಬುಲೆಟ್ ಚಂದ್ರ ಮಾತನಾಡಿ, ‘12 ವರ್ಷಗಳಿಂದ ರೈಲ್ವೆಯ ಬಡಾವಣೆಯ ನಾಯಕ ಬೀದಿಯಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನೀರು ಬರುತ್ತಿಲ್ಲ. ನಗರಸಭೆಗೆ ನೀರಿನ ಕಂದಾಯವನ್ನು ಕಟ್ಟಲಾಗಿದೆ. ಕಾವೇರಿ ನೀರು ಕೊಡಿಸುವಂತೆ ನಗರಸಭಾ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಒಂದು ತಿಂಗಳಲ್ಲಿ ನೆಪ ಮಾತ್ರಕ್ಕಾಗಿ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದ್ದು, ಅದು ಅವೈಜ್ಞಾನಿಕವಾಗಿದೆ. ಕಾಮಗಾರಿ ಕಳಪೆಯಾಗಿದೆ. ನೀರು ಮಾತ್ರ ಬಿಟ್ಟಿಲ್ಲ. ಬೀದಿಯಲ್ಲಿರುವ ಕೊಳವೆ ಬಾವಿಯ ನೀರನ್ನೇ ಕುಡಿಯಬೇಕಾಗಿದೆ. ಇತ್ತೀಚಿಗೆ ಅಪಾರ ಮಳೆ, ಪ್ರವಾಹದಿಂದ ಕೊಳವೆ ಬಾವಿ ನೀರು ಕಲುಷಿತವಾಗಿದ್ದು, ಅದನ್ನು ಕುಡಿದರೆ ಗಂಟಲು ಕೆರೆತ, ಮೈ–ಕೈ ನೋಯುತ್ತದೆ, ಜ್ವರ ಬರುತ್ತದೆ. ಇದರಿಂದಾಗಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಬೀದಿಗೆ ಕಾವೇರಿ ನೀರು ಪೂರೈಕೆ ಮಾಡಬೇಕು’ ಇಲ್ಲದಿದ್ದರೆ ನಗರಸಭಾ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ನಿವಾಸಿಗಳು ಎಚ್ಚರಿಸಿದರು. 

ವೆಂಕಟೇಶ್, ಸಿದ್ದರಾಜು, ರಾಜಣ್ಣ, ಕಾಳಶಟ್ಟಿ, ಚಿನ್ನಸ್ವಾಮಿ, ಕಾಳನಾಯಕ, ಮಹದೇವನಾಯಕ, ಸೂರಿ, ಕುಮಾರ್, ಗೌರಮ್ಮ, ರಾಜಮ್ಮ, ರೇಖಾ, ಸುಂದ್ರಮ್ಮ, ಚಂದ್ರಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು